ಸಾರಾಂಶ
ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸೈಯ್ಯದ್ ನೂರ್ ಎಂಬುವವರು ಸಾಕಿದ ನಾಟಿ ಕೋಳಿಯೊಂದು ನೀಲಿ ಮೊಟ್ಟೆಯನ್ನಿಟ್ಟು ಅಚ್ಚರಿ ಮೂಡಿಸಿದೆ. ನಿತ್ಯ ಬಿಳಿ ಮೊಟ್ಟೆಯನ್ನೇ ಇಡುತ್ತಿದ್ದ ನಾಟಿ ಕೋಳಿ ನೀಲಿ ಮೊಟ್ಟೆಯನ್ನಿಟ್ಟಿದ್ದನ್ನು ಕಂಡು ಸೈಯ್ಯದ್ ನೂರ್ ಅಚ್ಚರಿಗೊಂಡಿದ್ದಾರೆ.
ದಾವಣಗೆರೆ : ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸೈಯ್ಯದ್ ನೂರ್ ಎಂಬುವವರು ಸಾಕಿದ ನಾಟಿ ಕೋಳಿಯೊಂದು ನೀಲಿ ಮೊಟ್ಟೆಯನ್ನಿಟ್ಟು ಅಚ್ಚರಿ ಮೂಡಿಸಿದೆ. ನಿತ್ಯ ಬಿಳಿ ಮೊಟ್ಟೆಯನ್ನೇ ಇಡುತ್ತಿದ್ದ ನಾಟಿ ಕೋಳಿ ನೀಲಿ ಮೊಟ್ಟೆಯನ್ನಿಟ್ಟಿದ್ದನ್ನು ಕಂಡು ಸೈಯ್ಯದ್ ನೂರ್ ಅಚ್ಚರಿಗೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಯ್ಯದ್ ನೂರ್ ಉಪಕಸುಬಾಗಿ ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಸುಮಾರು ಹತ್ತು ನಾಟಿ ಕೋಳಿಗಳನ್ನು ಸಯ್ಯದ್ ನೂರ್ ಸಾಕಿದ್ದಾರೆ. ನೀಲಿ ಮೊಟ್ಟೆಯ ಕಥೆ ಕೇಳಿ ನೀಲಿ ಮೊಟ್ಟೆ ನೋಡಲು ಗ್ರಾಮದ ಜನ ಆಗಮಿಸುತ್ತಿದ್ದಾರೆ. ಜನರು ಬಂದು ನೀಲಿ ಮೊಟ್ಟೆ ಹಿಡಿದುಕೊಂಡು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಕೋಳಿ ಮಾಲೀಕ ಹೇಳಿದ್ದೇನು?
ಈ ಕುರಿತು ಪ್ರತಿಕ್ರಿಯಿಸಿರುವ ಕೋಳಿ ಮಾಲೀಕ ಸಯ್ಯದ್, ಸುಮಾರು 2 ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ಹತ್ತಿಪ್ಪತ್ತು ರೂಪಾಯಿಗೆ ಸಿಗುವ ಕೋಳಿಮರಿ ತೆಗೆದುಕೊಂಡು ಬಂದಿದ್ದೆ. ಇಷ್ಟು ದಿನ ಎಲ್ಲಾ ಕೋಳಿಯಂತೆ ಇದು ಸಹ ಬಿಳಿ ಮೊಟ್ಟೆಯನ್ನಿಡುತ್ತಿತ್ತು. ಭಾನುವಾರ ಮಾತ್ರ ನೀಲಿ ಬಣ್ಣದ ಮೊಟ್ಟೆಯನ್ನಿಟ್ಟಿದೆ. ನಮಗೂ ನೋಡಿ ಒಂದು ಕ್ಷಣ ಆಶ್ವರ್ಯವಾಯ್ತು ಎಂದು ಹೇಳಿದರು.
ನೀಲಿ ಮೊಟ್ಟೆಗೆ ಕಾರಣ ಏನು?
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ನಲ್ಲೂರು ಪಶು ಚಿಕಿತ್ಸಾಲಯದ ಪಶುವೈದ್ಯಾಧಿಕಾರಿ ಡಾ.ರಘುನಾಯ್ಕ್, ಮೆದೋಜೀರಕಾಂಗದಲ್ಲಿ ಬಿಲಿವರ್ಡಿನ್ ಎಂಬ ವರ್ಣ ದ್ರವ್ಯದ ಕಾರಣಕ್ಕೆ ಮೊಟ್ಟೆಗೆ ನೀಲಿ ಬಣ್ಣ ಬಂದಿರುವ ಸಾಧ್ಯತೆ ಇದೆ. ಹೊರಕವಚ ಮಾತ್ರ ನೀಲಿಯಿಂದ ಕೂಡಿರುತ್ತದೆ. ಉಳಿದಂತೆ ಒಳಭಾಗದಲ್ಲಿ ಹಳದಿ, ಬಿಳಿ ಭಾಗವೇ ಇರುತ್ತದೆ' ಎಂದು ತಿಳಿಸಿದ್ದಾರೆ.
ಈ ರೀತಿ ಯಾವಾಗಲೂ ಕೋಳಿಗಳು ನೀಲಿ ಬಣ್ಣದ ಮೊಟ್ಟೆಯನ್ನು ಹಾಕಲ್ಲ. ಪಿಗ್ಮೆಂಟ್ ಕಾರಣದಿಂದ ಅಪರೂಪಕ್ಕೆ ಈ ಬಣ್ಣದ ಮೊಟ್ಟೆಗಳು ಬರುತ್ತದೆ. ಜೆನಿಟಿಕ್ ಸಹ ಇದಕ್ಕೆ ಕಾರಣವಾಗುತ್ತದೆ. ಇದರಿಂದ ಯಾವುದೇ ಆತಂಕಕ್ಕೆ ಒಳಗಾಗೋದು ಬೇಡ ಎಂದು ಡಾ.ರಘುನಾಯ್ಕ್ ಮಾಹಿತಿ ನೀಡಿದ್ದಾರೆ. ಈ ನೀಲಿ ಮೊಟ್ಟೆ ಮತ್ತು ಕೋಳಿಯ ಫೋಟೋ ಹಾಗೂ ವಿಡಿಯೋಗಳು ಸ್ಥಳೀಯವಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.