2 ಗಂಟೆ ಅವಧಿಯಲ್ಲಿ 2 ಚಿನ್ನ ಗೆದ್ದ 19ರ ಆರ್ಚರಿ ಪಟು ಶೀತಲ್‌ ದೇವಿ- ಅಥ್ಲೆಟಿಕ್ಸ್‌ನಲ್ಲಿ ಮುಂದುವರಿದ ಪ್ರಾಬಲ್ಯ । ಪುರುಷರ ಹೈಜಂಪ್‌ ಟಿ63ರಲ್ಲಿ ಭಾರತ ಕ್ಲೀನ್‌ಸ್ವೀಪ್‌ । 88ಕ್ಕೇರಿದ ಭಾರತದ ಪದಕ ಗಳಿಕೆ

ನಗೋಯಾ: 2026ರ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಗುರುವಾರ ಒಂದೇ ದಿನ ಭಾರತ 7 ಚಿನ್ನ ಸೇರಿ ಒಟ್ಟು 26 ಪದಕ ಬಾಚಿಕೊಂಡಿತು. ಸದ್ಯ 21 ಚಿನ್ನ, 26 ಬೆಳ್ಳಿ, 41 ಕಂಚಿನೊಂದಿಗೆ ಒಟ್ಟು 88 ಪದಕ ಜಯಿಸಿರುವ ಭಾರತ, ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.

ಗುರುವಾರ ಎಲ್ಲರ ಗಮನ ಸೆಳೆದಿದ್ದು ಎರಡೂ ಕೈಗಳಿಲ್ಲದ 19 ವರ್ಷದ ಆರ್ಚರಿ ಪಟು ಶೀತಲ್‌ ದೇವಿ. ಕೇವಲ 2 ಗಂಟೆಗಳ ಅಂತರದಲ್ಲಿ ಶೀತಲ್‌ 2 ಚಿನ್ನದ ಪದಕ ಗೆದ್ದರು. ಹಾಲಿ ವಿಶ್ವ ಚಾಂಪಿಯನ್‌, ವಿಶ್ವ ನಂ.1 ಆಗಿರುವ ಶೀತಲ್‌ ಮೊದಲು ತೋಮನ್‌ ಕುಮಾರ್‌ ಜೊತೆ ಸೇರಿ ಕಾಂಪೌಂಡ್‌ ಆರ್ಚರಿಯ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದರು. ಫೈನಲ್‌ನಲ್ಲಿ ಭಾರತೀಯ ಜೋಡಿಯು ಇಂಡೋನೇಷ್ಯಾದ ತಿಯೊಡೊರಾ ಔಡಿ ಹಾಗೂ ಕೆನ್‌ ಸ್ವಾಗುಮಿಲಾಂಗ್‌ ವಿರುದ್ಧ 151-148ರಲ್ಲಿ ಜಯ ಸಾಧಿಸಿತು.

ಬಳಿಕ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಸಿಂಗಾಪುರದ ಅಲಿಂ ನುರ್‌ ವಿರುದ್ಧ 4 ಅಂಕಗಳ ಹಿನ್ನಡೆಯಿಂದ ಪುಟಿದೆದ್ದು 142-139 ಅಂಕಗಳಲ್ಲಿ ಗೆದ್ದು ಚಿನ್ನಕ್ಕೆ ಮುತ್ತಿಟ್ಟರು. ಸತತ 2ನೇ ಬಾರಿ ಪ್ಯಾರಾ ಏಷ್ಯಾಡ್‌ನಲ್ಲಿ ಸ್ವರ್ಣ ಸಾಧನೆ ಮಾಡಿದರು. ಮಹಿಳೆಯರ ತಂಡ ವಿಭಾಗದಲ್ಲಿ ಶೀತಲ್‌ ಬೆಳ್ಳಿ ಜಯಿಸಿದರು. ಕೂಟದಲ್ಲಿ ಒಟ್ಟು 3 ಪದಕಗಳೊಂದಿಗೆ 19 ವರ್ಷದ ಆರ್ಚರ್‌ ಉತ್ತಮ ಸಾಧನೆ ಮಾಡಿದ್ದಾರೆ.

ಮಹಿಳೆಯರ ಡಿಸ್ಕಸ್‌ ಥ್ರೋ ಎಫ್‌54 ವಿಭಾಗದಲ್ಲಿ ಸುವರ್ಣ ರಾಜ್‌ ಚಿನ್ನ ಗೆಲ್ಲುವ ಮೂಲಕ ಭಾರತ ದಿನದ ಖಾತೆ ತೆರೆಯಿತು. ವ್ಹೀಲ್‌ಚೇರ್‌ ಮೇಲೆ ಕೂತು 15 ಮೀ.ಗೂ ಹೆಚ್ಚು ದೂರ ಡಿಸ್ಕಸ್‌ ಎಸೆದ 44 ವರ್ಷದ ಸುವರ್ಣ, ತಮ್ಮ ವೃತ್ತಿಬದುಕಿನ ಅತಿದೊಡ್ಡ ಜಯ ಸಾಧಿಸಿದರು.

ಕ್ಲೀನ್‌ ಸ್ವೀಪ್‌: ದಿನದ ಅತ್ಯಾಕರ್ಷಕ ಪ್ರದರ್ಶನ ಪುರುಷರ ಹೈಜಂಪ್‌ ಟಿ63 ವಿಭಾಗದಲ್ಲಿ ಮೂಡಿಬಂತು. ಈ ಸ್ಪರ್ಧೆಯಲ್ಲಿ ಭಾರತ ಪದಕ ಕ್ಲೀನ್‌ ಸ್ವೀಪ್‌ ಮಾಡಿತು. ಶೈಲೇಶ್‌ ಕುಮಾರ್‌ ಚಿನ್ನ ಗೆದ್ದರೆ, ವರುಣ್‌ ಭಾಟಿ ಹಾಗೂ ರಾಹುಲ್‌ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

ಪುರುಷರ ಟಿ47 ವಿಭಾಗದ 400 ಮೀ. ಓಟದಲ್ಲಿ ದಿಲೀಪ್‌ ಗವಿತ್‌ ಹಾಗೂ ಮಹಿಳೆಯರ 400 ಮೀ. ಓಟದಲ್ಲಿ ಅಂಜನಾಬೆನ್‌ ಚಿನ್ನಕ್ಕೆ ಕೊರಳ್ಳೊಡ್ಡಿದರು.

ಧರ್ಮರಾಜ್‌ ಸೊಲೈರಾಜ್‌ ಪುರುಷರ ಲಾಂಗ್‌ಜಂಪ್‌ ಟಿ44/ಟಿ62/ಟಿ64 ವಿಭಾಗದಲ್ಲಿ 7.15 ಮೀ. ದೂರಕ್ಕೆ ಹಾರಿ ಏಷ್ಯನ್‌ ದಾಖಲೆಯೊಂದಿಗೆ ಚಿನ್ನ ಜಯಿಸುವ ಮೂಲಕ ಭಾರತ, ಗುರುವಾರದ ಸ್ಪರ್ಧೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿತು.

ಅಥ್ಲೆಟಿಕ್ಸ್‌ನಲ್ಲೇ 18 ಚಿನ್ನ ಸೇರಿ ಒಟ್ಟು 52 ಪದಕ!

ನಗೋಗಾ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತ ಅಮೋಘ ಪ್ರದರ್ಶನ ತೋರುತ್ತಿರುವುದರ ಹಿಂದೆ ಅಥ್ಲೀಟ್‌ಗಳ ಕೊಡುಗೆ ದೊಡ್ಡದಿದೆ. ಪ್ಯಾರಾ ಅಥ್ಲೆಟಿಕ್ಸ್‌ನಲ್ಲೇ ಭಾರತ 18 ಚಿನ್ನ, 16 ಬೆಳ್ಳಿ, 18 ಕಂಚು ಗೆದ್ದಿದೆ. ದೇಶಕ್ಕೆ ಸಿಕ್ಕಿರುವ 88 ಪದಕಗಳ ಪೈಕಿ 52 ಪದಕ ಪ್ಯಾರಾ ಅಥ್ಲೆಟಿಕ್ಸ್‌ನಿಂದಲೇ ಬಂದಿದೆ. ಈಜು, ಬ್ಯಾಡ್ಮಿಂಟನ್‌, ಶೂಟಿಂಗ್‌ನಲ್ಲೂ ಭಾರತ ಉತ್ತಮ ಪ್ರದರ್ಶನ ತೋರಿದೆ.

ಕನ್ನಡಿಗ ಸ್ವತಿಕ್‌ಗೆ ಕಂಚು

ಪುರುಷರ ಈಜು ಸ್ಪರ್ಧೆಯ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ಎಸ್‌ಬಿ9 ವಿಭಾಗದಲ್ಲಿ ಕರ್ನಾಟಕದ ಸ್ವತಿಕ್‌ ಪಾಟೀಲ್‌ ಕಂಚಿನ ಪದಕ ಜಯಿಸಿದರು. ಹೀಟ್ಸ್‌ನಲ್ಲಿ 1 ನಿಮಿಷ 18.77 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿದ್ದ ಸ್ವತಿಕ್‌, ಫೈನಲ್‌ನಲ್ಲಿ 1 ನಿಮಿಷ 13.77 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚು ಗಳಿಸಿದರು.

