ಸಾರಾಂಶ
ರಾಹುಲ್ ದ್ರಾವಿಡ್ ಬಳಿಕ ಭಾರತ ತಂಡದ ‘ಗೋಡೆ’ಯಾಗಿದ್ದ, ತಮ್ಮ ಕೆಚ್ಚೆದೆಯ ಹೋರಾಟದ ಮೂಲಕವೇ ತಜ್ಞ ಟೆಸ್ಟ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಚೇತೇಶ್ವರ ಪೂಜಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ನವದೆಹಲಿ: ರಾಹುಲ್ ದ್ರಾವಿಡ್ ಬಳಿಕ ಭಾರತ ತಂಡದ ‘ಗೋಡೆ’ಯಾಗಿದ್ದ, ತಮ್ಮ ಕೆಚ್ಚೆದೆಯ ಹೋರಾಟದ ಮೂಲಕವೇ ತಜ್ಞ ಟೆಸ್ಟ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಚೇತೇಶ್ವರ ಪೂಜಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 2 ದಶಕಗಳ ತಮ್ಮ ವೃತ್ತಿಪರ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಭಾನುವಾರ 37 ವರ್ಷದ ಪೂಜಾರ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
2005ರಲ್ಲಿ ಸೌರಾಷ್ಟ್ರ ಪರ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದ ಪೂಜಾರ, ಈ ಮಾದರಿಯಲ್ಲಿ 278 ಪಂದ್ಯಗಳಲ್ಲಿ 21301 ರನ್ ಗಳಿಸಿದ್ದಾರೆ. 66 ಶತಕ, 81 ಅರ್ಧಶತಕದ ಸಾಧನೆ ಮಾಡಿರುವ ಅವರು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಭಾರಯೀತ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
2010ರಲ್ಲಿ ಭಾರತ ಪರ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಪೂಜಾರ, 2023ರ ವರೆಗೂ 103 ಟೆಸ್ಟ್‌ಗಳಲ್ಲಿ 19 ಶತಕ, 35 ಅರ್ಧಶತಕಗಳೊಂದಿಗೆ 7195 ರನ್ ಕಲೆಹಾಕಿದ್ದಾರೆ. ಭಾರತದ ಪರ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಅವರು 2013-14ರಲ್ಲಿ 5 ಏಕದಿನ ಪಂದ್ಯ ಸೇರಿದಂತೆ ಒಟ್ಟು 130 ಲಿಸ್ಟ್ ‘ಎ’ ಪಂದ್ಯಗಳಲ್ಲಿ ಆಡಿದ್ದಾರೆ. ಐಪಿಎಲ್‌ನ ಆರ್‌ಸಿಬಿ, ಚೆನ್ನೈ, ಕೋಲ್ಕತಾ, ಪಂಜಾಬ್‌ನ ಭಾಗವಾಗಿದ್ದ ಅವರು, 71 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಅವರು ಭಾರತ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಈ ವರ್ಷ ಫೆಬ್ರವರಿಯಲ್ಲಿ ಸೌರಾಷ್ಟ್ರ ಪರ ಕೊನೆ ಬಾರಿ ರಣಜಿ ಆಡಿದ್ದರು.
ಟೆಸ್ಟ್ ಸರಣಿಗಳಲ್ಲಿ
ಭಾರತದ ವಾಲ್!
