ವೆಂಕಟೇಶ್ ಕಲಿಪಿ
ಪರಭಾರೆಗೊಂಡ ಸಾಗುಬಾಣೆ ಜಮೀನು ಅಥವಾ ಅದರಲ್ಲಿನ ಮರಗಳ ಮೇಲೆ ಸರ್ಕಾರಕ್ಕೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಸಾಗುಬಾಣೆ ಜಮೀನವೊಂದರಲ್ಲಿ ಮರಗಳನ್ನು ಕತ್ತರಿಸಲು ಠೇವಣಿ ಇಡಲಾಗಿದ್ದ 4.33 ಲಕ್ಷ ಹಣವನ್ನು ಭೂ ಮಾಲೀಕರಿಗೆ ಹಿಂದಿರುಗಿಸಲು 33 ವರ್ಷಗಳಿಂದ ಸತಾಯಿಸುತ್ತಿದ್ದ ರಾಜ್ಯ ಅರಣ್ಯಾ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.
ತಾವು ಖರೀದಿಸಿದ ಪರಭಾರೆಗೊಂಡ ಸಾಗುಬಾಣೆ ಜಮೀನಿನಲ್ಲಿ 349 ಮರಗಳನ್ನು ಕತ್ತರಿಸಿ ತೆರವುಗೊಳಿಸಲು ಠೇವಣಿ ಇಡಲಾಗಿದ್ದ 4.33 ಲಕ್ಷ ರು. ಹಿಂದಿರುಗಿಸಲು ನಿರಾಕರಿಸಿದ್ದ ಸಹಾಯಕ ಅರಣ್ಯಾ ಸಂರಕ್ಷಣಾಧಿಕಾರಿ ಕ್ರಮ ಪ್ರಶ್ನಿಸಿ ಮಡಿಕೇರಿ ತಾಲೂಕಿನ ಬಿಳಿಗೆರೆ ಗ್ರಾಮದ ನಿವಾಸಿ ಗಾಯತ್ರಿ (65) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರು ಈ ಆದೇಶ ಮಾಡಿ,, 4.33 ಲಕ್ಷ ಹಣವನ್ನು ಅರ್ಜಿದಾರರು ಠೇವಣಿಯಿಟ್ಟ ದಿನದಿಂದ ವಾರ್ಷಿಕ ಶೇ.6ರಷ್ಟು ಬಡ್ಡಿದರಲ್ಲಿ ಹಿಂದಿರುಗಿಸುವಂತೆ ರಾಜ್ಯ ಸರ್ಕಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೈಕೋರ್ಟ್ ತಾಕೀತು ಮಾಡಿದೆ.ಪ್ರಕರಣದ ವಿವರ:
ಮರಗಳನ್ನು ಕತ್ತರಿಸಿ ತೆರವುಗೊಳಿಸಿದ ನಂತರ ಈ ಜಮೀನು ಪರಭಾರೆಗೊಂಡ ಸಾಗುಬಾಣೆ ಜಮೀನಾಗಿದ್ದು, ಅದನ್ನು ಭೂ ಕಂದಾಯಕ್ಕೆ ಒಳಪಡಿಸಲಾಗಿರುವ ವಿಷಯ ಮಹಾಬಲೇಶ್ವರ ಭಟ್ ಅರಿವಿಗೆ ಬಂದಿತ್ತು. ಇದರಿಂದ ಈ ಜಮೀನು ತಮಗೆ ಸೇರಿರುವುದರಿಂದ ಮರಗಳನ್ನು ಕತ್ತರಿಸಲು ಹಣ ಠೇವಣಿಯಿಡುವಂತೆ ಅರಣ್ಯ ಸಂರಕ್ಷಣಾಧಿಕಾರಿಗೆ ಷರತ್ತು ವಿಧಿಸಲು ಅವಕಾಶವಿಲ್ಲ, ಹಾಗಾಗಿ ಠೇವಣಿ ಹಿಂದಿರುಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಸರ್ಕಾರದ ಪರ ವಕೀಲರು ವಾದಿಸಿ, ಮರಗಳನ್ನು ಕತ್ತರಿಸಲು ಠೇವಣಿ ಪಾವತಿಸುವ ಷರತ್ತನ್ನು ಸ್ವತಃ ಅರ್ಜಿದಾರರೇ ಒಪ್ಪಿಕೊಂಡಿರುವ ಸನ್ನಿವೇಶದಲ್ಲಿ ಠೇವಣಿ ಹಿಂಪಾವತಿಗೆ ಕೋರಲಾಗದು. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಈ ಭೂಮಿ ಸಾಗುಬಾಣೆಯೆಂದು ಸೂಚಿಸಿದ್ದಾರೆ ಹೊರತು ಪರಭಾರೆಗೊಂಡ ಸಾಗುಬಾಣೆ ಜಮೀನು ಎಂದು ಹೇಳಿರಲಿಲ್ಲ ಎಂದು ಪ್ರತಿವಾದಿಸಿದ್ದರು.
ಅಂತಿಮವಾಗಿ ಈ ಜಮೀನು 1897ರಲ್ಲಿಯೇ ಪರಭಾರೆಗೊಂಡ ಸಾಗು ಬಾಣೆ ಜಮೀನು ಎಂಬುದಾಗಿ ತೋರಿಸಲಾಗಿದೆ. ಈ ವಿಚಾರವನ್ನು ಅರಣ್ಯ ಅಧಿಕಾರಿಗಳು ದಾಖಲೆಗಳಿಂದ ದೃಢಪಡಿಸಿಕೊಳ್ಳಬೇಕೇ ಹೊರತು ಅರ್ಜಿದಾರರ ಹೇಳಿಕೆಯಿಂದಲ್ಲ. ಮರಗಳನ್ನು ಕತ್ತರಿಸಲು ಅರ್ಜಿದಾರರು ಅನುಮತಿ ಕೋರಿದಾಗಲೇ ಭೂಮಿಯ ದಾಖಲೆಗಳನ್ನು ಪರಿಶೀಲನೆ ಮಾಡಬೇಕಾದದ್ದು ಅರಣ್ಯಾಧಿಕಾರಿಗಳ ಕರ್ತವ್ಯ. ಅರ್ಜಿದಾರರ ತಪ್ಪಾಗಿ ಸಾಗುಬಾಣೆ ಜಮೀನೆಂದು ತೋರಿಸಿರುವುದರ ಅನುಕೂಲವನ್ನು ಸರ್ಕಾರ ಪಡೆಯಬಾರದು ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರಿಗೆ ಠೇವಣಿ ಹಿಂದಿರುಗಿಸಲು ಸೂಚಿಸಿದೆ.