ಫೆ.15ರಂದು ಕೊಲಂಬೊದಲ್ಲಿ ನಿಗದಿಯಾಗಿರುವ ಭಾರತ ವಿರುದ್ಧ ಐಸಿಸಿ ಟಿ20 ವಿಶ್ವಕಪ್‌ ಪಂದ್ಯ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿದೆ. ಇದು ಕ್ರಿಕೆಟ್‌ ಲೋಕದಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ.

 ನವದೆಹಲಿ: ಫೆ.15ರಂದು ಕೊಲಂಬೊದಲ್ಲಿ ನಿಗದಿಯಾಗಿರುವ ಭಾರತ ವಿರುದ್ಧ ಐಸಿಸಿ ಟಿ20 ವಿಶ್ವಕಪ್‌ ಪಂದ್ಯ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿದೆ. ಇದು ಕ್ರಿಕೆಟ್‌ ಲೋಕದಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ. ಆದರೆ ಬಹಿಷ್ಕಾರ ಎಂಬುದು ಕ್ರಿಕೆಟ್‌ನಲ್ಲಿ ಇದು ಮೊದಲೇನಲ್ಲ. ಪ್ರಮುಖವಾಗಿ ಐಸಿಸಿ ಆಯೋಜಿಸುವ ಟೂರ್ನಿಗಳಲ್ಲೇ ನಿರ್ದಿಷ್ಟ ತಾಣದಲ್ಲಿ ಅಥವಾ ನಿರ್ದಿಷ್ಟ ತಂಡದ ವಿರುದ್ಧ ಪಂದ್ಯ ಬಹಿಷ್ಕರಿಸಿದ ಉದಾಹರಣೆ ಹಲವು. ಆ ಪಂದ್ಯ, ತಂಡ ಯಾವುವು? ಬಹಿಷ್ಕರಿಸಿದ್ದು ಯಾಕೆ? ಹಿಂದೆಂದಿಗಿಂತ ಈ ಬಾರಿಯ ಬಹಿಷ್ಕಾರ ಮಹತ್ವ ಪಡೆದಿದ್ದೇಕೆ? ಎಂಬ ವಿವರ ಇಲ್ಲಿದೆ.

1996 ಏಕದಿನ ವಿಶ್ವಕಪ್‌

ಲಂಕಾಗೆ ತೆರಳದ ಆಸೀಸ್‌, ವಿಂಡೀಸ್‌

ಭಾರತ, ಶ್ರೀಲಂಕಾ, ಪಾಕಿಸ್ತಾನದ ಆತಿಥ್ಯದಲ್ಲಿ 1996ರ ಏಕದಿನ ವಿಶ್ವಕಪ್‌ ನಡೆದಿತ್ತು. ಆದರೆ ಲಂಕಾದಲ್ಲಿ ನಾಗರಿಕ ಯುದ್ಧ ಹಾಗೂ ಟೂರ್ನಿಗೆ ಕೆಲವೇ ದಿನಗಳ ಮುನ್ನ ಕೊಲಂಬೊದಲ್ಲಿ ಸಂಭವಿಸಿದ ಸ್ಫೋಟದ ಕಾರಣಕ್ಕೆ, ಆಸ್ಟ್ರೇಲಿಯಾ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಕೊಲಂಬೊಗೆ ತೆರಳಲು ನಿರಾಕರಿಸಿದ್ದವು. ಹೀಗಾಗಿ ಪಂದ್ಯ ರದ್ದುಗೊಂಡವು. ಲಂಕಾಗೆ ಅಂಕಗಳು ಲಭಿಸಿದವು. ಇದರ ಹೊರತಾಗಿಯೂ ಆಸೀಸ್‌, ವಿಂಡೀಸ್‌ ಕ್ವಾರ್ಟರ್‌ಗೇರಿದವು. ಬಳಿಕ ಲಂಕಾ-ಆಸೀಸ್‌ ನಡುವೆ ಲಾಹೋರ್‌ನಲ್ಲಿ ಫೈನಲ್‌ ನಡೆಯಿತು. ಲಂಕಾ ಚಾಂಪಿಯನ್‌ ಆಯಿತು.

