ಕಾರಟಗಿ:
ಸರ್ಕಾರವು ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಹಂಚಿಕೆಗೆ ಹೊಸ ಯೋಜನೆ ಘೋಷಿಸಿದೆ. ಈ ಯೋಜನೆಯ ಮೂಲಕ ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿ ಮಾಲೀಕರಿಗೂ ಇ-ಖಾತಾ ನೀಡಲು ಅವಕಾಶ ಒದಗಿಸಲಾಗಿದೆ. ಕಾರಟಗಿ ಪಟ್ಟಣದಲ್ಲಿಯೂ ನಿವೇಶನ, ಮನೆ ಸೇರಿದಂತೆ ಹಲವು ರೀತಿಯ ಆಸ್ತಿ ಹೊಂದಿರುವವರು ದಾಖಲೆ ಸಮೇತ ಪುರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಇ ಖಾತಾ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. ೧೦, ೨೦೨೪ರ ವರೆಗೆ ನಿರ್ಮಿಸಿರುವ ಅನಧಿಕೃತ ಆಸ್ತಿಗಳಿಗೆ ಇ-ಖಾತಾ ನೀಡಲು ಅವಕಾಶ ಮಾಡಲಾಗಿದೆ. ಈ ನಿಟ್ಟಿನಲ್ಲಿ ಫೆ. ೨೦ರಿಂದ ಮೂರು ತಿಂಗಳ ಕಾಲ ಖಾತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನೇರವಾಗಿ ಸಾರ್ವಜನಿಕರೇ ಪುರಸಭೆ ಕಚೇರಿಗೆ ತೆರಳಿ ದಾಖಲೆ ಸಲ್ಲಿಸಿ ನಿಮ್ಮ ಮನೆ ಹಾಗೂ ಖಾಲಿ ನಿವೇಶನಗಳ ಖಾತೆ ಮಾಡಿಕೊಡಲಾಗುತ್ತದೆ ಎಂದು ವಿವರಿಸಿದರು.
ನ್ಯಾಯಾಲದಲ್ಲಿರುವ ಆಸ್ತಿಗಳ ಖಾತೆ ಹೊರತುಪಡಿಸಿ ಉಳಿದ ಯಾವುದೇ ರೀತಿಯ ನಿವೇಶನ, ಮನೆ ಇದ್ದರೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಖುದ್ದಾಗಿ ನೀವೇ ಹೋಗಿ ಸಲ್ಲಿಸಬೇಕು. ಅಧಿಕಾರಿಗಳು ಒಂದೇ ಸೂರಿನಡಿ ಇದ್ದು ನಿಮ್ಮ ಆಸ್ತಿಗಳ ಖಾತೆಯನ್ನು ಒಂದು ವಾರದಲ್ಲಿ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ ಮಾತನಾಡಿ, ಮುಂದಿನ ಮೂರು ತಿಂಗಳೊಳಗೆ ಇ ಖಾತಾ ಹಂಚಿಕೆ ಅಭಿಯಾನ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯ ಅನುಷ್ಠಾನದಿಂದ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಅಧಿಕೃತ ದಾಖಲೆಗಳೊಂದಿಗೆ ಇ ಖಾತಾ ಪಡೆಯಬಹುದು. ಇದರಿಂದ ಆಸ್ತಿ ಖರೀದಿ, ಮಾರಾಟ, ಸಾಲ ಪಡೆದುಕೊಳ್ಳುವಿಕೆ, ಪರಿವರ್ತನೆ ಪ್ರಕ್ರಿಯೆಗಳಿಗೆ ಸುಗಮತೆ ಒದಗಲಿದೆ. ಈ ಹೊಸ ಯೋಜನೆಯ ಅನುಷ್ಠಾನದಿಂದ ಅನಧಿಕೃತ ಬಡಾವಣೆಗಳಿಗೂ ಸರ್ಕಾರದ ಮಾನ್ಯತೆ ದೊರೆಯಲಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಲಾಭ ಉಂಟಾಗಲಿದೆ ಎಂದು ತಿಳಿಸಿದರು.
ಈ ವೇಳೆ ಪುರಸಭೆ ಉಪಾಧ್ಯಕ್ಷೆ ದೇವಮ್ಮ ಚಲುವಾದಿ, ಕಂದಾಯ ಅಧಿಕಾರಿ ಸೀಮಾರಾಣಿ, ಕಂದಾಯ ನಿರೀಕ್ಷಕ ಆದೆಪ್ಪ, ವ್ಯವಸ್ಥಾಪಕರಾದ ಪರಮೇಶ್ವರಪ್ಪ, ಕರವಸೂಲಿಗಾರರಾದ ಅನಂತರಾವ, ಸಮೀರ, ಸಿಬ್ಬಂದಿ ಖಾಜಾಭಿ ಇದ್ದರು.