ಮಂಗಳೂರು : ಕಸ ವಿಲೇವಾರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಮೂಲಕ ‘ಸ್ವಚ್ಛ ಮಂಗಳೂರು’ ಜೊತೆಗೆ ‘ಹಸಿರು ಮಂಗಳೂರು’ ಸಾಕಾರಕ್ಕೆ ಮಂಗಳೂರು ಮಹಾನಗರ ಪಾಲಿಕೆ ಪ್ರಥಮ ಹೆಜ್ಜೆ ಇರಿಸಿದೆ ಎಂದು ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.
ನಗರದ ಪುರಭವನದಲ್ಲಿ ಬುಧವಾರ ಮಂಗಳೂರು ಮಹಾನಗರ ಪಾಲಿಕೆ ಮತ್ತು ಪ್ರಾಗ್ಯಾ ಆಟೋಮೊಬೈಲ್ಸ್ ಸಹಭಾಗಿತ್ವದಲ್ಲಿ ಕಸ ಸಂಗ್ರಹಣೆಗೆ ಪರಿಸರಸ್ನೇಹಿ ಎಲೆಕ್ಟ್ರಿಕ್ ಆಟೋಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಕಲ್ಪನೆಯಡಿ ಹಸಿರು ಮತ್ತು ಸ್ವಚ್ಛತೆಗೆ ಇ ವಾಹನ ಬಳಕೆ ಮಾಡಲಾಗುತ್ತಿದೆ. ಇದು ಸ್ಟಾರ್ಟಪ್ ಕಂಪನಿಗಳಿಗೂ ಉತ್ತೇಜನ ನೀಡಿದಂತಾಗಲಿದೆ. ಇ ವಾಹನ ಮೂಲಕ ಕಸ ವಿಲೇವಾರಿಗೆ ನಗರದ ಜನತೆಯೂ ಬೆಂಬಲ ನೀಡಬೇಕು ಎಂದರು.ಎಲ್ಲ ವಾರ್ಡ್‌ಗಳಿಗೆ ಇ ವಾಹನ: ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಇ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿ, ಪಾಲಿಕೆಯಲ್ಲಿ ಕಸ ವಿಲೇವಾರಿಗೆ 100 ವಾಹನಗಳು ಇತ್ತು. ಇ ವಾಹನ ಓಣಿಗಳಲ್ಲಿ ಕಸ ಸಂಗ್ರಹಕ್ಕೆ ಸಹಕಾರಿಯಾಗಲಿದೆ. ಈ ಕುರಿತು ಬೆಂಗಳೂರಿನ ಪ್ರಾಗ್ಯಾ ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇ ವಾಹನಗಳಿಂದಾಗಿ ಇಂಧನ ಉಳಿತಾಯ ಜತೆಗೆ ನಿರ್ವಹಣೆಯೂ ಸುಲಭ. ಪ್ರಸಕ್ತ 24 ವಾಹನಗಳು ಬಂದಿದ್ದು, ಎಲ್ಲ 60 ವಾರ್ಡ್‌ಗಳಿಗೆ ಇ ವಾಹನ ಒದಗಿಸುವ ಚಿಂತನೆ ಇದೆ ಎಂದರು.
ಪ್ರಾಗ್ಯಾ ಕಂಪನಿ ಮುಖ್ಯಸ್ಥ ಆದಿತ್ಯ ಸುರಾನಾ ಮಾತನಾಡಿ, ಇ ತ್ರಿಚಕ್ರ ವಾಹನ ಅಭಿವೃದ್ಧಿಪಡಿಸುವ ಮೂಲಕ ಕಡಿದಾದ ಪ್ರದೇಶಗಳಿಂದಲೂ ಕಸ ವಿಲೇವಾರಿ ಸುಗಮಗೊಳಿಸುವ ಉದ್ದೇಶ ಹೊಂದಲಾಗಿದೆ. ಇದು ಮಾಲಿನ್ಯ ರಹಿತವಾಗಿದ್ದು, ಇಂಧನ ವೆಚ್ಚವೂ ಇರುವುದಿಲ್ಲ. ಈಗಾಗಲೇ ರಾಜ್ಯದ ಬೇರೆ ನಗರ ಪಾಲಿಕೆಗಳಿಂದ ಇ ವಾಹನಗಳಿಗೆ ಬೇಡಿಕೆ ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಇ ವಾಹನ ಬಳಕೆ ಮೂಲಕ ಓಣಿಗಳಲ್ಲಿ ಕಸ ವಿಲೇವಾರಿ ಸಮಸ್ಯೆ ನೀಗಲಿದೆ. ಮುಂದಿನ ಹಂತಗಳಲ್ಲಿ ಇನ್ನಷ್ಟು ಇ ವಾಹನಗಳ ಸೇರ್ಪಡೆಗೆ ಚಿಂತಿಸಲಾಗುವುದು. ಸುಮಾರು 48 ಲಕ್ಷ ರು.ಗಳಲ್ಲಿ 24 ಇ ವಾಹನಗಳನ್ನು ಖರೀದಿಸಲಾಗಿದೆ. 60 ವಾರ್ಡ್‌ಗಳಿಗೆ 10 ಮಂದಿ ಆರೋಗ್ಯ ಇನ್‌ಸ್ಪೆಕ್ಟರ್‌ಗಳಿಗೆ ಇದನ್ನು ಹಂಚಿಕೆ ಮಾಡಲಾಗಿದೆ. ಇ ವಾಹನ ಹೊಂದಿರುವ ಪ್ರಥಮ ನಗರ ಪಾಲಿಕೆ ಇದಾಗಿದೆ ಎಂದರು.
ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಸ್ವಚ್ಛ ಭಾರತ 1.0 ಯೋಜನೆಯಡಿ ಇ ವಾಹನಗಳನ್ನು ಖರೀದಿಸಲಾಗಿದೆ. ಹಸಿ ಮತ್ತು ಒಣ ಕಸ ವಿಲೇವಾರಿಗೆ ಇದು ಬಳಕೆಯಾಗಲಿದೆ. ಇ ವಾಹನದಲ್ಲಿ 350 ರಿಂದ 400 ಕೇಜಿ ವರೆಗೂ ಕಸ ಸಂಗ್ರಹ ಸಾಧ್ಯವಿದೆ ಎಂದರು.
ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಉಪಮೇಯರ್ ಸುನಿತಾ, ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಪಾಲಿಕೆ ಸದಸ್ಯರಾದ ದಿವಾಕರ್ ಪಾಂಡೇಶ್ವರ್, ಗಣೇಶ್ ಕುಲಾಲ್, ಲೋಹಿತ್ ಅಮೀನ್, ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ ಮತ್ತಿತರರಿದ್ದರು.
ಓಣಿಗಳಲ್ಲಿ ಸಂಚರಿಸಲಿದೆ ಇ ವಾಹನ
ಮೂರು ಚಕ್ರದ ಮಿನಿ ಟೆಂಪೋ ಮಾದರಿಯ ಇ ವಾಹನವನ್ನು ಕಸ ಸಂಗ್ರಹಿಸುವ ಸಲುವಾಗಿ ರೂಪಿಸಲಾಗಿದೆ. ಇದರ ಹಿಂಭಾಗ ಆರು ಬಿನ್‌ಗಳನ್ನು ಇರಿಸಲಾಗಿದ್ದು, ಹಸಿ ಹಾಗೂ ಒಣ ಕಸ ಸಂಗ್ರಹಕ್ಕೆ ಪ್ರತ್ಯೇಕ ಬಿನ್‌ಗಳಿವೆ. ಭರ್ತಿಯಾದ ಬಿನ್‌ಗಳನ್ನು ಬೇರೊಂದು ಸಣ್ಣ ಟೆಂಪೋಗೆ ವಿಲೇವಾರಿ ಮಾಡಲಾಗುತ್ತದೆ. ಮುಖ್ಯವಾಗಿ ಪಾಲಿಕೆ ವ್ಯಾಪ್ತಿಯ ಓಣಿ ಪ್ರದೇಶಗಳಲ್ಲಿ ಇದುವರೆಗೆ ಕಸ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಓಣಿ ಪ್ರದೇಶದ ಮಂದಿ ಮುಖ್ಯ ರಸ್ತೆಗೆ ಕಸ ತರಬೇಕಿತ್ತು. ಇಲ್ಲವೇ ಓಣಿಯಲ್ಲೇ ಕಸದ ರಾಶಿ ಕಂಡುಬರುತ್ತಿತ್ತು. ಓಣಿಗೆ ಕಾಲ್ನಡಿಗೆಯಲ್ಲಿ ತೆರಳಿ ಪೌರ ಕಾರ್ಮಿಕರು ಕಸ ಸಂಗ್ರಹಿಸುತ್ತಿದ್ದರು. ಇನ್ನು ಮುಂದೆ ಇ ವಾಹನ ಓಣಿಗಳಲ್ಲಿ ಸಂಚರಿಸಿ ಕಸ ಸಂಗ್ರಹಿಸಲಿದೆ.
ಒಮ್ಮೆ ಚಾರ್ಜ್ ಮಾಡಿದರೆ, ಇ ವಾಹನದ ಬ್ಯಾಟರಿ ಸುಮಾರು 60 ಕಿ.ಮೀ. ಸಂಚಾರಕ್ಕೆ ಸಾಧ್ಯವಾಗಲಿದೆ. ಕೂಳೂರು, ಪಾಂಡೇಶ್ವರ ಹಾಗೂ ಪಂಪ್‌ವೆಲ್‌ಗಳಲ್ಲಿ ಇ ವಾಹನ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಖಾಲಿಯಾದ ಬ್ಯಾಟರಿ ಒಮ್ಮೆ ಚಾರ್ಜ್ ಆಗಬೇಕಾದರೆ ಕನಿಷ್ಠ ಎಂಟು ತಾಸು ಬೇಕಾಗುತ್ತದೆ. ಒಂದು ಇ ವಾಹನಕ್ಕೆ 2 ಲಕ್ಷ ರು. ಇದೆ. ಪ್ರಸಕ್ತ ಮಹಿಳಾ ಚಾಲಕಿಯರೂ ಇ ವಾಹನ ಚಲಾಯಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.