2003ರ ಏಕದಿನ ವಿಶ್ವಕಪ್

ಜಿಂಬಾಬ್ವೆ ಪಂದ್ಯ ಬಹಿಷ್ಕರಿಸಿದ ಇಂಗ್ಲೆಂಡ್‌

2003 ಏಕದಿನ ವಿಶ್ವಕಪ್‌ ದ.ಆಫ್ರಿಕಾ, ಜಿಂಬಾಬ್ವೆ, ಕೀನ್ಯಾದಲ್ಲಿ ನಡೆಯಿತು. ಆದರೆ ಜಿಂಬಾಬ್ವೆಯ ರಾಬರ್ಟ್‌ ಮುಗುಬೆ ಹಾಗೂ ಇಂಗ್ಲೆಂಡ್‌ನ ಟಾನಿ ಬ್ಲೇರ್‌ ಸರ್ಕಾರಗಳ ನಡುವೆ ರಾಜತಾಂತ್ರಿಕ ಸಂಘರ್ಷ ನಡೆಯುತ್ತಿದ್ದ ಕಾರಣ, ಜಿಂಬಾಬ್ವೆಗೆ ತೆರಳಲು ಇಂಗ್ಲೆಂಡ್ ನಿರಾಕರಿಸಿತು. ಪಂದ್ಯವನ್ನು ಜಿಂಬಾಬ್ವೆಯಿಂದ ಸ್ಥಳಾಂತರಿಸಲು ಇಂಗ್ಲೆಂಡ್‌ ಬೇಡಿಕೆ ಇಟ್ಟಿದ್ದರೂ ಐಸಿಸಿ ತಿರಸ್ಕರಿಸಿತು. ಪಂದ್ಯ ರದ್ದಾಗಿ ಜಿಂಬಾಬ್ವೆಗೆ ಅಂಕ ಲಭಿಸಿತು. ಇಂಗ್ಲೆಂಡ್‌ ಗುಂಪು ಹಂತದಲ್ಲೇ ಹೊರಬಿತ್ತು,

2003ರ ಏಕದಿನ ವಿಶ್ವಕಪ್

ಕೀನ್ಯಾ ವಿರುದ್ಧ ಆಡದ ನ್ಯೂಜಿಲೆಂಡ್‌

ಕೀನ್ಯಾದ ಮೊಂಬಾಸ ಎಂಬಲ್ಲಿದ್ದ ಹೋಟೆಲ್‌ ಮೇಲೆ 2002ರ ನವೆಂಬರ್‌ನಲ್ಲಿ ಭಯೋತ್ಪಾದಕ ದಾಳಿ ನಡೆದು, 13ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಹೀಗಾಗಿ ಭದ್ರತೆ ಕಾರಣಕ್ಕೆ ಕೀನ್ಯಾದಲ್ಲಿ ವಿಶ್ವಕಪ್‌ ಆಡಲು ನ್ಯೂಜಿಲೆಂಡ್‌ ನಿರಾಕರಿಸಿತು. ಪಂದ್ಯ ಸ್ಥಳಾಂತರಿಸಿ ಎಂಬ ಕಿವೀಸ್‌ನ ಬೇಡಿಕೆಗೆ ಐಸಿಸಿ ಒಪ್ಪಲಿಲ್ಲ. ಹೀಗಾಗಿ ಕಿವೀಸ್‌ ಪಂದ್ಯ ಬಹಿಷ್ಕರಿಸಿತು. ಕೀನ್ಯಾಗೆ ಅಂಕ ಲಭಿಸಿತು. ಇದರ ಹೊರತಾಗಿಯೂ ನ್ಯೂಜಿಲೆಂಡ್‌ ಸೂಪರ್‌-6 ಹಂತ ಪ್ರವೇಶಿಸಿತು.

