ಕನ್ನಡಪ್ರಭ ವಾರ್ತೆ ಬೆಳಗಾವಿ
ಎಐಡಿಎಸ್ಒ ಜಿಲ್ಲಾ ಸಂಚಾಲಕ ಮಹಾಂತೇಶ ಬಿಳೂರ ಮಾತನಾಡಿ, ಮಾ.23,1931 ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿದ ದಿನ. ನಗುನಗುತ್ತ ಗಲ್ಲಿಗೇರಿದ ಮೂವರು ಅಪ್ರತಿಮ ದೇಶಪ್ರೇಮಿಗಳಿಗಾಗಿ ದೇಶ ಕಣ್ಣೀರಿಟ್ಟ ದಿನ. ಭಗತ್ ಸಿಂಗ್‌ರ ವಿಚಾರಗಳನ್ನು ಈಡೇರಿಸಲು ಸಾವಿರಾರು ಜನ ಪ್ರಾಣ ತ್ಯಾಗಕ್ಕೆ ಅಂದು ಸಿದ್ಧರಾಗಿ ಬೀದಿಗಿಳಿದರು. ಸ್ವಾತಂತ್ರ್ಯಾ ನಂತರ ಭಾರತ ದೇಶದ ಪ್ರತಿಯೊಂದು ಮಗುವಿಗೂ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕೊಡುವುದು ಸರ್ಕಾರದ ಜವಾಬ್ದಾರಿಯಾಗಬೇಕು ಎಂಬುದು ಅವರ ಕನಸಾಗಿತ್ತು. ಆದರೆ, ಇಂದಿನ ಎಲ್ಲ ಸರ್ಕಾರಗಳು ಬಡ, ರೈತ, ಕೂಲಿ ಕಾರ್ಮಿಕರ ಮಕ್ಕಳಿಂದ ಶಿಕ್ಷಣವನ್ನು ಕಸಿಯುವ ಹುನ್ನಾರ ನಡೆಸುತ್ತಿವೆ. ಮ್ಯಾಗ್ನೆಟ್ ಎಂಬ ನೆಪದಲ್ಲಿ ಸರ್ಕಾರ ಊರಿನ ಶಾಲೆಗಳನ್ನು ವಿಲೀನಗೊಳಿಸಲು ಮತ್ತು ಹಂತ ಹಂತವಾಗಿ ಮುಚ್ಚಲು ಪ್ರಯತ್ನಿಸುತ್ತಿದೆ. ಇದನ್ನು ವಿರೋಧಿಸಿ ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಬೇಕು ಎಂದು ಕರೆ ನೀಡಿದರು.
ಕೆಪಿಎಸ್ ಮ್ಯಾಗ್ನೆಟ್ ನೀತಿಯು ಭಗತ್ ಸಿಂಗ್ ಅವರು ಯಾವ ಉದ್ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರೆಂದರೆ ಮನುಷ್ಯನಿಂದ ಮನುಷ್ಯನ ಶೋಷಣೆಯಿಲ್ಲದ ಸಮಾಜ.ಆ ದೃಷ್ಟಿಕೋನದ ಮೇಲಿನ ನೇರ ದಾಳಿಯಾಗಿದೆ. ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವ ಬದಲು ಅನುಕೂಲಕ್ಕೆ ತಕ್ಕಂತೆ ಬಳಸುವ ಸಂಪನ್ಮೂಲ ಎಂದು ನೋಡುವ ಮೂಲಕ, ರಾಜ್ಯ ಸರ್ಕಾರ ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇಲ್ಲಿ ಕೇವಲ ಕೆಲವು ಶಾಲಾ ಕೇಂದ್ರಗಳು ಮಾತ್ರ ಉಳಿಯುತ್ತವೆ. ಮತ್ತು ನಮ್ಮ ಹಳ್ಳಿಯ ಶಾಲೆಗಳು ನಶಿಸಿಹೋಗುತ್ತವೆ. ಅವರ ಎಚ್ಚರಿಕೆಯನ್ನು ನಾವು ನೆನಪಿಸಿಕೊಳ್ಳಲೇಬೇಕು: ಜನರು ಸಾಮಾನ್ಯವಾಗಿ ಸ್ಥಾಪಿತ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಾರೆ ಮತ್ತು ಬದಲಾವಣೆಯ ಕಲ್ಪನೆಯನ್ನು ಕೇಳಿಯೇ ನಡುಗುತ್ತಾರೆ. ಈ ಜಡ ಮನೋಭಾವದ ಜಾಗದಲ್ಲಿ ಕ್ರಾಂತಿಕಾರಿ ಚೈತನ್ಯ ಬರಬೇಕಿದೆ. ನಮ್ಮ ಶಾಲೆಗಳ ಮುಚ್ಚುವಿಕೆಗೆ ಒಗ್ಗಿಕೊಳ್ಳಲು ನಾವು ನಿರಾಕರಿಸುತ್ತೇವೆ. ಆಡಳಿತಾತ್ಮಕ ಅನುಕೂಲಕ್ಕಾಗಿ ನಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಡುವ ಈ ಜಡ ಮನೋಭಾವವನ್ನು ನಾವು ಒಪ್ಪುವುದಿಲ್ಲ ಎಂದರು.ಕೆ.ಪಿ.ಎಸ್ ಮ್ಯಾಗ್ನೆಟ್ ನೀತಿಯನ್ನು ಹಿಂಪಡೆಯುವವರೆಗೆ ಮತ್ತು ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವವರೆಗೆ ನಾವು ಹಿಂದೆ ಸರಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಬೆಳಗಾವಿ ಜಿಲ್ಲಾ ಸಮಿತಿ ಅಧ್ಯಕ್ಷ ರಾಮು ಹಣಗಂಡಿ, ಹೊನ್ನಿಹಾಳ ಶಾಲೆಯ ಎಸ್‌ಡಿಎಂಸಿ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಉಪಾಧ್ಯಕ್ಷ ರೇಷ್ಮಾ, ಸದಸ್ಯೆ ಗೌರಿ ಉಣಕಲ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.