ಕನ್ನಡಿಗ ರಾಹುಲ್ ದ್ರಾವಿಡ್ ಬಳಿಕ ಭಾರತ ತಂಡಕ್ಕೆ ಸಿಕ್ಕ ತಜ್ಞ, ಸಮರ್ಥ ಟೆಸ್ಟ್ ಬ್ಯಾಟರ್ ಆಗಿದ್ದರು ಪೂಜಾರ. ತಂಡದ ಆಪತ್ಕಾಲದಲ್ಲಿ ಕ್ರೀಸ್‌ನಲ್ಲಿ ಬಂಡೆಯಂತೆ ನಿಂತು, ವಿಕೆಟ್ ಉರುಳದಂತೆ ನೋಡಿಕೊಳ್ಳುವ ಮೂಲಕ 2ನೇ ವಾಲ್(ಗೋಡೆ) ಎಂದೇ ಖ್ಯಾತರಾಗಿದ್ದರು. ವೇಗವಾಗಿ ಮುನ್ನುಗ್ಗುವ ಚೆಂಡುಗಳು ತಮ್ಮ ಎದೆ, ಕೈ, ಬೆನ್ನು, ಬೆರಳು, ಹೆಲ್ಮೆಟ್‌ಗೆ ಬಡಿದರೂ ದಿಟ್ಟವಾಗಿ ಹೋರಾಡುವ ಮೂಲಕವೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. 2018, 2021ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಸರಣಿ ಗೆದ್ದಾಗ ಅದರ ಹಿಂದಿನ ಮಾಸ್ಟರ್‌ಮೈಂಡ್‌ರಗಳಲ್ಲಿ ಪೂಜಾರ ಕೂಡಾ ಪ್ರಮುಖರು. ಆದರೆ 2023ರ ಬಳಿಕ ಪೂಜಾರಗೆ ಸ್ಥಾನ ಸಿಗಲಿಲ್ಲ. ಆಯ್ಕೆ ಸಮಿತಿಯು ಯುವ ಆಟಗಾರರಿಗೆ ಮಣೆ ಹಾಕಿದ ಕಾರಣ, ಪೂಜಾರ ಅನಿವಾರ್ಯವಾಗಿ ಕಾಮೆಂಟ್ರಿಯಲ್ಲಿ ತೊಡಗಿಸಿಕೊಳ್ಳಬೇಕಾಯಿತು.
ಕ್ರಿಕೆಟಿಗರ ಶ್ಲಾಘನೆ
ಭಾರತ ಟೆಸ್ಟ್‌ನ ಅತ್ಯುತ್ತಮ ಆಟಗಾರರ ಪೈಕಿ ಒಬ್ಬರಾದ ಪೂಜಾರಗೆ ಹಲವು ಹಾಲಿ, ಮಾಜಿ ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ. ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಅನಿಲ್ ಕುಂಬ್ಳೆ, ರವಿ ಶಾಸ್ತ್ರಿ, ವಿರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್ ಸೇರಿ ಹಲವರು ಭಾರತೀಯ ಕ್ರಿಕೆಟ್‌ಗೆ ಪೂಜಾರ ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.
ರಾಜ್‌ಕೋಟ್ ಎಂಬ ಸಣ್ಣ ಪಟ್ಟಣದ ಹುಡುಗನಾಗಿದ್ದಾಗ ಹೆತ್ತವರೊಂದಿಗೆ ನಕ್ಷತ್ರಗಳನ್ನು ಗುರಿಯಾಗಿಸಿ ಹೊರಟಿದ್ದೆ ಮತ್ತು ಭಾರತ ಕ್ರಿಕೆಟ್ ತಂಡದ ಭಾಗವಾಗುವ ಕನಸು ಕಂಡಿದ್ದೆ. ಕ್ರಿಕೆಟ್ ನನಗೆ ಅವಕಾಶ, ಅನುಭವ, ಪ್ರೀತಿ ಎಲ್ಲಕಿಂತ ಹೆಚ್ಚಾಗಿ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ಸೌಭಾಗ್ಯ ನೀಡಿದೆ. ಎಲ್ಲಾ ಒಳ್ಳೆಯ ಕಾರ್ಯಕ್ಕೂ ಅಂತ್ಯವಿದೆ ಮತ್ತು ಅಪಾರ ಕೃತಜ್ಞತೆಯೊಂದಿಗೆ ನಾನು ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ.
ಚೇತೇಶ್ವರ್ ಪೂಜಾರ, ಮಾಜಿ ಕ್ರಿಕೆಟಿಗ