2009ರ ಟಿ20 ವಿಶ್ವಕಪ್‌ ಜಿಂಬಾಬ್ವೆ

ಇಂಗ್ಲೆಂಡ್‌ಗೆ ತೆರಳದೆ ಜಿಂಬಾಬ್ವೆ ಬಹಿಷ್ಕಾರ

ಜಿಂಬಾಬ್ವೆ ಹಾಗೂ ಯುಕೆ ನಡುವಿನ ಸಂಬಂಧ 2009ರಲ್ಲೂ ಸರಿ ಹೋಗಿರಲಿಲ್ಲ. ಈ ನಡುವೆ 2009ರ ಟಿ20 ವಿಶ್ವಕಪ್‌ ಆತಿಥ್ಯ ಇಂಗ್ಲೆಂಡ್‌ಗೆ ಸಿಕ್ಕಿತ್ತು. ಆದರೆ ವಿಶ್ವಕಪ್‌ ಆಡಲು ಆಗಮಿಸಬೇಕಿದ್ದ ಜಿಂಬಾಬ್ವೆ ಆಟಗಾರರಿಗೆ ಇಂಗ್ಲೆಂಡ್‌ ವೀಸಾ ನಿರಾಕರಿಸುವ ಸಂಭವವಿತ್ತು. ಇದನ್ನು ಅರಿತ ಜಿಂಬಾಬ್ವೆ 2008ರಲ್ಲೇ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿತು. ಆದರೆ ಐಸಿಸಿ ಜೊತೆ ಒಪ್ಪಂದ ಮಾಡಿದ ಜಿಂಬಾಬ್ವೆ, ಟೂರ್ನಿಯ ಆಡದಿದ್ದರೂ ಪೂರ್ಣ ಶುಲ್ಕ ಪಡೆದುಕೊಂಡಿತು. ಬದಲಿ ತಂಡವಾಗಿ ಸ್ಕಾಟ್ಲೆಂಡ್‌ ಆಡಿತು.

2025ರ ಚಾಂಪಿಯನ್ಸ್‌ ಟ್ರೋಫಿ

ಪಾಕ್‌ಗೆ ತೆರಳಲು ಭಾರತ ನಕಾರ

ಕಳೆದ ವರ್ಷ ನಡೆದ ಚಾಂಪಿಯನ್ಸ್‌ ಟ್ರೋಫಿಯ ಆತಿಥ್ಯ ಹಕ್ಕು ಇದ್ದಿದ್ದು ಪಾಕಿಸ್ತಾನ ಬಳಿ. ಆದರೆ ಸದಾ ಹಿಂಸಾಚಾರ, ಉಗ್ರ ದಾಳಿ, ಸ್ಫೋಟಗಳು ನಡೆಯುತ್ತಿರುವ ಪಾಕ್‌ನಲ್ಲಿ ಭಾರತೀಯ ಆಟಗಾರರಿಗೆ ಭದ್ರತೆಯ ಅಪಾಯವಿತ್ತು. ಹೀಗಾಗಿ ಭಾರತ ತಂಡ ಪಾಕ್‌ಗೆ ತೆರಳಲಿಲ್ಲ. ಬದಲಾಗಿ ತನ್ನ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಐಸಿಸಿಗೆ ಮನವಿ ಮಾಡಿತ್ತು. ಪಾಕ್‌ನಲ್ಲಿ ಭದ್ರತೆ ಸಮಸ್ಯೆ ಇರುವುದು ಖಚಿತವಾದ ಕಾರಣ ಭಾರತದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಯಿತು.

ಈ ಹಿಂದಿನ ಬಹಿಷ್ಕಾರಕ್ಕೂ ಪಾಕ್‌ನ

ನಿರ್ಧಾರಕ್ಕೂ ಇದೆ ಅಜಗಜಾಂತರ!

