65 ವರ್ಷಗಳ ಬಳಿಕ ದ್ಯಾಮವ್ವ ದೇವಿ ಜಾತ್ರೆ!

KannadaprabhaNewsNetwork |  
Published : Mar 27, 2024, 01:00 AM IST
ಪೋಟೊ26ಕೆಎಸಟಿ2: ಕುಷ್ಟಗಿ ಪಟ್ಟಣದ ದ್ಯಾಮವ್ವ ದೇವಿಯ ದೇವಸ್ಥಾನದ ಹೊರನೋಟ. | Kannada Prabha

ಸಾರಾಂಶ

ಸುಮಾರು 65 ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಪಟ್ಟಣದ ಆರಾಧ್ಯ ದೇವತೆ ಹಾಗೂ ಗ್ರಾಮ ದೇವತೆಯಾದ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವ ಪ್ರಸಕ್ತ ವರ್ಷ ಸಂಭ್ರಮದಿಂದ ನಡೆಯಲಿದೆ.

11 ದಿನಗಳ ಕಾಲ ನಡೆಯುವ ಪಟ್ಟಣದ ಗ್ರಾಮ ದೇವಿ ಜಾತ್ರೆ । ಕಟ್ಟಪ್ಪಣೆ ಕುರಿತು ಜಾತ್ರಾ ಸಮಿತಿಯಿಂದ ಪ್ರಚಾರಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭವಾರ್ತೆ ಕುಷ್ಟಗಿ

ಸುಮಾರು 65 ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಪಟ್ಟಣದ ಆರಾಧ್ಯ ದೇವತೆ ಹಾಗೂ ಗ್ರಾಮ ದೇವತೆಯಾದ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವ ಪ್ರಸಕ್ತ ವರ್ಷ ಸಂಭ್ರಮದಿಂದ ನಡೆಯಲಿದೆ.

ಹೌದು...

ಈ ಹಿಂದೆ ಈ ಜಾತ್ರೆ 1959ರಲ್ಲಿ ನಡೆದಿತ್ತು. ಅದಕ್ಕಿಂತ ಹಿಂದೆ 5 ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಆದರೆ ಜವಾಬ್ದಾರಿ ತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಕಾರಣಾಂತರಗಳಿಂದ ಜಾತ್ರೆ ಆಚರಣೆ ನಿಲ್ಲಿಸಲಾಗಿತ್ತು. ಈಗ ಭಕ್ತಾದಿಗಳು ಸೇರಿಕೊಂಡು ಜಾತ್ರಾ ಮಹೋತ್ಸವ ಪುನಾರಂಭ ಮಾಡಿದ್ದು, ಏ.9 ರಿಂದ 20 ರವರೆಗೆ ಅದ್ಧೂರಿಯಾಗಿ ಜಾತ್ರೆ ಜರುಗಲಿದೆ.

ಸುಮಾರು 65 ವರ್ಷಗಳಿಂದ ನಿಲ್ಲಿಸಿದ ಜಾತ್ರಾ ಮಹೋತ್ಸವದ ಕಾರ್ಯಕ್ರಮವನ್ನು ಮರು ಆರಂಭಿಸಬೇಕು ಎಂಬ ಸದುದ್ದೇಶದಿಂದ ಪಟ್ಟಣದ ಎಲ್ಲ ಸಮಾಜದ ಮುಖಂಡರು ಹಲವು ಸಭೆ ಮಾಡುವ ಮೂಲಕ ಜಾತ್ರೆಯನ್ನು ಅತ್ಯಂತ ವೈಭವದಿಂದ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ.

ಪ್ರಸ್ತುತವಾಗಿ ದ್ಯಾಮವ್ವ ದೇವಿಯ ಜಾತ್ರಾ ಅಂಗವಾಗಿ ದೇವಸ್ಥಾನದ ರಿಪೇರಿ ಕೆಲಸವು ನಡೆದಿದ್ದು, ದೇವಿಯ ಜಾತ್ರಾ ನಿಮಿತ್ತವಾಗಿ ಅನೇಕ ಕಟ್ಟಪ್ಪಣೆಗಳನ್ನು ಒಂದು ತಿಂಗಳ ಮುಂಚಿತವಾಗಿ ಜಾತ್ರಾ ಸಮಿತಿಯವರು ಕರಪತ್ರ ಹೊರಡಿಸುವ ಹಾಗೂ ವಿಡಿಯೋ ತುಣುಕುಗಳನ್ನು ವಾಹನಗಳಲ್ಲಿ ಮೈಕ್‌ ಹಾಕಿಕೊಂಡು ಓಣಿಗಳಲ್ಲಿ ಅನೌನ್ಸ್‌ ಮಾಡುತ್ತಿದ್ದಾರೆ.

