ಬಳ್ಳಾರಿ: ಗ್ರಾಮೀಣರಲ್ಲಿ ಆರೋಗ್ಯದ ಬಗೆಗಿನ ನಿಷ್ಕಾಳಜಿ, ಮೂಢನಂಬಿಕೆಗಳು ಗಾಢವಾಗಿದ್ದು ಜನರಲ್ಲಿ ಜಾಗೃತಿ ಮೂಡಿಸಿ ಅವರ ಆರೋಗ್ಯ ಸುರಕ್ಷತೆಯ ಕಡೆ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಸಿರುಗುಪ್ಪ ತಾಲೂಕು ಅಧ್ಯಕ್ಷ ಡಾ. ಅಬ್ದುಲ್ ಜಲೀಲ್ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಕಡೆಗಣನೆ ಮತ್ತು ಅಜ್ಞಾನದಿಂದ ಉಂಟಾಗುವ ಮೂಢನಂಬಿಕೆಗಳು ಇನ್ನೂ ವ್ಯಾಪಕವಾಗಿ ಕಾಣಿಸುತ್ತಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಕಂಡಿದ್ದರೂ ಗ್ರಾಮೀಣ ಜನರಲ್ಲಿ ಆರೋಗ್ಯ ಜಾಗೃತಿ ಸಮರ್ಪಕವಾಗಿ ಬೆಳೆಯದಿರುವುದು ವಿಷಾದಕರ ಸಂಗತಿ. ಸಣ್ಣ ರೋಗಗಳನ್ನು ಲೆಕ್ಕಿಸದೇ ಬಿಡುವುದು, ವೈದ್ಯರನ್ನು ಭೇಟಿ ಮಾಡಲು ತಡಮಾಡುವುದು ಇವು ಸಾಮಾನ್ಯ ಘಟನೆಗಳಾಗಿವೆ. ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುವುದರಿಂದ ಮಾತ್ರ ಗ್ರಾಮೀಣರು ಆರೋಗ್ಯದ ಕಡೆ ಗಮನ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅತಿಥಿಯಾಗಿ ಭಾಗವಹಿಸಿದ್ದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಅವರು ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವೈದ್ಯರ ಕೊಡುಗೆಯೂ ಇದೆ. ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನೂರಾರು ಕಾರ್ಯಕ್ರಮಗಳನ್ನು ವೈದ್ಯ ಡಾ. ಮಧುಸೂದನ್ ಕಾರಿಗನೂರು ಅವರು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ವೈದ್ಯಕೀಯ ಸಂಘಟನೆಗಳು ಸೇರಿದಂತೆ ಇತರೆ ಸಂಘ ಸಂಸ್ಥೆಗಳೂ ಜನರಲ್ಲಿ ಅರಿವು ಮೂಡಿಸುವ ಕೆಲಸದಲ್ಲಿ ಹೆಚ್ಚು ಸಕ್ರೀಯವಾಗಿ ತೊಡಗಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಿರುಗುಪ್ಪ ಘಟಕದ ಅಧ್ಯಕ್ಷ ಡಾ. ಮಧುಸೂದನ್ ಕಾರಿಗನೂರು ಅವರು, ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯ ಚಟುವಟಿಕೆಗೆ ಮಾತ್ರ ಸೀಮಿತವಾಗದೆ ಸಮಾಜದ ಆರೋಗ್ಯ ಮತ್ತು ಸಾಮಾಜಿಕ ಜಾಗೃತಿಗೂ ಶ್ರಮಿಸುತ್ತಿದೆ ಎಂದು ತಿಳಿಸಿದರು.