2026ರ ಐಪಿಎಲ್‌ ಆರಂಭಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಹೊಸ ಮಾಲಿಕರು ಸಿಗುವುದು ಬಹುತೇಕ ಖಚಿತವಾಗಿದೆ. 2 ದಿನಗಳ ಹಿಂದಷ್ಟೇ 2ನೇ ಬಾರಿಗೆ ಡಬ್ಲ್ಯುಪಿಎಲ್‌ ಟ್ರೋಫಿ ಗೆದ್ದ ಫ್ರಾಂಚೈಸಿಯನ್ನು ಖರೀದಿಸಲು ಬರೋಬ್ಬರಿ 9 ಸಂಸ್ಥೆಗಳು ಆಸಕ್ತಿ ತೋರಿವೆ

 ನವದೆಹಲಿ: 2026ರ ಐಪಿಎಲ್‌ ಆರಂಭಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಹೊಸ ಮಾಲಿಕರು ಸಿಗುವುದು ಬಹುತೇಕ ಖಚಿತವಾಗಿದೆ. 2 ದಿನಗಳ ಹಿಂದಷ್ಟೇ 2ನೇ ಬಾರಿಗೆ ಡಬ್ಲ್ಯುಪಿಎಲ್‌ ಟ್ರೋಫಿ ಗೆದ್ದ ಫ್ರಾಂಚೈಸಿಯನ್ನು ಖರೀದಿಸಲು ಬರೋಬ್ಬರಿ 9 ಸಂಸ್ಥೆಗಳು ಆಸಕ್ತಿ ತೋರಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಗ್ಲೇಜರ್‌ ಕುಟುಂಬ, ಆರ್‌ಸಿಬಿ ಫ್ರಾಂಚೈಸಿ ಮೇಲೆ ಕಣ್ಣಿಟ್ಟಿದೆ

ಈ ಪೈಕಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನ ಜನಪ್ರಿಯ ತಂಡವಾದ ಮ್ಯಾಂಚೆಸ್ಟರ್‌ ಯುನೈಟೆಡ್‌ನ ಮಾಲಿಕರಾದ ಗ್ಲೇಜರ್‌ ಕುಟುಂಬ, ಆರ್‌ಸಿಬಿ ಫ್ರಾಂಚೈಸಿ ಮೇಲೆ ಕಣ್ಣಿಟ್ಟಿದೆ. ಅವ್ರಾಂ ಗ್ಲೇಜರ್‌ರ ಲ್ಯಾನ್ಸರ್‌ ಕ್ಯಾಪಿಟಲ್ಸ್‌ ಸಂಸ್ಥೆಯು, ಬರೋಬ್ಬರಿ 1.8 ಬಿಲಿಯನ್‌ ಡಾಲರ್‌ (ಅಂದಾಜು 16311 ಕೋಟಿ ರು.) ಬಿಡ್‌ ಸಲ್ಲಿಸಲು ಆಸಕ್ತಿ ತೋರಿದೆ ಎನ್ನಲಾಗಿದೆ. ಗ್ಲೇಜರ್‌ ಕುಟುಂಬ ಹೊರತುಪಡಿಸಿ ಇನ್ನುಳಿದ 8 ಸಂಸ್ಥೆಗಳಿಂದಲೂ ಆಸಕ್ತಿ ವ್ಯಕ್ತವಾಗಿದ್ದು, ಆ ಸಂಸ್ಥೆಗಳು 1 ಬಿಲಿಯನ್‌ ಡಾಲರ್‌ (ಅಂದಾಜು 9000 ಕೋಟಿ ರು.)ಗೂ ಹೆಚ್ಚು ಮೊತ್ತ ಪಾವತಿಸಲು ಸಿದ್ಧವಿರುವುದಾಗಿ ತಿಳಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆರ್‌ಸಿಬಿ ಖರೀದಿಯ ರೇಸ್‌ನಲ್ಲಿ

ಭಾರತದ ಅದಾರ್‌ ಪೂನಾವಾಲಾ, ಮಣಿಪಾಲ್‌ ಸಮೂಹದ ರಂಜನ್‌ ಪೈ, ಅಜೀಂ ಪ್ರೇಮ್‌ಜಿ ಅವರ ಪ್ರೇಮ್‌ಜಿ ಇನ್ವೆಸ್ಸ್ಟ್‌ ಕೂಡ ಆರ್‌ಸಿಬಿ ಖರೀದಿಯ ರೇಸ್‌ನಲ್ಲಿವೆ ಎಂದು ಹೇಳಲಾಗುತ್ತಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳ ಮೊದಲ ವಾರದಲ್ಲಿ ತಂಡದ ಮಾರಾಟ ಪ್ರಕ್ರಿಯೆ ಮುಕ್ತಾಯಗೊಳ್ಳಬಹುದು ಎನ್ನಲಾಗುತ್ತಿದೆ.

ಇದೇ ವೇಳೆ ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ಕೂಡ ಹೊಸ ಪಾಲುದಾರರ ಹುಡುಕಾಟದಲ್ಲಿದ್ದು, 5 ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿವೆ ಎಂದು ತಿಳಿದುಬಂದಿದೆ.