ದೇಸಿ ಕ್ರಿಕೆಟ್‌: ಗಂಭೀರ ಗಾಯವಾದರೆ ಇನ್ನು ಬದಲಿ ಬ್ಯಾಟರ್‌, ಬೌಲರ್ ಕಣಕ್ಕೆ!

| Published : Aug 17 2025, 01:32 AM IST

ಸಾರಾಂಶ

2025-26ರ ಋತುವಿನ ಬಹು ದಿನಗಳ ಪಂದ್ಯಗಳಲ್ಲಿ ಬಿಸಿಸಿಐ ಹೊಸ ನಿಯಮ ಜಾರಿಈವರೆಗೆ ತಲೆಗೆ ಗಾಯವಾದರೆ ಮಾತ್ರ ಬದಲಿ ಆಟಗಾರನಿಗೆ ಆಡುವ ಅವಕಾಶವಿತ್ತು

ನವದೆಹಲಿ: ದೇಸಿ ಕ್ರಿಕೆಟ್‌ ಟೂರ್ನಿಯ ಬಹು ದಿನಗಳ ಪಂದ್ಯಗಳಲ್ಲಿ ಆಟಗಾರರ ಗಾಯದ ವಿಚಾರದಲ್ಲಿ ಬಿಸಿಸಿಐ ಹೊಸ ನಿಮಯ ಜಾರಿಗೊಳಿಸಲಿದೆ. 2025-26ರ ಋತುವಿನ ಟೂರ್ನಿಯಲ್ಲಿ ಯಾವುದೇ ಆಟಗಾರ ಗಂಭೀರವಾಗಿ ಗಾಯಗೊಂಡರೆ ಅವರ ಬದಲು ಬೇರೊಬ್ಬ ಬ್ಯಾಟರ್‌, ಬೌಲರ್‌ ಕಣಕ್ಕಿಳಿಯಲು ಅವಕಾಶ ನೀಡಲಿದೆ. ಈವರೆಗೂ ಪಂದ್ಯದ ವೇಳೆ ತಲೆಗೆ ಪೆಟ್ಟು ಬಿದ್ದು(ಕನ್ಕಶನ್‌ ಸಬ್‌ಸ್ಟಿಟ್ಯೂಟ್‌) ಆಟಗಾರ ಹೊರಗುಳಿದರೆ ಮಾತ್ರ ಬೇರೊಬ್ಬ ಆಟಗಾರನಿಗೆ ಬ್ಯಾಟಿಂಗ್‌ ಅಥವಾ ಬೌಲಿಂಗ್‌ ಅವಕಾಶವಿತ್ತು. ತಲೆ ಹೊರತು ಬೇರೆ ರೀತಿಯ ಗಾಯವಾಗಿ ಆಟಗಾರ ಪಂದ್ಯದಿಂದ ಹೊರಬಿದ್ದರೂ ಬದಲಿ ಆಟಗಾರನಿಗೆ ಕೇವಲ ಫೀಲ್ಡಿಂಗ್‌ಗೆ ಅವಕಾಶ ನೀಡಲಾಗುತ್ತಿತ್ತು. ಇನ್ನು ಮುಂದೆ ದೇಸಿ ಕ್ರಿಕೆಟ್‌ನ ಬಹು ದಿನಗಳ (ರಣಜಿ ಟ್ರೋಫಿ, ಸಿ.ಕೆ.ನಾಯ್ಡು ಅಂಡರ್‌-19) ಟೂರ್ನಿಗಳಲ್ಲಿ ಆಟಗಾರನಿಗೆ ಗಂಭೀರ ಗಾಯ ಅಂದರೆ ಮೂಳೆ ಮುರಿತ, ಆಳವಾದ ಗಾಯವಾದರೆ ಬೇರೊಬ್ಬ ಆಟಗಾರನಿಗೆ ಬ್ಯಾಟಿಂಗ್‌, ಬೌಲಿಂಗ್‌ ಅವಕಾಶ ಸಿಗಲಿದೆ. ಆದರೆ ಮುಷ್ತಾಕ್‌ ಅಲಿ ಟಿ20, ವಿಜಯ್‌ ಹಜಾರೆ ಏಕದಿನದಲ್ಲಿ ಸದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಈ ಬಗ್ಗೆ ಅಹಮದಾಬಾದ್‌ನಲ್ಲಿ ನಡೆದ ಅಂಪೈರ್‌ಗಳ ಸೆಮಿನಾರ್‌ನಲ್ಲಿ ವಿವರಣೆ ನೀಡಲಾಗಿದೆ. ಮುಂದಿನ ಋತುವಿನಲ್ಲಿ ಜಾರಿಗೆ ಬರಲಿದೆ. ಹೊಸ ನಿಯಮದಲ್ಲೇನಿದೆ?