ಕಟ್ಟಪ್ಪಣೆ:

ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆಯು ಸುಮಾರು ಹನ್ನೊಂದು ದಿನಗಳ ಕಾಲ ನಡೆಯುತ್ತಿದ್ದು, ಈ ಜಾತ್ರಾ ಸಮಯದಲ್ಲಿ ಕೆಲವು ಕಟ್ಟಪ್ಪಣೆಗಳನ್ನು ಪಾಲಿಸಬೇಕಾಗಿದೆ. ಕುಟ್ಟುವುದು, ಬೀಸುವುದು, ಹೊಲಿಗೆ ಹಾಕುವುದು, ಕಮ್ಮಾರಿಕೆ, ಚಮ್ಮಾರಿಕೆ, ಕಟಿಂಗ್, ಯಂತ್ರಗಳ ಕೆಲಸ ಇತ್ಯಾದಿ ಮಾಡುವಂತಿಲ್ಲ. ಪ್ರತಿ ಮನೆಯವರು ತಮ್ಮ ತಮ್ಮ ಮನೆಗಳ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ ಮನೆಯನ್ನು ಮಡಿ ಮಾಡುವುದು ಕಡ್ಡಾಯವಾಗಿದೆ.

ಜಾತ್ರೆ ಪ್ರಾರಂಭದ ದಿನದಿಂದ ಪಟ್ಟಣದ ನಿವಾಸಿಗಳು ಅನಿವಾರ್ಯ ಕಾರಣಗಳಲ್ಲಿ ಪ್ರಯಾಣಿಸುವ ಸಂರ್ಭದಲ್ಲಿ ಊರಿಗೆ ಹೋಗುವ ಮುನ್ನ ದ್ಯಾಮವ್ವ ದೇವಿಗೆ ಉಲಸು (ನಾಣ್ಯ) ಕೊಟ್ಟು ಹೋಗುವುದು ಹಾಗೂ ಮರಳಿದ ಕೂಡಲೇ ಮನೆಗೆ ಹೋಗುವ ಪೂರ್ವದಲ್ಲಿ ದ್ಯಾಮವ್ವ ದೇವಿಗೆ ಮತ್ತೆ ಉಲಸು ನೀಡಿ ಮನೆಗೆ ಹೋಗಬೇಕು, ದೇವಿಯ ಮೆರವಣಿಗೆ ಹೊರಟಾಗ ಮನೆಯ ಮಾಳಿಗೆಯ ಮೇಲೆ ನಿಂತು ನೋಡುವುದು ಅಥವಾ ಪಾದರಕ್ಷೆ ಧರಿಸುವುದನ್ನು ನಿಷೇಧಿಸಲಾಗಿದೆ.

ದ್ಯಾಮವ್ವ ದೇವಿಯ ಜಾತ್ರೆಗೆ ಪ್ರತಿ ಮನೆಯವರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಅಂದರೆ ಅಕ್ಕ, ತಂಗಿ, ಅತ್ತೆಯಂದಿರನ್ನು ಊರಿಗೆ ಕರೆಸಿಕೊಂಡು ಅವರಿಗೆ ಉಡಿ ತುಂಬುವ ಕಾರ್ಯ ಮಾಡಬೇಕು. ಎಲ್ಲ ಮಹಿಳೆಯರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಬೇಕು, ಕೃಷಿಗೆ ಸಂಬಂಧಿಸಿದಂತೆ ಹೂಳುವುದು, ಹರಗುವುದು ಗಳೆ ಹೊಡೆಯುವುದು, ಟ್ರ್ಯಾಕರ್ ಕೆಲಸ ಮಾಡುವಂತಿಲ್ಲ, ಹಿಟ್ಟಿನ ಗಿರಣಿ, ಖಾರಾ ಕುಟ್ಟುವ ಯಂತ್ರಗಳು, ಶ್ಯಾವಿಗೆ ಮಶಿನ್, ಕಟ್ಟಿಗೆ ಕೊರೆಯುವ ಯಂತ್ರ ಸ್ಥಗಿತಗೊಳಿಸಬೇಕು.

ಜಾತ್ರೆಯ ನಿಮಿತ್ತ 11 ದಿನಗಳ ಕಾಲ ಹೊಸಮನೆ ಕಟ್ಟಡ ಹಾಗೂ ಯಾವುದೇ ತರಹದ ಕಟ್ಟಡ ನಿರ್ಮಾಣ ಕಾರ್ಯ ಮಾಡುವಂತಿಲ್ಲ, ಜಾತ್ರೆಯು ಮುಗಿದ ನಂತರ ಊರಿನಲ್ಲಿರುವ ಯಾವುದೇ ಕಲ್ಯಾಣ ಮಂಟಪದಲ್ಲಿ ಅಥವಾ ಇತರೆ ಸ್ಥಳಗಳಲ್ಲಿ ಮದುವೆ, ಶುಭ ಕಾರ್ಯಗಳನ್ನು ಮಾಡುವವರು ದೇವಿಗೆ ಕಾಣಿಕೆ ಕೊಟ್ಟು ಆಶೀರ್ವಾದ ಪಡೆದುಕೊಂಡು ಮುಂದುವರೆಸಬಹುದು ಸೇರಿದಂತೆ ವಿವಿಧ ಕಟ್ಟಪ್ಪಣೆ ವಿಧಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