ಒಂದೇ ದಿನ 13 ಮನೆಗಳಿಗೆ ಹಾನಿ । ನೆರೆ ಪೀಡಿತ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ
ಜಿಲ್ಲೆಯಲ್ಲಿ ಸತತ 6 ದಿನಗಳ ಕಾಲ ಬಿಡುವಿಲ್ಲದೆ ಧಾರಾಕಾರವಾಗಿ ಸುರಿದ ಮಳೆ ಶನಿವಾರ ಅಲ್ಪ ಬಿಡುವು ನೀಡಿತ್ತು. ಆದರೆ, ಹಾನಿ ಮಾತ್ರ ಮುಂದುವರಿದಿತ್ತು. ಒಂದೇ ದಿನ 13 ಮನೆಗಳಿಗೆ ಹಾನಿಯಾಗಿದ್ದರೆ, ಬಾಬಾಬುಡನ್ ಗಿರಿ ರಸ್ತೆ ಸೇರಿದಂತೆ ಜಿಲ್ಲೆಯ ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಜಿಲ್ಲೆಯ ಮಲೆನಾಡಿನಲ್ಲಿ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಭೂ ಕುಸಿತ, ಸೇತುವೆಗಳ ಹಾನಿಯನ್ನು ವೀಕ್ಷಿಸಿದರು. ಅತಿವೃಷ್ಟಿಯಿಂದ ಮಲೆನಾಡ ತಾಲೂಕು ಗಳಾದ ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಎನ್.ಆರ್. ಪುರ ತಾಲೂಕಿನಲ್ಲಿ ಭಾರಿ ಹಾನಿ ಸಂಭವಿಸಿದೆ. ಹಲವಡೆ ಗುಡ್ಡ ಕುಸಿದಿದ್ದರೆ ಇನ್ನೂ ಕೆಲವೆಡೆ ರಸ್ತೆಗಳಲ್ಲಿಯೇ ಬಿರುಕು ಕಾಣಿಸಿಕೊಂಡಿದೆ. ತೂಗು ಸೇತುವೆಗಳಿಗೂ ಭಾರಿ ಪ್ರಮಾಣದ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.ಶೃಂಗೇರಿಯ ಗಾಂಧಿ ಮೈದಾನ, ನೆಮ್ಮಾರ್ ತೂಗು ಸೇತುವೆ, ಶೃಂಗೇರಿ - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹೀಗೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಶೀಘ್ರ ಯಾವ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿತು.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 13 ಮನೆಗಳಿಗೆ ಹಾನಿ ಸಂಭವಿಸಿದ್ದು, ಈ ಪೈಕಿ ಚಿಕ್ಕಮಗಳೂರು ತಾಲೂಕಿನಲ್ಲಿ 6, ಕಡೂರು 2, ಎನ್.ಆರ್.ಪುರ ತಾಲೂಕಿನಲ್ಲಿ 3 ಹಾಗೂ ಕಳಸದಲ್ಲಿ 2 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.
ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಸರಾಸರಿ 17.2 ಮಿ.ಮೀ ಮಳೆ ಆಗಬೇಕಾಗಿತ್ತು. ಆದರೆ, ಕಳೆದ 24 ಗಂಟೆಗಳಲ್ಲಿ ಸರಾಸರಿ 39 ಮಿ.ಮೀ. ಮಳೆಯಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಚಾರ್ಮಾಡಿ ಘಾಟ್ ರಸ್ತೆಯಲ್ಲಿ ತಡೆಗೋಡೆ ಕುಸಿತ, ಬಿರುಕು ಮತ್ತಿತರ ಸಮಸ್ಯೆ ಗಮನಕ್ಕೆ ಬಂದಿದ್ದು, ಅದನ್ನು ಪರಿಶೀಲಿಸಲು ಬಂದಿದ್ದೇವೆ. ಹಾಗೆಯೇ ಮಡಿಕೇರಿ, ಸಕಲೇಶಪುರ ಮಾರ್ಗದಲ್ಲಿ ಗುಡ್ಡ ಕುಸಿತದ ಹಿನ್ನಲೆಯಲ್ಲಿ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಮನವರಿಕೆ ಮಾಡಿಕೊಂಡು ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲು ನಿರ್ಧಾರ ತೆಗೆದು ಕೊಳ್ಳಲಿದ್ದೇವೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ, ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಹೊತ್ತಲ್ಲಿ ಮಳೆಯ ಹಿನ್ನಲೆಯಲ್ಲಿ ವಾಹನ ಸಂಚಾರ ನಿಷೇಧಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ, ಶಿರಾಡಿ ಘಾಟ್ ಬಂದ್ ಆದ ಹಿನ್ನಲೆಯಲ್ಲಿ ಚಾರ್ಮಾಡಿ ಮಾತ್ರ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಸಂಚಾರ ನಿಷೇಧದ ಬಗ್ಗೆ ನಿರ್ಧಾರ ಸಧ್ಯಕ್ಕೆ ಕೈಗೊಂಡಿಲ್ಲ ಎಂದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ, ಎಇಇ ಕಾಂಬ್ಳೆ, ಎಇ ಸಂತೋಷ್, ಮೂಡಿಗೆರೆ ಇನ್ ಸ್ಪೆಕ್ಟರ್ ಸೋಮೇಗೌಡ, ಬಣಕಲ್ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಇದ್ದರು. 20 ಕೆಸಿಕೆಎಂ 5ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಒ ಕೀರ್ತನಾ ಚಾರ್ಮಾಡಿ ಘಾಟ್ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್ ಜಯಣ್ಣ ಹಾಗೂ ಇತರೆ ಅಧಿಕಾರಿಗಳು ಇದ್ದರು.