ಆಟಗಾರ ಪಂದ್ಯದ ವೇಳೆ, ಮೈದಾನದಲ್ಲಿ ಗಾಯಗೊಂಡರೆ ಮಾತ್ರ ನಿಯಮ ಅನ್ವಯವಾಗಲಿದೆ. ಗಾಯಗೊಂಡ ಆಟಗಾರನ ಬಗ್ಗೆ ಅಂಪೈರ್‌ಗಳು ಮ್ಯಾಚ್‌ ರೆಫ್ರಿ/ವೈದ್ಯರಿಗೆ ಮಾಹಿತಿ ನೀಡಬೇಕು. ಅವರು ಪರಿಶೀಲನೆ ನಡೆಸುತ್ತಾರೆ. ಆಟಗಾರ ಆಡುವುದು ಸೂಕ್ತವಲ್ಲ ಎಂದು ಪರಿಗಣಿಸಿದರೆ ಬೇರೊಬ್ಬ ಆಟಗಾರನನ್ನು ಆಡಲು ಅವಕಾಶ ಕೊಡುತ್ತಾರೆ. ಅಂದರೆ ಬ್ಯಾಟರ್‌ ಗಾಯಗೊಂಡರೆ ಅವರ ಬದಲು ಮತ್ತೋರ್ವ ಬ್ಯಾಟರ್‌, ಬೌಲರ್‌ ಗಾಯಗೊಂಡರೆ ಬೇರೊಬ್ಬ ಬೌಲರ್‌, ವಿಕೆಟ್‌ ಕೀಪರ್‌ ಆದರೆ ಮತ್ತೋರ್ವ ವಿಕೆಟ್‌ ಕೀಪರ್‌ಗೆ ಅವಕಾಶ ನೀಡಲಾಗುತ್ತದೆ. ಬಳಿಕ ಗಾಯಾಳು ಆಟಗಾರನಿಗೆ ಆ ಪಂದ್ಯದಲ್ಲಿ ಮುಂದುವರಿಯಲು ಅವಕಾಶವಿರುವುದಿಲ್ಲ. ಬದಲಿ ಆಟಗಾರರ ಪಟ್ಟಿಯನ್ನು ತಂಡ ಟಾಸ್‌ ವೇಳೆ ನೀಡಬೇಕಾಗುತ್ತದೆ.ರಿಷಭ್‌ ಪಂತ್‌ ಗಾಯ ಬಳಿಕ ಹೆಚ್ಚಾಗಿದ್ದ ಚರ್ಚೆ

ಇತ್ತೀಚಿನ ಇಂಗ್ಲೆಂಡ್‌ ವಿರುದ್ಧ ಸರಣಿಯ 4ನೇ ಪಂದ್ಯದಲ್ಲಿ ರಿಷಭ್‌ ಪಂತ್‌ ಕಾಲು ಮುರಿದುಕೊಂಡು ಪಂದ್ಯದಿಂದ ಹೊರಬಿದ್ದಿದ್ದರು. ಅವರ ಬದಲು ಧ್ರುವ್‌ ಜುರೆಲ್‌ ವಿಕೆಟ್‌ ಕೀಪಿಂಗ್‌ ಮಾಡಿದ್ದರೂ ನಿಯಮ ಪ್ರಕಾರ ಬ್ಯಾಟಿಂಗ್‌ಗೆ ಅವಕಾಶವಿರಲಿಲ್ಲ. ಪಂದ್ಯದ ಬಳಿಕ ಮಾತನಾಡಿದ್ದ ಭಾರತದ ಕೋಚ್‌ ಗೌತಮ್‌ ಗಂಭೀರ್‌, ಬದಲಿ ಆಟಗಾರರಿಗೂ ಬ್ಯಾಟಿಂಗ್‌, ಬೌಲಿಂಗ್‌ ಅವಕಾಶ ಕೊಡುವ ಬಗ್ಗೆ ಮಾತನಾಡಿದ್ದರು. ಆದರೆ ಇದಕ್ಕೆ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ವಿರೋಧ ವ್ಯಕ್ತಪಡಿಸಿದ್ದರು. ಇದು ಬದಲಿ ಆಟಗಾರ ನಿಯಮ ಪರಿಷ್ಕರಣೆ ಬಗೆಗಿನ ಚರ್ಚೆಗೆ ನಾಂದಿ ಹಾಡಿತ್ತು.

ಐಪಿಎಲ್‌ನಲ್ಲೂ ಹೊಸ ನಿಯಮ ಜಾರಿ ಚಿಂತನೆ

ಸದ್ಯ ಬಿಸಿಸಿಐ ಈ ನಿಮಯವನ್ನು ದೇಸಿ ಕ್ರಿಕೆಟ್‌ನ ಬಹು ದಿನಗಳ ಟೂರ್ನಿಗಳಲ್ಲಿ ಮಾತ್ರ ಪರಿಚಯಿಸಲಿದೆ. ವರದಿಗಳ ಪ್ರಕಾರ, ಮುಂದಿನ ಐಪಿಎಲ್‌ನಲ್ಲೂ ಈ ನಿಯಮವನ್ನು ಜಾರಿಗೊಳಿಸಲು ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.