ಈಜು ಪಟು ರವಿಗೆ ಹ್ಯಾಟ್ರಿಕ್‌ ಪದಕ!

ಆಂಧ್ರದ ರವಿ ಬುದಿಗಿನ ಕೂಟದಲ್ಲಿ 3ನೇ ಪದಕ ಜಯಿಸಿದ್ದಾರೆ. ಗುರುವಾರ ಪುರುಷರ 50 ಮೀ. ಫ್ರೀಸ್ಟೈಲ್‌ ಎಸ್‌13 ವಿಭಾಗದಲ್ಲಿ ಕಂಚು ಜಯಿಸಿದರು. 18 ವರ್ಷದ ಅಂಧ ಈಜುಪಟು ರವಿ 100 ಮೀ. ಬ್ಯಾಕ್‌ಸ್ಟ್ರೋಕ್‌, 100 ಮೀ. ಫ್ರೀ ಸ್ಟೈಲ್‌ನಲ್ಲಿ ಬೆಳ್ಳಿ ಜಯಿಸಿದ್ದರು.

ಐಎಎಸ್‌ ಅಧಿಕಾರಿ, ಕನ್ನಡಿಗ ಸುಹಾಸ್‌ಗೆ ಬ್ಯಾಡ್ಮಿಂಟನ್‌ ಕಂಚು

ಉತ್ತರ ಪ್ರದೇಶ ಕೇಡರ್‌ ಐಎಎಸ್‌ ಅಧಿಕಾರಿ, ಆ ರಾಜ್ಯದ ಕ್ರೀಡಾ ಇಲಾಖೆ ಕಾರ್ಯದರ್ಶಿ, ಕರ್ನಾಟಕದ ಸುಹಾಸ್‌ ಯತಿರಾಜ್‌ ಅವರು ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಪುರುಷರ ಎಸ್‌ಎಲ್‌4 ವಿಭಾಗದ ಸಿಂಗಲ್ಸ್‌ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಸುಹಾಸ್‌ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್‌ ವಿರುದ್ಧ 1-2 ಗೇಮ್‌ಗಳಲ್ಲಿ ಸೋಲುಂಡರು.

ಇನ್ನು, ಪ್ಯಾರಾಲಿಂಪಿಕ್‌ ಚಿನ್ನ ವಿಜೇತ ಪ್ರಮೋದ್‌ ಭಗತ್‌ ಫೈನಲ್‌ ಪ್ರವೇಶಿಸಿದ್ದು, ಸ್ವರ್ಣ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

150 ಚಿನ್ನ ಗೆದ್ದ ಚೀನಾ, ಒಟ್ಟು ಪದಕ ಗಳಿಕೆ 314!

ಏಷ್ಯನ್‌ ಗೇಮ್ಸ್‌ನಂತೆ ಪ್ಯಾರಾ ಗೇಮ್ಸ್‌ನಲ್ಲೂ ಚೀನಾ ಪರಾಕ್ರಮ ಮೆರೆಯುತ್ತಿದೆ. 4 ದಿನಗಳಲ್ಲಿ ಚೀನಾದ ಕ್ರೀಡಾಪಟುಗಳು 150 ಚಿನ್ನ ಗೆದ್ದಿದ್ದಾರೆ. ಇದರ ಜೊತೆಗೆ 79 ಬೆಳ್ಳಿ, 85 ಕಂಚೂ ಸೇರಿ ಒಟ್ಟು 314 ಪದಕಗಳು ಚೀನಾದ ತೆಕ್ಕೆಗೆ ಬಿದ್ದಿವೆ. ಚೀನಾದ ಹತ್ತಿರದ ಸ್ಪರ್ಧಿ, 2ನೇ ಸ್ಥಾನದಲ್ಲಿರುವ ಜಪಾನ್‌ ಗೆದ್ದಿರುವ 40 ಚಿನ್ನ, 46 ಬೆಳ್ಳಿ, 50 ಕಂಚು ಸೇರಿ ಒಟ್ಟು 136 ಪದಕ. 38 ಚಿನ್ನ, 41 ಬೆಳ್ಳಿ, 41 ಕಂಚಿನೊಂದಿಗೆ ಒಟ್ಟು 120 ಪದಕ ಜಯಿಸಿರುವ ಉಜ್ಬೇಕಿಸ್ತಾನ 3ನೇ ಸ್ಥಾನದಲ್ಲಿದೆ.