ಹೊಸಪೇಟೆ: ನಗರದ ಉಪ ವಿಭಾಗಮಟ್ಟದ ಸರ್ಕಾರಿ ಆಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದ್ದು, ರೋಗಿಗಳು ಬವಣೆ ಪಡುವಂತಾಗಿದೆ ಎಂದು ಆರೋಪಿಸಿ ಡಿವೈಎಫ್‌ಐ ಸಂಘಟನೆಯಿಂದ ನಗರದ ಎಂಸಿಎಚ್ ಆಸ್ಪತ್ರೆ ಎದುರು ಶನಿವಾರ ಪತ್ರಿಭಟನೆ ನಡೆಯಿತು.ಉಪವಿಭಾಗಮಟ್ಟದ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿದ್ದರೂ ಪ್ರಯೋಜನವಾಗಿಲ್ಲ. ಹೆಸರಿಗೆ ಮಾತ್ರ ಕಾಮಗಾರಿ ನೆಡದಿದೆ. ರಕ್ತ ಪರೀಕ್ಷೆ ಘಟಕದಲ್ಲಿ ಸಿಬಿಸಿ ಯಂತ್ರ ಇಲ್ಲದೇ ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆಯ ಕಾಯಂ ಸಿಬ್ಬಂದಿ, ರೋಗಿಗಳ ಜೊತೆಯಲ್ಲಿ ಮಾನವೀಯತೆ, ವಿನಯದಿಂದ ನಡೆದುಕೊಳ್ಳದೆ ಅಸಭ್ಯವಾಗಿ ವರ್ತನೆ ತೋರುತ್ತಿದ್ದಾರೆ. ರೋಗಿಗಳನ್ನ ಸರಿಯಾಗಿ ಪರೀಕ್ಷಿಸದೆ ಬೇರೆ ಜಿಲ್ಲೆಗೆ ಸಾಗಿಸುವ ಪ್ರವೃತ್ತಿ ಬೆಳೆದಿದೆ. ಎಷ್ಟೋ ರೋಗಿಗಳು ಮಾರ್ಗದ ಮಧ್ಯದಲ್ಲೇ ಮೃತಪಡುತ್ತಿದ್ದಾರೆ. ಈ ನೀತಿ ಬದಲಾವಣೆ ಆಗಬೇಕಿದೆ ಎಂದು ಆಗ್ರಹಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಬಂದ ಕುಟುಂಬದ ಬಳಿ ಹಣದ ಬೇಡಿಕೆ ಇಡುತ್ತಾರೆ. ಮಾನವೀಯತೆ ಇಲ್ಲದೆ ವೈದ್ಯರು ನಡೆದುಕೊಳ್ಳುತ್ತಿದ್ದಾರೆ. ಭ್ರೂಣ ಹತ್ಯೆ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.ಖಾಲಿ ಇರುವ ವೈದ್ಯರ ಹುದ್ದೆಗಳು, ಲ್ಯಾಬ್ ಟೆಕ್ನಿಷಿಯನ್ ಹಾಗೂ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಬಸವಣ್ಣ ಕಾಲುವೆಯಲ್ಲಿ ಪತ್ತೆಯಾಗಿದ 7 ಭ್ರೂಣಗಳ ಕುರಿತು ತನಿಖೆಯಾಗಬೇಕು. ಪುನೀತ್ ರಾಜಕುಮಾರ ಹೆಸರಲ್ಲಿ ಹೃದಯ ರೋಗದ ಆಸ್ಪತ್ರೆ ತೆರೆಯಬೇಕು. ಜನ ಸಂಖ್ಯೆ ತಕ್ಕಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಈಡಿಗರ ಮಂಜುನಾಥ, ವಿ.ಸ್ವಾಮಿ, ಯಲ್ಲಾಲಿಂಗ, ಬಂಡೆ ತಿರುಕಪ್ಪ, ಅಲ್ತಾಫ್, ದಿವಾಕರ್, ಅಂಬರೀಶ್, ಮಾಲತೇಶ್, ರೆಹಮಾನ್, ಸೂರಿ ಮಂಜುನಾಥ, ಸುಧಾಕರ್ ಮತ್ತಿತರರಿದ್ದರು.ಹೊಸಪೇಟೆಯಲ್ಲಿ ಶನಿವಾರ ಡಿವೈಎಫ್‌ಐ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ, ಡಿಎಚ್‌ಒ ಡಾ. ಶಂಕರ್ ನಾಯ್ಕ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.