ಇ-ಸ್ವತ್ತು ಅಭಿಯಾನ ನಡೆಸಿ

KannadaprabhaNewsNetwork |  
Published : May 13, 2026, 01:15 AM IST
ಹುಬ್ಬಳ್ಳಿ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ಸಭಾ ಭವನದಲ್ಲಿ ಮಂಗಳವಾರ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಮಳೆಗಾಲದ ಒಳಗಾಗಿ ಮುಖ್ಯ ನಾಲಾ ಹಾಗೂ ಚರಂಡಿ ಸ್ವಚ್ಛಗೊಳಿಸಬೇಕು. ಸಿಮೆಂಟ್ ರಸ್ತೆ ನಿರ್ವಿುಸುವ ಪ್ರದೇಶಗಳಲ್ಲಿ ಪ್ರತಿ ವಾರ್ಡಿನ ರೋಡ್ ಮ್ಯಾಪ್ ಸಿದ್ಧಗೊಳಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿ:

ಅರ್ಜಿ ನೀಡಿದ 7 ದಿನದೊಳಗೆ ಇ-ಸ್ವತ್ತು ನೀಡಬೇಕೆಂಬ ನಿಯಮವಿದೆ. ಆದರೆ, ನಗರದಲ್ಲಿ ತಿಂಗಳು ಕಳೆದರೂ ಅರ್ಜಿ ಸಲ್ಲಿಸಿದವರಿಗೆ ದೊರೆಯುತ್ತಿಲ್ಲ. ಹಣ ನೀಡಿದವರಿಗೆ ಇ-ಸ್ವತ್ತು ನೀಡಲಾಗುತ್ತದೆ ಎಂದು ಜನರು ದೂರುತ್ತಿದ್ದಾರೆ. ಈ ಕುರಿತು ಸಮರ್ಪಕ ಉತ್ತರ ನೀಡುವಂತೆ ಶಾಸಕ ಮಹೇಶ ಟೆಂಗಿನಕಾಯಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿಯ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಕರೆದ ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ಈ ವಿಷಯ ಪ್ರಸ್ತಾಪಿಸಿದರು.

ತಾಂತ್ರಿಕ ಸಮಸ್ಯೆಯಿಂದಾಗಿ ನಿಗದಿತ ಸಮಯಕ್ಕೆ ಇ-ಸ್ವತ್ತು ನೀಡುವುದು ತಡವಾಗುತ್ತಿದೆ. ಇತ್ತೀಚೆಗೆ ಉಪ ನೋಂದಣಿ ಕಚೇರಿಗೂ ಭೇಟಿ ನೀಡಿ, ತಂತ್ರಜ್ಞಾನದ ಸಮಸ್ಯೆ ಬಗ್ಗೆ ಚರ್ಚಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಸಮಜಾಯಿಷಿ ನೀಡಿದರು. ಅದಕ್ಕೆ ಯಾವುದೇ ಕಾರಣಕ್ಕೂ ಇ- ಸ್ವತ್ತಿಗೆ ಹಣ ಪಡೆಯುವಂತಿಲ್ಲ ಎಂದು ತಾಕೀತು ಮಾಡಿದ ಶಾಸಕರು, ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್​ನಲ್ಲಿ ಇ-ಸ್ವತ್ತು ನೀಡುವ ಅಭಿಯಾನ ಹಮ್ಮಿಕೊಳ್ಳಬೇಕು. ಈ ಅಭಿಯಾನಕ್ಕೂ ಮುಂಚೆ ಇ-ಸ್ವತ್ತಿಗೆ ಬೇಕಾಗುವ ದಾಖಲೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಜತೆಗೆ ಮೇ 18, 19 ಹಾಗೂ 20ರಂದು ಗೋಕುಲ ರಸ್ತೆ ಕೈಗಾರಿಕಾ ವಸಾಹತುವಿನಲ್ಲಿ ಇ-ಸ್ವತ್ತು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ ಮಕ್ಕಳ ಅಪೌಷ್ಟಿಕತೆ ದೂರ ಮಾಡಲು ಪ್ರತಿದಿನ ನೀಡುವ ಕೆನೆಭರಿತ ಹಾಲಿನ ಪುಡಿಯನ್ನು 2 ತಿಂಗಳಿಂದ ಕ್ಷೇತ್ರದಲ್ಲಿ ಏಕೆ ವಿತರಿಸಿಲ್ಲ ಎಂದು ಶಾಸಕರು ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಲು ತಡಕಾಡಿದ ಸಿಡಿಪಿಒ ಸುನಿತಾ ಪಾಟೀಲ, ಹಿಂದುಳಿದ ಕಲಘಟಗಿ ಹಾಗೂ ಅಳ್ನಾವರ ತಾಲೂಕುಗಳಿಗೆ ಹಾಲಿನಪುಡಿ ಪ್ಯಾಕೆಟ್​ ನೀಡಲಾಗಿದೆ. ಆದರೆ, ಹುಬ್ಬಳ್ಳಿ ನಗರ ತಾಲೂಕು ಅಭಿವೃದ್ಧಿ ಹೊಂದಿರುವುದರಿಂದ ಪ್ಯಾಕೆಟ್​ಗಳು ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡಿದರು. ಇದಕ್ಕೆ ಅಸಮಾಧಾನಗೊಂಡ ಶಾಸಕರು, ತಕ್ಷಣ ಹಾಲಿನ ಪುಡಿ ಪ್ಯಾಕೆಟ್ ವಿತರಿಸುವಂತೆ ನಿರ್ದೇಶನ ನೀಡಿದರು.

