ಭಾರತದ ಪುರುಷ ಹಾಗೂ ಮಹಿಳಾ ಕಬಡ್ಡಿ ತಂಡಗಳು ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಪಟ್ಟ ಉಳಿಸಿಕೊಂಡಿವೆ. ಶನಿವಾರ ನಡೆದ ಫೈನಲ್‌ನಲ್ಲಿ ಇರಾನ್‌ ವಿರುದ್ಧ ಗೆಲುವು ಸಾಧಿಸಿದ ಉಭಯ ತಂಡಗಳು, ಚಿನ್ನಕ್ಕೆ ಮುತ್ತಿಟ್ಟವು. ಇದರೊಂದಿಗೆ ಭಾರತದ ಚಿನ್ನ ಗಳಿಕೆ 4ಕ್ಕೆ ಏರಿಕೆ ಆಯಿತು.

ನಗೋಯಾ: ಭಾರತದ ಪುರುಷ ಹಾಗೂ ಮಹಿಳಾ ಕಬಡ್ಡಿ ತಂಡಗಳು ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಪಟ್ಟ ಉಳಿಸಿಕೊಂಡಿವೆ. ಶನಿವಾರ ನಡೆದ ಫೈನಲ್‌ನಲ್ಲಿ ಇರಾನ್‌ ವಿರುದ್ಧ ಗೆಲುವು ಸಾಧಿಸಿದ ಉಭಯ ತಂಡಗಳು, ಚಿನ್ನಕ್ಕೆ ಮುತ್ತಿಟ್ಟವು. ಇದರೊಂದಿಗೆ ಭಾರತದ ಚಿನ್ನ ಗಳಿಕೆ 4ಕ್ಕೆ ಏರಿಕೆ ಆಯಿತು.

ಅಥ್ಲೆಟಿಕ್ಸ್‌, ಶೂಟಿಂಗ್‌ನಲ್ಲಿ ಭಾರತ ಮಿಶ್ರ ಫಲ

ಅಥ್ಲೆಟಿಕ್ಸ್‌, ಶೂಟಿಂಗ್‌ನಲ್ಲಿ ಭಾರತ ಮಿಶ್ರ ಫಲ ಅನುಭವಿಸಿತು. ಮ್ಯಾರಥಾನ್‌ನಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ಭಾರತ, ಕೆಲ ಪ್ರಮುಖ ಅಥ್ಲೀಟ್‌ಗಳನ್ನು ಗಾಯಗೊಂಡಿದ್ದರಿಂದ ನಿರಾಸೆಯನ್ನೂ ಅನುಭವಿಸಿತು. ಶೂಟಿಂಗ್‌ನಲ್ಲಿ ಒಂದು ಬೆಳ್ಳಿ ಲಭಿಸಿದರೆ, 3 ಕಂಚಿನ ಪದಕಗಳೂ ಸಿಕ್ಕವು. ಒಟ್ಟಾರೆ, ಕೂಟದ 8ನೇ ದಿನ ಭಾರತಕ್ಕೆ 7 ಪದಕ ಸಿಕ್ಕಿತು. ದೇಶವು 4 ಚಿನ್ನ, 12 ಬೆಳ್ಳಿ, 14 ಕಂಚಿನೊಂದಿಗೆ ಒಟ್ಟು 30 ಪದಕ ಗೆದ್ದು ಪದಕ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ.

ಕಬಡ್ಡಿ ತಂಡಗಳ ಪಾರಮ್ಯ

ಭಾರತ ಪುರುಷರ ತಂಡ, ಫೈನಲ್‌ನಲ್ಲಿ ಬಲಿಷ್ಠ ಇರಾನ್‌ ವಿರುದ್ಧ 40-34 ಅಂತರದಲ್ಲಿ ಗೆಲುವು ಸಾಧಿಸಿತು. ತಂಡಕ್ಕೆ ಇದು ಏಷ್ಯನ್‌ ಗೇಮ್ಸ್‌ನಲ್ಲಿ ಒಟ್ಟಾರೆ 9ನೇ ಚಿನ್ನ. ಮೊದಲಾರ್ಧದ ಮುಕ್ತಾಯಕ್ಕೆ 17-18ರ ಅಲ್ಪ ಹಿನ್ನಡೆ ಅನುಭವಿಸಿದ್ದ ಭಾರತ, ದ್ವಿತೀಯಾರ್ಧದಲ್ಲಿ ಪುಟಿದೆದ್ದು ಚಿನ್ನ ತನ್ನದಾಗಿಸಿಕೊಂಡಿತು. ಇನ್ನು, ಮಹಿಳೆಯರ ಫೈನಲ್‌ನಲ್ಲಿ ಭಾರತ 37-34ರಲ್ಲಿ ಇರಾನ್‌ ವಿರುದ್ಧ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 4ನೇ ಬಾರಿಗೆ ಚಿನ್ನಕ್ಕೆ ಮುತ್ತಿಟ್ಟಿತು.

ಕನ್ನಡಿಗ ಕೋಚ್‌ಗಳು: ಭಾರತ ಪುರುಷ ಹಾಗೂ ಮಹಿಳಾ ತಂಡಗಳ ಸ್ವರ್ಣ ಸಾಧನೆ ಹಿಂದೆ ಕನ್ನಡಿಗರ ಕೊಡುಗೆಯೂ ಇದೆ. ಪುರುಷರ ತಂಡಕ್ಕೆ ಬಿ.ಸಿ.ರಮೇಶ್‌ ಹಾಗೂ ಮಹಿಳಾ ತಂಡಕ್ಕೆ ಮಮತಾ ಪೂಜಾರಿ ಸಹಾಯಕ ಕೋಚ್‌ಗಳಾಗಿದ್ದಾರೆ.