ಯಲಬುರ್ಗಾ: ಕನ್ನಡದ ಖ್ಯಾತ ಚಿಂತಕ,ಹಿರಿಯ ಸಾಹಿತಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಡಿವಿಜಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಿದೆ ಎಂದು ತಾಳಿಕೋಟಿ ವಿಭೂತಿಮಠದ ಶ್ರೀ ಮಹಾಂತ ದೇವರು ಹೇಳಿದರು.
ಡಿವಿಜಿ ಪತ್ರಿಕೋದ್ಯಮವನ್ನು ಕೇವಲ ವೃತ್ತಿಯೆಂದು ನೋಡದೇ,ಸಮಾಜದ ಹಿತಾಸಕ್ತಿ ಕಾಪಾಡುವ ಮಹತ್ತರ ಸೇವೆಯೆಂದು ಪರಿಗಣಿಸಿದರು.ಪತ್ರಕರ್ತರು ನಿಷ್ಠೆ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂಬ ತತ್ವ ಪ್ರತಿಪಾದಿಸಿದರು. ಸಮಾಜದ ಸಮಸ್ಯೆಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರು ಪ್ರಮುಖ ಪಾತ್ರವಹಿಸುತ್ತಾರೆ ಎಂಬುದನ್ನು ತಮ್ಮ ಬರಹಗಳು ಮತ್ತು ಚಿಂತನೆಗಳ ಮೂಲಕ ಸ್ಪಷ್ಟಪಡಿಸಿದರು.
ಪತ್ರಕರ್ತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದಲೇ ಪತ್ರಕರ್ತರ ಸಂಘಟನೆ ಸ್ಥಾಪನೆಗೆ ಮುಂದಾಗಿ, ನಂತರದಲ್ಲಿ ರಾಜ್ಯ ಮಟ್ಟದಲ್ಲಿ ಬೆಳೆಯುವಂತೆ ಮಾಡಿದ್ದು ಅವರ ದೂರದೃಷ್ಟಿ ತೋರಿಸುತ್ತದೆ.ಇದರ ಫಲವಾಗಿ ಇಂದು ಸಾವಿರಾರು ಪತ್ರಕರ್ತರು ಸಂಘಟಿತವಾಗಿ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳುವಂತಾಗಿದೆ. ಡಿವಿಜಿ ಪತ್ರಿಕೋದ್ಯಮದಲ್ಲಿ ನೈತಿಕತೆ, ಸತ್ಯನಿಷ್ಠೆ ಮತ್ತು ಸಾರ್ವಜನಿಕ ಹೊಣೆಗಾರಿಕೆಗೆ ಆದ್ಯತೆ ನೀಡಿದರು. ಅವರ ಆದರ್ಶ ಇಂದಿಗೂ ಪತ್ರಕರ್ತರಿಗೆ ಮಾರ್ಗದರ್ಶಕವಾಗಿದ್ದು, ಪತ್ರಿಕೋದ್ಯಮದ ಗೌರವ ಉಳಿಸಲು ಪ್ರೇರಣೆಯಾಗಿವೆ. ಕನ್ನಡ ಸಾಹಿತ್ಯ, ಸಮಾಜ ಚಿಂತನೆ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಚಿಂತನೆ ಮತ್ತು ಆದರ್ಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿವೆ ಎಂದರು.ಸಂಘದ ಗೌರವಾಧ್ಯಕ್ಷ ಇಮಾಮ್ ಸಂಕನೂರು ಮಾತನಾಡಿದರು.ಸಂಘದ ತಾಲೂಕಾಧ್ಯಕ್ಷ ಮಲ್ಲು ಮಾಟರಂಗಿ ಅಧ್ಯಕ್ಷತೆ ವಹಿಸಿದ್ದರು.