ಕನ್ನಡಪ್ರಭ ವಾರ್ತೆ, ತುಮಕೂರು0ಬರೆದಂತೆ ಬದುಕುವುದು ಎಲ್ಲರಿಗೂ ಸಾಧ್ಯವಿಲ್ಲ, ಆದರೆ ಡಿವಿಜಿ ಅವರು ಅಂತಹ ಅಪರೂಪದ ಸಾಧಕರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಪತ್ರಿಕೋದ್ಯಮವನ್ನು ಕೇವಲ ವೃತ್ತಿಯನ್ನಾಗಿ ಮಾಡಿಕೊಳ್ಳದೆ, ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡುವ ಸೇವೆಯನ್ನಾಗಿ ಅವರು ಪರಿಗಣಿಸಿದ್ದರು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್ ಜಮ್ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕ, ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಇವುಗಳ ಸಹಯೋಗದಲ್ಲಿ ಮಂಗಳವಾರದಂದು ಆಯೋಜಿಸಲಾಗಿದ್ದ ಡಿವಿಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಡಿವಿಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಡಿವಿಜಿಯವರ ತತ್ವಗಳು ಯುವಜನರ ಪಾಲಿಗೆ ಜ್ಞಾನ ತುಂಬುವ ದಾರಿದೀಪಗಳಾಗಿವೆ. ವಸ್ತುನಿಷ್ಠವಾಗಿ ಸಮಾಜಕ್ಕೆ ಮಾಹಿತಿ ನೀಡುವ ವಿಷಯದಲ್ಲಿ ಡಿವಿಜಿಯವರು ನಂಬಿದ್ದ ತತ್ವಗಳು ಇಂದಿನ ಮಾಧ್ಯಮಗಳಿಗೆ ಮಾರ್ಗದರ್ಶಿಸೂತ್ರಗಳಾಗಿವೆ. ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಸಿಬಂತಿ ಪದ್ಮನಾಭ ಕೆ. ವಿ. ಮಾತನಾಡಿ, ಡಿವಿಜಿಯವರು ಪತ್ರಿಕಾ ಸ್ವಾತಂತ್ರ್ಯ ಪರವಾದ ನಿಲುವು ಹೊಂದಿದ್ದರು. ಸಾಮಾನ್ಯ ಪ್ರಜೆಗಿಂತ ಹೆಚ್ಚಿನ ಸ್ಥಾನಮಾನವೇನೂ ಪತ್ರಕರ್ತನಿಗೆ ಬೇಕಾಗಿಲ್ಲ, ಆದರೆ ಅದಕ್ಕಿಂತ ಕಡಿಮೆಯೂ ಇರಬಾರದು ಎಂದು ನಂಬಿದ್ದರು. ಆದರೆ ಆ ಕಾರಣಕ್ಕೆ ಪತ್ರಕರ್ತರು ತಾವು ಸಮಾಜದ ಇತರರಿಗಿಂತ ಹೆಚ್ಚಿನವರೆಂದು ಭಾವಿಸಬಾರದೆಂದು ಡಿವಿಜಿ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದರು ಎಂದರು.
ಕಾರ್ಯಕ್ರಮದಲ್ಲಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ. ಡಾ. ಅಣ್ಣಮ್ಮ, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ, ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್, ಪದಾಧಿಕಾರಿಗಳು, ಹಿರಿಯ ಪತ್ರಕರ್ತರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.