ಧಾರವಾಡ, ಅಳ್ನಾವರ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಧಾರವಾಡದಲ್ಲೂ ಧಾರಾಕಾರಣ ಮಳೆ ಸುರಿದಿದ್ದು ಸಾಕಷ್ಟು ಆವಾಂತರ ಸೃಷ್ಟಿಸಿತು. ನವಲಗುಂದ ತಾಲೂಕಿನಲ್ಲಿ 18 ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು.
ಹುಬ್ಬಳ್ಳಿ:
ಜಿಲ್ಲಾದ್ಯಂತ ಮಂಗಳವಾರ ಗುಡುಗು ಸಿಡಿಲಿನೊಂದಿಗೆ ಭರ್ಜರಿ ಮಳೆ ಸುರಿದಿದ್ದು, ಕಲಘಟಗಿ ತಾಲೂಕಿನಲ್ಲಿ ರಸ್ತೆ ಮೇಲೆ ರಾಶಿ ರಾಶಿ ಆಲಿಕಲ್ಲು ಬಿದ್ದಿವೆ. ಇದರಿಂದ ಕಾಶ್ಮೀರದಲ್ಲಿ ವಾತಾವರಣ ಸೃಷ್ಟಿಯಾಗಿದೆ. ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು ನವಲಗುಂದ ತಾಲೂಕಿನ ದಾಟನಾಳ ಗ್ರಾಮದಲ್ಲಿ ಸಿಡಿಲು ಬಡಿದು ಎಮ್ಮೆ ಮೃತಪಟ್ಟಿದೆ.
ಬಿಸಿಲಿನ ಬೇಗೆಯಿಂದ ಬೆದ್ದಿದ್ದ ಜನರಿಗೆ ಮಳೆ ತಂಪೆರೆದಿದೆ. ಬೆಳಗ್ಗೆಯಿಂದ ತೀವ್ರ ಬಿಸಿಲಿದ್ದರು ಮಧ್ಯಾಹ್ನ 2ರ ಬಳಿಕ ಸಣ್ಣದಾಗಿ ಮೋಡ ಕವಿದು ಶುರುವಾದ ಮಳೆ ಕೆಲ ಹೊತ್ತಿನಲ್ಲಿ ರಭಸತೆ ಪಡೆಯಿತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ರಸ್ತೆ ಮೇಲೆ ನೀರು ಹರಿಯಿತು. ಮೋಡವೆಲ್ಲ ಕಪ್ಪು ಬಣ್ಣಕ್ಕೆ ತಿರುಗಿ ಮುಸ್ಸಂಜೆಯಾದಂತಾಯಿತು. ಹುಬ್ಬಳ್ಳಿಯ ದಾಜಿಬಾನ್‌ಪೇಟೆ, ಆನಂದನಗರ, ಮಂಟೂರ ರಸ್ತೆ ಸೇರಿದಂತೆ ತೆಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತು. ಚರಂಡಿಗಳೆಲ್ಲ ತುಂಬಿ ಅದರಲ್ಲಿನ ಕೊಳಚೆ ರಸ್ತೆಯ ಮೇಲೆ ಹರಿಯಿತು. ಬೈಕ್ ಸವಾರರು ಹರಸಾಹಸ ಪಡುತ್ತಾ ತೆರಳಿದರು. ಮಳೆ ನೀರಿನಲ್ಲಿ ಮಾರಾಟಕ್ಕೆ ಇಟ್ಟಿದ್ದ ತರಕಾರಿ ತೇಲಿ ಹೋಯಿತು.
ಧಾರವಾಡ, ಅಳ್ನಾವರ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಧಾರವಾಡದಲ್ಲೂ ಧಾರಾಕಾರಣ ಮಳೆ ಸುರಿದಿದ್ದು ಸಾಕಷ್ಟು ಆವಾಂತರ ಸೃಷ್ಟಿಸಿತು. ನವಲಗುಂದ ತಾಲೂಕಿನಲ್ಲಿ 18 ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು.
ಕಾಶ್ಮೀರದ ಅನುಭವ:
ಹುಬ್ಬಳ್ಳಿ-ಧಾರವಾಡದಲ್ಲಿ ಈ ಮಲೆನಾಡಿನ ವಾತಾವರಣ ಸೃಷ್ಟಿಸಿದರೆ, ಕಲಘಟಗಿ, ಹುಬ್ಬಳ್ಳಿ, ಕುಂದಗೋಳ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಸುರಿದ ಆಲಿಕಲ್ಲು ಮಳೆ ಕಾಶ್ಮೀರದ ವಾತಾವರಣ ಸೃಷ್ಟಿಸಿತು. ಕಲಘಟಗಿ ತಾಲೂಕಿನ ಕಲಘಟಗಿ, ಮಾಚಾಪುರ, ಮಿಶ್ರಿಕೋಟಿ, ಕುಂದಗೋಳ ತಾಲೂಕಿನ ಬೆಟದೂರ ಸೇರಿದಂತೆ ಹಲವೆಡೆ ಆಲಿಕಲ್ಲು ರಾಶಿ ರಾಶಿ ಬಿದ್ದಿದ್ದು ಕಾಶ್ಮೀರದ ಹಿಮದಂತೆ ಕಾಣಿಸಿತು. ಮನೆಯ ಮೇಲ್ಚಾವಣಿ ಆಲಿಕಲ್ಲು ರಾಶಿಯಿಂದ ಬಿಳಿ ಬಣ್ಣಕ್ಕೆ ತಿರುಗಿತ್ತು. ನಿರಂತರವಾಗಿ ಆಲಿಕಲ್ಲು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು. ಹೀಗಾಗಿ ಮಳೆ ನಿಲ್ಲುವರೆಗೂ ರಸ್ತೆ ಬಳಿಯೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಲಘಟಗಿ ತರಕಾರಿ ಮಾರುಕಟ್ಟೆಯಲ್ಲಿ ಮಳೆ ನೀರಿನ ರಭಸಕ್ಕೆ ತರಕಾರಿ ಹಾಗೂ ಹಲವು ದವಸ ಧಾನ್ಯಗಳು ಕೊಚ್ಚಿ ಹೋದವು. ಮಳೆಯಿಂದಾಗಿ ಕಲಘಟಗಿ ತಾಲೂಕಿನಲ್ಲಿ 2 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.