ಮಳೆಗಾಲದ ಒಳಗಾಗಿ ಮುಖ್ಯ ನಾಲಾ ಹಾಗೂ ಚರಂಡಿ ಸ್ವಚ್ಛಗೊಳಿಸಬೇಕು. ಸಿಮೆಂಟ್ ರಸ್ತೆ ನಿರ್ವಿುಸುವ ಪ್ರದೇಶಗಳಲ್ಲಿ ಪ್ರತಿ ವಾರ್ಡಿನ ರೋಡ್ ಮ್ಯಾಪ್ ಸಿದ್ಧಗೊಳಿಸಬೇಕು. ಇದರಿಂದ ಯುಜಿಡಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಮಾಹಿತಿ ಸಿಗುತ್ತದೆ. ತಗ್ಗು ಪ್ರದೇಶ ಹಾಗೂ ಅಪಾರ್ಟ್​ವೆುಂಟ್​ಗಳಲ್ಲಿ ಮಳೆ ನೀರು ನುಗ್ಗುವ ಪ್ರದೇಶಗಳನ್ನು ಶೀಘ್ರ ಗುರುತಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿಗಳಿಗೆ ವಿಮಾನ ಹಾರಾಟ:

ಸೆಂಟ್ರಲ್ ಕ್ಷೇತ್ರದ ಎರಡು ಶಾಲೆಯ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ರೋಟರಿ ಕ್ಲಬ್ ಸಹಯೋಗದಲ್ಲಿ ವಿಮಾನದ ಮೂಲಕ ಬೆಂಗಳೂರು ವಿಧಾನಸೌಧ ವೀಕ್ಷಿಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳನ್ನು ಎಸ್‌ಡಿಎಂಸಿ ಸದಸ್ಯರು ಆಯ್ಕೆ ಮಾಡಲಿದ್ದಾರೆ ಎಂದು ಸಭೆಗೆ ತಿಳಿಸಿದರು.

ಈ ವೇಳೆ ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಡಿಸಿಪಿ ರವೀಶ, ತಹಸೀಲ್ದಾರ್ ಮಹೇಶ ಗಸ್ತೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದುಗಿನಲ್ಲಿ ಹಾಲಿಗಿಂತ ಮೊದಲೇ ಇಲ್ಲಿ ಮದ್ಯ ಸಿಗುತ್ತೆ!
ಎರಡು ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