ಭದ್ರತೆ, ರಾಜತಾಂತ್ರಿಕ ಕಾರಣಗಳಿಗೆ ಈ ವರೆಗೂ ಬಹಿಷ್ಕಾರ

ಈ ಸಲ ಬಾಂಗ್ಲಾಗೆ ಬೆಂಬಲ, ಭಾರತಕ್ಕೆ ವಿರೋಧವೇ ಕಾರಣ

ಐಸಿಸಿ ಟೂರ್ನಿಗಳಲ್ಲಿ ಕಳೆದ 30 ವರ್ಷಗಳಿಂದಲೂ ಹಲವು ತಂಡಗಳು ಪಂದ್ಯ ಬಹಿಷ್ಕರಿಸಿವೆ. ಆದರೆ ಆಗ ಎಲ್ಲಾ ದೇಶ, ತಂಡಗಳಿಗೂ ಸ್ಪಷ್ಟ ಕಾರಣವಿತ್ತು. ಹೀಗಾಗಿಯೇ ನಿರ್ದಿಷ್ಟ ಪಂದ್ಯ ಬಹಿಷ್ಕರಿಸಿದ ಅಥವಾ ಟೂರ್ನಿಯಿಂದ ಹಿಂದೆ ಸರಿದ ತಂಡಗಳಿಗೆ ಐಸಿಸಿ ದಂಡ, ನಿಷೇಧ ಹೇರಿರಲಿಲ್ಲ. ಆದರೆ ಈ ಬಾರಿ ಪಾಕಿಸ್ತಾನ ತಂಡ ಭಾರತ ವಿರುದ್ಧ ಆಡಲ್ಲ ಎನ್ನಲು ಯಾವುದೇ ಸ್ಪಷ್ಟ, ಸಮರ್ಪಕ ಕಾರಣಗಳೇ ಇಲ್ಲ.

ಮುಸ್ತಾಫಿಜುರ್‌ ರಹ್ಮಾನ್‌ರನ್ನು ಐಪಿಎಲ್‌ನಿಂದ ಹೊರಗಿಟ್ಟಿದ್ದಕ್ಕೆ ಬಾಂಗ್ಲಾ ತಂಡ ಭಾರತದಲ್ಲಿ ಟಿ20 ವಿಶ್ವಕಪ್‌ ಆಡಲ್ಲ ಎಂದು ತಗಾದೆ ತೆಗೆಯಿತು. ಭಾರತದಲ್ಲಿ ಭದ್ರತೆ ಸಮಸ್ಯೆ ಇದೆ ಎಂದು ನೆಪ ಹೇಳಿತು. ಇದಕ್ಕೆ ಐಸಿಸಿ ಸೊಪ್ಪು ಹಾಕಲಿಲ್ಲ. ಟಿ20 ಲೀಗ್‌ನಿಂದ ಆಟಗಾರನನ್ನು ಹೊರಗಿಟ್ಟಿದ್ದಕ್ಕೆ ಟಿ20 ವಿಶ್ವಕಪ್‌ನಿಂದಲೇ ಹೊರನಡೆದ ಬಾಂಗ್ಲಾ, ತನ್ನ ಕ್ರಿಕೆಟ್‌ ಭವಿಷ್ಯಕ್ಕೇ ಕೊಳ್ಳಿ ಇಟ್ಟಿತು. ಬಾಂಗ್ಲಾದೇಶ ಭದ್ರತೆಯ ಕಾರಣ ನೀಡಿತಾದರೂ, ಬಾಂಗ್ಲಾಗೆ ಬೆಂಬಲವಾಗಿ ನಿಂತ ಪಾಕ್ ಯಾವುದೇ ಕಾರಣ ನೀಡದೆ ಭಾರತ ವಿರುದ್ಧ ಆಡಲ್ಲ ಎಂದು ಘೋಷಿಸಿತು. ಈ ಪಂದ್ಯ ಭಾರತದಲ್ಲಿ ನಿಗದಿಯಾಗಿರಲಿಲ್ಲ. ಐಸಿಸಿ ಒಪ್ಪಂದ ಪ್ರಕಾರ ತಟಸ್ಥ ಸ್ಥಳವಾದ ಕೊಲಂಬೊದಲ್ಲಿ ನಡೆಯಬೇಕಿತ್ತು. ಆದರೆ ಬಾಂಗ್ಲಾಗೆ ಬೆಂಬಲ, ರಾಜಕೀಯ ಕಾರಣಗಳಿಗೆ ಭಾರತದ ಮೇಲಿನ ದ್ವೇಷವೇ ಪಾಕ್‌ನ ಬಹಿಷ್ಕಾರಕ್ಕೆ ಕಾರಣವಾಯಿತು.