ಡಿವಿಜಿ ಬರಹಗಳು ಮನುಜನ ಬದುಕಿಗೆ ದಿಕ್ಕು ತೋರಿಸಿವೆ

KannadaprabhaNewsNetwork |  
Published : Mar 19, 2026, 01:30 AM IST
ಸರಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಪತ್ರಕರ್ತರ ಸಂಘದಿಂದ ಡಿ.ವಿ.ಗುಂಡಪ್ಪ ಜನ್ಮದಿನಾಚರಣೆ  | Kannada Prabha

ಸಾರಾಂಶ

ಮೆಟ್ರಿಕ್ ಫೇಲ್ ಆಗಿದ್ದ ಡಿ.ವಿ.ಗುಂಡಪ್ಪನವರು ಕನ್ನಡ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿ ಆಧುನಿಕ ಸರ್ವಜ್ಞ ಎನಿಸಿಕೊಂಡರೆ, ಪತ್ರಿಕೋದ್ಯಮದಲ್ಲಿನ ಅವರ ಸಾಧನೆಗೆ ಕನ್ನಡ ಪತ್ರಿಕೋದ್ಯಮದ ಭೀಷ್ಮ ಎಂದು ಕರೆಸಿಕೊಳ್ಳುವಂತೆ ಬೆಳೆದದ್ದು ನಿಜಕ್ಕೂ ಆದರ್ಶನೀಯ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಸವರಾಜಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮೆಟ್ರಿಕ್ ಫೇಲ್ ಆಗಿದ್ದ ಡಿ.ವಿ.ಗುಂಡಪ್ಪನವರು ಕನ್ನಡ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿ ಆಧುನಿಕ ಸರ್ವಜ್ಞ ಎನಿಸಿಕೊಂಡರೆ, ಪತ್ರಿಕೋದ್ಯಮದಲ್ಲಿನ ಅವರ ಸಾಧನೆಗೆ ಕನ್ನಡ ಪತ್ರಿಕೋದ್ಯಮದ ಭೀಷ್ಮ ಎಂದು ಕರೆಸಿಕೊಳ್ಳುವಂತೆ ಬೆಳೆದದ್ದು ನಿಜಕ್ಕೂ ಆದರ್ಶನೀಯ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಸವರಾಜಪ್ಪ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ, ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಸಹಯೋಗದೊಂದಿಗೆ ಪತ್ರಕರ್ತರ ಸಂಘದ ಸಂಸ್ಥಾಪಕ ಡಿ.ವಿ.ಗುಂಡಪ್ಪನವರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಿವಿಜಿ ಅವರ ಬರಹಗಳು ಮನುಜನ ಬದುಕಿಗೆ ದಿಕ್ಕು ತೋರಿಸುವಂತಿವೆ. ಇಂದಿನ ಪತ್ರಕರ್ತರು ಅವರ ಆದರ್ಶಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ನೈತಿಕತೆ ಬಲಪಡಿಸುತ್ತದೆ ಎಂದರು. ಡಿ.ವಿ.ಜಿ ಶಿಕ್ಷಣದಲ್ಲಿ ಹೆಚ್ಚಿನ ಪದವಿಗಳನ್ನು ಪಡೆಯದಿದ್ದರೂ, ಸ್ವಾಧ್ಯಯನದ ಮೂಲಕ ಅಪಾರ ಜ್ಞಾನವನ್ನು ಸಂಪಾದಿಸಿ, ತಮ್ಮ ವೃತ್ತಿಜೀವನವನ್ನು ಶಿಕ್ಷಕರಾಗಿ ಆರಂಭಿಸಿದರು. ನಂತರ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶಿಸಿ ಭಾರತಿ ಮತ್ತು ಸುಮತಿ ಮೊದಲಾದ ಪತ್ರಿಕೆಗಳನ್ನು ಆರಂಭಿಸುವ ಮೂಲಕ ಜನರಲ್ಲಿ ಸಾಮಾಜಿಕ, ಸಾಂಸ್ಕೃತಿಕ ಜಾಗೃತಿ ಮೂಡಿಸಿದರು. ಪ್ರಕಾಶನ ಸಂಸ್ಥೆ ಸ್ಥಾಪಿಸಿ ಸಾಹಿತ್ಯ ಪ್ರಸಾರದಲ್ಲಿ ಪ್ರಮುಖಪಾತ್ರ ವಹಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ, ಇಂಗ್ಲಿಷ್‌ ಹಾಗೂ ಸಂಸ್ಕೃತ ಭಾಷೆಗಳಲ್ಲಿ ೬೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಅವರ ಅನೇಕ ಕೃತಿಗಳು ಇಂದಿಗೂ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆದಿವೆ. ವಿಶೇಷವಾಗಿ ಮಂಕುತಿಮ್ಮನ ಕಗ್ಗ ಮೂಲಕ ಅವರು ಜನಮನಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದು, ಬದುಕಿನ ತತ್ವಗಳನ್ನು ಸರಳವಾಗಿ ವಿವರಿಸಿದ್ದಾರೆ ಎಂದರು.ಡಿ.ವಿ.ಜಿ ಅವರು ತಮ್ಮ ವೃತ್ತಿಯಿಂದ ಗಳಿಸಿದ ಹಣವನ್ನು ವೈಯಕ್ತಿಕ ಪ್ರಯೋಜನಕ್ಕೆ ಮಾತ್ರ ಸೀಮಿತಗೊಳಿಸದೇ, ಸಾಮಾಜಿಕ ಸೇವೆಗೆ ಮೀಸಲಿಟ್ಟು ಜನಹಿತ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಅವರ ಜೀವನಶೈಲಿ ಸರಳತೆ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗೆ ಮಾದರಿಯಾಗಿದೆ. ಅವರ ಆಳವಾದ ಜ್ಞಾನ ಮತ್ತು ಸರಳ ಮಾತಿನ ಶೈಲಿಯಿಂದ ಅವರಿಗೆ ಆಧುನಿಕ ಸರ್ವಜ್ಞ ಎಂಬ ಬಿರುದು ದೊರೆತಿದೆ ಎಂದರು.ಪ್ರಾಂಶುಪಾಲ ಡಾ. ಶಶಿಕುಮಾರ್.ಎಚ್.ಸಿ ಮಾತನಾಡಿ ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಹೆಚ್ಚಿನ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಹೆಚ್ಚು ಸಹಾಯಕವಾಗುತ್ತದೆ. ನಾನು ಕೂಡ ನಿತ್ಯ ಪತ್ರಿಕೆಗಳಲ್ಲಿನ ಸುದ್ದಿ ಮತ್ತು ಸಂಪಾದಕೀಯ ವಿಭಾಗ ಓದುತ್ತಿರುತ್ತೇನೆ ಎಂದರು.ಶಾಂತಿವೀರ ಗೋಪಾಲಗೌಡ ಅವರ ವ್ಯಕ್ತಿತ್ವದ ಪುಸ್ತಕಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನೀಡಲಾಯಿತು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ದಯಾನಂದ ಟಿ.ಎಸ್, ಪ್ರಧಾನಕಾರ್ಯದರ್ಶಿ ಸಿದ್ದೇಶ್ವರ್, ಉಪಾಧ್ಯಕ್ಷ ಪ್ರಶಾಂತ್, ಖಜಾಂಚಿ ಕುಮಾರಸ್ವಾಮಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ.ಸಿ.ಜಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಹಣಮಂತ ಕಾಂಬಳೆ, ಕನ್ನಡ ವಿಭಾಗದ ಮುಖ್ಯಸ್ಥೆ ಸ್ಮಿತಾ, ಸಮಾಜ ಕಾರ್ಯವಿಭಾಗದ ಗಂಗಾಧರ್ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಳೆನರಸೀಪುರದಲ್ಲಿ ಯುಗಾದಿ ಹಬ್ಬದ ವ್ಯಾಪಾರ ಬಲು ಜೋರು
ಅವಧಿ ಮುಗಿದ ಅಹಾರ ಸರಬರಾಜು: ಬ್ಲಿಂಕ್‌ಇಟ್ ಗೋದಾಮಿಗೆ ದಾಳಿ