ಸಾರಾಂಶ
ಗುವಾಹಟಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯಕ್ಕೂ ಮುನ್ನ ಪಿಚ್ ಪರಿಶೀಲನೆ ನಡೆಸಲು ರಾಜಸ್ಥಾನ ರಾಯಲ್ಸ್ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ವ್ಹೀಲ್‌ಚೇರ್‌ನಲ್ಲಿ ಮೈದಾನಕ್ಕೆ ಆಗಮಿಸಿದರು. ಇತ್ತೀಚೆಗೆ ಬೆಂಗಳೂರಲ್ಲಿ ತಮ್ಮ ಮಗನ ಜೊತೆ ಕೆಎಸ್‌ಸಿಎ ಡಿವಿಜನ್ ಕ್ರಿಕೆಟ್ ಪಂದ್ಯವನ್ನಾಡುವಾಗ ದ್ರಾವಿಡ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಗಾಯದ ನಡುವೆಯೇ ಐಪಿಎಲ್‌ನಲ್ಲಿ ಕೋಚಿಂಗ್ ಜವಾಬ್ದಾರಿ ನಿರ್ವಹಿಸುತ್ತಿರುವ ದ್ರಾವಿಡ್, ವ್ಹೀಲ್‌ಚೇರ್‌ನಲ್ಲಿ ಪಿಚ್ ಪರಿಶೀಲನೆಗೆ ಆಗಮಿಸಿದ ವಿಡಿಯೋ, ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಹೆಚ್ಚುವರಿ ಉಚಿತ ಪಾಸ್ ನೀಡದ್ದಕ್ಕೆ ಎಚ್‌ಸಿಎ ಅಧ್ಯಕ್ಷರಿಂದ ಧಮ್ಕಿ: ಸನ್‌ರೈಸರ್ಸ್ ಆರೋಪ
ಹೈದರಾಬಾದ್: ಐಪಿಎಲ್ ಪಂದ್ಯಗಳಿಗೆ ಹೆಚ್ಚುವರಿ ಉಚಿತ ಪಾಸ್‌ಗಳನ್ನು ನೀಡದ್ದಕ್ಕೆ, ತಮಗೆ ಪ್ರತ್ಯೇಕವಾಗಿ ಟಿಕೆಟ್‌ಗಳನ್ನು ಖರೀದಿಸಲು ವ್ಯವಸ್ಥೆ ಮಾಡದ್ದಕ್ಕೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜಗನ್ ಮೋಹನ್ ತಮ್ಮ ತಂಡದ ಸಿಬ್ಬಂದಿಗೆ ಧಮ್ಕಿ ಹಾಕಿದ್ದಾರೆ ಎಂದು ಸನ್‌ರೈಸರ್ಸ್ ತಂಡ ಆರೋಪಿಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತನ್ನ ತವರಿನ ಪಂದ್ಯಗಳನ್ನು ಆಡುವ ಸನ್‌ರೈಸರ್ಸ್, ಎಚ್‌ಸಿಎಗೆ 3900 ಉಚಿತ ಪಾಸ್‌ಗಳನ್ನು ವಿತರಿಸಿತ್ತು. ಇನ್ನಷ್ಟು ಪಾಸ್‌ಗಳನ್ನು ಕೊಡಬೇಕು, ಇಲ್ಲದಿದ್ದರೆ ಆಡಲು ಅಡ್ಡಿಪಡಿಸುವುದಾಗಿ ಜಗನ್ ಬೆದರಿಕೆ ಹಾಕಿದ್ದಾರೆ. ಜೊತೆಗೆ ಲಖನೌ ವಿರುದ್ಧದ ಪಂದ್ಯ ಆರಂಭಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇದ್ದಾಗ, ಲಖನೌ ತಂಡದ ಮಾಲಿಕರಿಗೆ ಮೀಸಲಿರಿಸಿದ್ದ ವಿಐಪಿ ಬಾಕ್ಸ್‌ಗೆ ಬೀಡ ಜಡಿದು ಸಮಸ್ಯೆ ಉಂಟು ಮಾಡಿದ್ದಾರೆ ಎಂದು ಸನ್‌ರೈಸರ್ಸ್ ಬಿಸಿಸಿಐಗೆ ದೂರು ಸಲ್ಲಿಸಿದೆ ಎನ್ನಲಾಗಿದೆ.
ಏಷ್ಯಾ ಕುಸ್ತಿ: ದೀಪಕ್, ಉದಿತ್ ಬೆಳ್ಳಿಗೆ ತೃಪ್ತಿ
ಅಮ್ಮಾನ್ (ಜೋರ್ಡನ್): ಭಾನುವಾರ ಇಲ್ಲಿ ಮುಕ್ತಾಯಗೊಂಡ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ದೀಪಕ್ ಪೂನಿಯಾ ಹಾಗೂ ಉದಿತ್ ಬೆಳ್ಳಿ ಪದಕ ಪಡೆದರೆ, ದಿನೇಶ್ ಕಂಚಿನ ಪದಕ ಗಳಿಸಿದರು. ಪುರುಷರ 92 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ದೀಪಕ್, ವಿಶ್ವ ನಂ.1 ಇರಾನ್‌ನ ಅಮಿರ್‌ಹೊಸೈನ್ ವಿರುದ್ಧ ಸೋಲುಂಡರು. ದೀಪಕ್‌ಗಿದು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 3ನೇ ಬೆಳ್ಳಿ ಪದಕ. 61 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಉದಿತ್, ವಿಶ್ವ ನಂ.1 ಜಪಾನ್‌ನ ತಕಾರ ಸುಡಾ ವಿರುದ್ಧ ಸೋಲುಂಡರು. ಇನ್ನು 125 ಕೆ.ಜಿ. ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ದಿನೇಶ್, ತುರ್ಕ್‌ಮೇನಿಸ್ತದ ಸಪರೊವ್ ವಿರುದ್ಧ ಜಯಿಸಿದರು.