ಟೊರೊಂಟೊ: ‘ಆಫ್‌ಸೈಡ್’ ಗೋಲಿನ ಗದ್ದಲ, ವಿವಾದಾತ್ಮಕ ‘ವಿಎಆರ್’ ತೀರ್ಪುಗಳ ನಡುವೆ ಕ್ರೊವೇಷಿಯಾ ವಿರುದ್ಧ ಅಂತಿಮ 32ರ ಸುತ್ತಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಗೆದ್ದು ಪೋರ್ಚುಗಲ್ ತಂಡ ಈ ಬಾರಿ ಫಿಪಾ ವಿಶ್ವಕಪ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕಳೆದೆರಡು ಆವೃತ್ತಿಗಳಲ್ಲಿ ಕ್ರಮವಾಗಿ ಫೈನಲ್, ಸೆಮಿಫೈನಲ್ ತಲುಪಿದ್ದ ಕ್ರೊವೇಷಿಯಾ ಈ ಬಾರಿ ಅಂತಿಮ 16ರ ಸುತ್ತಿಗೂ ಮುನ್ನವೇ ಹೊರಬಿದ್ದಿದೆ.
ಪಂದ್ಯದಲ್ಲಿ ಉಭಯ ತಂಡಗಳಿಂದಲೂ ಆಕ್ರಮಣಕಾರಿ ಆಟ ಕಂಡುಬಂದಿದ್ದಲ್ಲದೇ, ಹಲವು ಬಾರಿ ಚೆಂಡು ಗೋಲು ಪೆಟ್ಟಿಗೆ ಸವರಿ ಅಥವಾ ಗೋಲ್‌ಕೀಪರ್ ಪ್ರಯತ್ನದಿಂದಾಗಿ ಹೊರಬಿದ್ದವು. ಕೆಲ ‘ಆಫ್‌ಸೈಡ್’ ಗೋಲುಗಳೂ ಪಂದ್ಯದ ರೋಚಕತೆ ಹೆಚ್ಚಿಸಿತು. ಇವಾನ್ ಪೆರಿಸಿಕ್ 53ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದಾಗಿ ಕ್ರೊವೇಷಿಯಾ ಮುನ್ನಡೆ ಸಾಧಿಸಿತು. ಆದರೆ ತಂಡದ ಸಂಭ್ರಮ ಹೆಚ್ಚು ಹೊತ್ತು ನಿಲ್ಲಲಿಲ್ಲ. 68ನೇ ನಿಮಿಷದಲ್ಲಿ ತಮಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಕ್ರಿಸ್ಟಿಯಾನೊ ರೊನಾಲ್ಡೊ ಗೋಲಾಗಿ ಪರಿವರ್ತಿಸಿದರು. ಬಳಿಕ 90+4ನೇ ನಿಮಿಷದಲ್ಲಿ ಗೊಂಕಾಲೊ ರಾಮೋಸ್ ಬಾರಿಸಿದ ಗೋಲು ಪೋರ್ಚುಗಲ್‌ಗೆ ಗೆಲುವು ತಂದುಕೊಟ್ಟಿತು. 90+13ನೇ ನಿಮಿಷದಲ್ಲಿ ಕ್ರೊವೇಷಿಯಾದ ಜೊಸ್ಕೊ ಗ್ವಾರ್ಡಿಯೊಲ್ ಗೋಲು ಬಾರಿಸಿದರೂ, ಅದನ್ನು ರೆಫ್ರಿ ‘ಆಫ್‌ಸೈಡ್’ ಎಂದು ತೀರ್ಪು ನೀಡಿದರು. 90+19ನೇ ನಿಮಿಷದಲ್ಲಿ ಪಂದ್ಯ ಕೊನೆಗೊಂಡು, ಪೋರ್ಚುಗಲ್ ಜಯಭೇರಿ ಬಾರಿಸಿತು.
ಆಫ್‌ಸೈಡ್‌ನದ್ದೇ ಸದ್ದು: ಎರಡು ತಂಡದ ಒಟ್ಟು 4
ಗೋಲುಗಳು ತಿರಸ್ಕಾರ!
ಪಂದ್ಯದಲ್ಲಿ ‘ಆಫ್‌ಸೈಡ್’ ವಿವಾದ ಹೆಚ್ಚಾಗಿ ಕಂಡುಬಂತು. ಉಭಯ ತಂಡಗಳ ಒಟ್ಟು 4 ಗೋಲುಗಳನ್ನು ರೆಫ್ರಿಗಳು ತಿರಸ್ಕರಿಸಿದರು. 56 ಹಾಗೂ 80ನೇ ನಿಮಿಷದಲ್ಲಿ ಕ್ರೊವೇಷಿಯಾ, 60ನೇ ನಿಮಿಷದಲ್ಲಿ ಪೋರ್ಚುಗಲ್‌ನ ರೊನಾಲ್ಡೊ ಬಾರಿಸಿದ ಗೋಲುಗಳು ಆಫ್‌ಸೈಡ್ ಕಾರಣಕ್ಕೆ ತಿರಸ್ಕರಿಸಲಾಯಿತು. ಬಳಿಕ 90+13ನೇ ನಿಮಿಷದಲ್ಲಿ ಕ್ರೊವೇಷಿಯಾ ಬಾರಿಸಿದ ಗೋಲನ್ನು ವಿಎಆರ್ ಮೂಲಕ ರೆಫ್ರಿ ತಿರಸ್ಕರಿಸಿದ್ದು ವಿವಾದಕ್ಕೆ ಕಾರಣವಾಯಿತು.
ವಿಶ್ವಕಪ್ ನಾಕೌಟ್‌ನಲ್ಲಿ ಮೊದಲ ಬಾರಿ ಗೋಲು ಬಾರಿಸಿದ ರೊನಾಲ್ಡೊ
2006ರಿಂದಲೂ ಫಿಫಾ ವಿಶ್ವಕಪ್ ಆಡುತ್ತಿರುವ ಕ್ರಿಸ್ಟಿಯಾನೊ ರೊನಾಲ್ಡೊ ನಾಕೌಟ್ ಪಂದ್ಯಗಳಲ್ಲಿ ಇದೇ ಮೊದಲ ಬಾರಿ ಗೋಲು ದಾಖಲಿಸಿದ್ದಾರೆ. ಒಟ್ಟಾರೆ 6 ವಿಶ್ವಕಪ್‌ನಲ್ಲಿ ಅವರು 11 ಗೋಲು ಬಾರಿಸಿದ್ದಾರೆ. ಅಲ್ಲದೆ, ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಗೋಲು ಬಾರಿಸಿದ ಅತಿ ಹಿರಿಯ ಆಟಗಾರ(41 ವರ್ಷ, 147 ದಿನ) ಎನಿಸಿಕೊಂಡಿದ್ದಾರೆ. ಈ ವಿಶ್ವಕಪ್‌ನಲ್ಲಿ ಅವರು 3 ಗೋಲು ದಾಖಲಿಸಿದ್ದಾರೆ.
ಇಂದಿನ ಪಂದ್ಯಗಳು
ಕೊಲಂಬಿಯಾ-ಘಾನಾ, ಬೆಳಗ್ಗೆ 7 ಗಂಟೆಗೆ
ಕೆನಡಾ-ಮೊರಾಕ್ಕೊ, ರಾತ್ರಿ 10.30(ಪ್ರಿ ಕ್ವಾರ್ಟರ್)
ಫ್ರಾನ್ಸ್-ಪರಗ್ವೆ, ರಾತ್ರಿ 2.30(ಪ್ರಿ ಕ್ವಾರ್ಟರ್)
