₹5 ಕೋಟಿ ಬೇಡ, ₹2.5 ಕೋಟಿ ಸಾಕು ಎಂದ ರಾಹುಲ್‌ ದ್ರಾವಿಡ್‌!

| Published : Jul 11 2024, 01:32 AM IST / Updated: Jul 11 2024, 04:19 AM IST

ಸಾರಾಂಶ

ವಿಶ್ವಕಪ್‌ ಗೆದ್ದಿದ್ದಕ್ಕಾಗಿ ತಂಡಕ್ಕೆ ₹125 ಕೋಟಿ ನಗದು ಬಹುಮಾನ ಘೋಷಿಸಿದ್ದ ಬಿಸಿಸಿಐ. ಪ್ರತಿ ಆಟಗಾರರಿಗೆ ಹಾಗೂ ಕೋಚ್‌ ಆಗಿದ್ದ ದ್ರಾವಿಡ್‌ಗೆ ತಲಾ ₹5 ಕೋಟಿ, ಸಹಾಯಕ ಸಿಬ್ಬಂದಿಗೆ ₹2.5 ಕೋಟಿ ಹಂಚುವ ನಿರ್ಧಾರವಾಗಿತ್ತು.

ನವದೆಹಲಿ: ಭಾರತ ತಂಡದ ನಿರ್ಗಮಿತ ಕೋಚ್‌ ರಾಹುಲ್‌ ದ್ರಾವಿಡ್‌, ಟಿ20 ವಿಶ್ವಕಪ್‌ ಗೆದ್ದ ಬಳಿಕ ತಮಗೆ ಬಿಸಿಸಿಐ ನೀಡಿದ ₹5 ಕೋಟಿ ಬೋನಸ್‌ ಹಣವನ್ನು ನಿರಾಕರಿಸಿದ್ದಾರೆ. ಬದಲಾಗಿ ಇತರ ಸಹಾಯಕ ಕೋಚ್‌ಗಳಿಗೆ ನೀಡುವಷ್ಟೇ ಅಂದರೆ ₹2.5 ಕೋಟಿ ಮಾತ್ರ ಸಾಕು ಎಂದು ಹೇಳಿದ್ದಾಗಿ ತಿಳಿದುಬಂದಿದೆ. 

ವಿಶ್ವಕಪ್‌ ಗೆದ್ದಿದ್ದಕ್ಕಾಗಿ ಬಿಸಿಸಿಐ ತಂಡಕ್ಕೆ ₹125 ಕೋಟಿ ನಗದು ಬಹುಮಾನ ಘೋಷಿಸಿತ್ತು. ಇದರಲ್ಲಿ ಪ್ರತಿ ಆಟಗಾರರಿಗೆ ಹಾಗೂ ಕೋಚ್‌ ಆಗಿದ್ದ ದ್ರಾವಿಡ್‌ಗೆ ತಲಾ ₹5 ಕೋಟಿ, ಸಹಾಯಕ ಸಿಬ್ಬಂದಿಗೆ ₹2.5 ಕೋಟಿ ಹಂಚುವ ನಿರ್ಧಾರವಾಗಿತ್ತು. ಆದರೆ ಸಹಾಯಕ ಕೋಚ್‌ಗಳಿಗಿಂತ ಹೆಚ್ಚು ಮೊತ್ತ ಸ್ವೀಕರಿಸಲು ದ್ರಾವಿಡ್‌ ನಿರಾಕರಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

2018ರಲ್ಲೂ ಕಡಿಮೆ ಹಣ ಕೇಳಿದ್ದ ದ್ರಾವಿಡ್‌

2018ರಲ್ಲಿ ಭಾರತ ಅಂಡರ್‌-19 ವಿಶ್ವಕಪ್‌ ಗೆದ್ದಾಗ ದ್ರಾವಿಡ್‌ ತಂಡದ ಕೋಚ್‌ ಆಗಿದ್ದರು. ಕಪ್‌ ಗೆದ್ದಿದ್ದಕ್ಕೆ ಬಿಸಿಸಿಐ ದ್ರಾವಿಡ್‌ಗೆ ₹50 ಲಕ್ಷ, ಪ್ರತಿ ಆಟಗಾರರಿಗೆ ತಲಾ ₹30 ಲಕ್ಷ, ಸಹಾಯಕ ಕೋಚ್‌ಗಳಿಗೆ ತಲಾ ₹20 ಲಕ್ಷ ಘೋಷಿಸಿತ್ತು. ಆದರೆ ₹50 ಲಕ್ಷವನ್ನು ನಿರಾಕರಿಸಿದ್ದ ದ್ರಾವಿಡ್‌, ತಮಗೆ ₹25 ಲಕ್ಷ ಸಾಕು ಎಂದಿದ್ದರು. ಬಳಿಕ ದ್ರಾವಿಡ್‌ರನ್ನು ಸೇರಿ ಎಲ್ಲಾ ಸಹಾಯಕ ಕೋಚ್‌ಗಳಿಗೆ ₹25 ಲಕ್ಷ ನೀಡಲಾಗಿತ್ತು.