ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಹೊತ್ತು ಬೇಡಿಕೆಗಳ ಬಗ್ಗೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿಗೆ ಮನವಿ ಪತ್ರ ಸಲ್ಲಿಸಿದರು. ತಿದ್ದುಪಡಿ ಮಸೂದೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಗಳ ಗೌರವಕ್ಕೆ ಹಾನಿ ಮಾಡುವಂತಿದೆ. ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಸ್ವಯಂ ನಿರ್ಣಯದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಸಂವಿಧಾನ ನೀಡಿರುವ ರಕ್ಷಣೆಗಳಿಗೆ ಧಕ್ಕೆಯನ್ನುಂಟು ಮಾಡುವ ಅಂಶಗಳಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ತಿದ್ದುಪಡಿ ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಸರ್ಕಾರ 2017ರಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಜ್ಯ ನೀತಿ ರೂಪಿಸಿದೆ. ಇದರಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ಪೂರ್ಣ ನಾಗರಿಕರಾಗಿ ಒಳಗೊಳ್ಳಲು, ಲಿಂಗತ್ವವನ್ನು ಸ್ವಯಂ ಗುರುತಿಸುವ ವ್ಯವಸ್ಥೆಯನ್ನು ಒದಗಿಸುವುದಾಗಿ ಮತ್ತು ಲಿಂಗತ್ವದ ಆಧಾರದ ಮೇಲೆ ತಾರತಮ್ಯಕ್ಕೊಳಗಾಗದ ಹಕ್ಕು, ಸಾಮಾಜಿಕ ಸ್ಥಳ ಮತ್ತು ಸಂಪನ್ಮೂಲಗಳಿಗೆ ಪ್ರವೇಶ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಸಂವಿಧಾನಿಕ ಹಕ್ಕುಗಳನ್ನು ಅನುಭವಿಸಲು ಸಬಲೀಕರಿಸುವುದಾಗಿ ಭರವಸೆ ನೀಡಿತ್ತು. ಈಗ ಮಾಡಿರುವ ತಿದ್ದುಪಡಿ ರಾಜ್ಯದ ಈ ಲಿಂಗತ್ವ ಅಲ್ಪಸಂಖ್ಯಾತ ನೀತಿಯಲ್ಲಿ ಉಲ್ಲೇಖಿಸಿದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.ಈ ವೇಳೆ ಚಿನ್ನು ತಳವಾರ, ಐನಾ ಶೇಖ್, ತಾನಾಜಿ ಸಾವಂತ, ಸಂಪತ ದೊಡಮನಿ ಇತರರಿದ್ದರು.