ಅರ್ಜೆಂಟೀನಾದ ಮೆಸ್ಸಿ 3 ದಿನಗಳ ಭಾರತ ಭೇಟಿ ಖಚಿತ. ಡಿ.15ಕ್ಕೆ ಮೋದಿ ಜತೆ ಮಾತುಕತೆ. ದೇಶದ 4 ನಗರಗಳಿಗೆ ಮೆಸ್ಸಿ ಆಗಮನ. ಪೋರ್ಚುಗಲ್‌ನ ದಿಗ್ಗಜ ರೊನಾಲ್ಡೊ ಕೂಡಾ ಭಾರತಕ್ಕೆ ಭೇಟಿ ನಿರೀಕ್ಷೆ. ಅಲ್‌ ನಸ್ರ್‌ ಕ್ಲಬ್‌ ಪರ ಭಾರತದಲ್ಲಿ ಗೋವಾ ತಂಡ ವಿರುದ್ಧ ಆಟ?

ಕೋಲ್ಕತಾ: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್‌ ಆಟಗಾರರು, ಈ ತಲೆಮಾರಿನ ಫುಟ್ಬಾಲ್‌ ದಂತಕತೆಗಳಾದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಅರ್ಜೆಂಟೀನಾದ ಲಿಯೋನಲ್‌ ಮೆಸ್ಸಿಯ ಆಟವನ್ನು ನೇರವಾಗಿ ಕಣ್ತುಂಬಿಕೊಳ್ಳುವ ಭಾರತೀಯ ಫುಟ್ಬಾಲ್‌ ಅಭಿಮಾನಿಗಳ ಕನಸು ನನಸಾಗುವ ದಿನ ದೂರವಿಲ್ಲ. ಮೆಸ್ಸಿ ವರ್ಷಾಂತ್ಯದಲ್ಲಿ ಭಾರತಕ್ಕೆ ಆಗಮಿಸುವುದು ಖಚಿತವಾಗಿದ್ದು, ರೊನಾಲ್ಡೊ ಕೂಡಾ ಭಾರತದಲ್ಲಿ ಫುಟ್ಬಾಲ್‌ ಆಡುವ ನಿರೀಕ್ಷೆಯಿದೆ. 

ಮೆಸ್ಸಿಯ 3 ದಿನಗಳ ಭಾರತ ಭೇಟಿಯನ್ನು ಆಯೋಜಕರಲ್ಲಿ ಓರ್ವರಾದ ಸತಾದ್ರು ದತ್ತಾ ಖಚಿತಪಡಿಸಿಕೊಂಡಿದ್ದಾರೆ. ಡಿ.13ರಿಂದ ಡಿ.15ರವರೆಗೆ ಮೆಸ್ಸಿ ಕೋಲ್ಕತಾ, ಅಹಮದಾಬಾದ್‌, ಮುಂಬೈ ಹಾಗೂ ನವದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದು 2011ರ ಬಳಿಕ ಮೆಸ್ಸಿಯ ಭಾರತದ ಮೊದಲ ಭೇಟಿಯಾಗಿರಲಿದೆ. ‘ಮೆಸ್ಸಿ ಭಾರತ ಭೇಟಿಯ ಖಚಿತವಾಗಿದೆ. ಇದರ ಬಗ್ಗೆ ಆ.28ರಿಂದ ಸೆ.1ರ ನಡುವೆ ಸ್ವತಃ ಮೆಸ್ಸಿ ಸಾಮಾಜಿಕ ತಾಣಗಳಲ್ಲಿ ಘೋಷಿಸಲಿದ್ದಾರೆ’ ಎಂದು ದತ್ತಾ ತಿಳಿಸಿದ್ದಾರೆ. ದತ್ತಾ ಅವರು ಮೆಸ್ಸಿಯ ತಂದೆಯನ್ನು ಭೇಟಿಯಾಗಿ ಭಾರತ ಭೇಟಿ ಬಗ್ಗೆ ಚರ್ಚಿಸಿದ್ದು, ಬಳಿಕ ಸ್ವತಃ ಮೆಸ್ಸಿ ಜೊತೆ 45 ನಿಮಿಷಗಳ ಕಾಲ ಮಾತುಕತೆ ನಡೆಸಿ ಭಾರತಕ್ಕೆ ಬರಲು ಒಪ್ಪಿಸಿದ್ದಾರೆ.ಪ್ರತಿಮೆ ಅನಾವರಣ, ಫುಟ್ಬಾಲ್‌ ಆಟ

ಡಿ.12ರಂದು ರಾತ್ರಿ ಮೆಸ್ಸಿ ಕೋಲ್ಕತಾಗೆ ಆಗಮಿಸಲಿದ್ದು, ಡಿ.13ರಂದು ಕೆಲ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅದೇ ದಿನ ಮೆಸ್ಸಿ ವಿಶ್ವದಲ್ಲೇ ತಮ್ಮ ಅತಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಬಳಿಕ ದುರ್ಗಾ ಪೂಜೆ ವೇಳೆ 25 ಅಡಿ ಎತ್ತರ, 20 ಅಡಿ ಅಗಲವಿರುವ ತಮ್ಮ ವರ್ಣಚಿತ್ರ ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಮೆಸ್ಸಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಫುಟ್ಬಾಲ್‌ ಪಂದ್ಯವನ್ನಾಡಲಿದ್ದಾರೆ. 

ಸೌರವ್‌ ಗಂಗೂಲಿ, ದಿಗ್ಗಜ ಟೆನಿಸಿಗ ಲಿಯಾಂಡರ್‌ ಪೇಸ್‌, ನಟ ಜಾನ್‌ ಅಬ್ರಹಾಂ, ಫುಟ್ಬಾಲ್‌ ದಿಗ್ಗಜ ಭಾಯ್‌ಚುಂಗ್‌ ಭುಟಿಯಾ ಕೂಡಾ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೆಸ್ಸಿಯನ್ನು ಸನ್ಮಾನಿಸಲಿದ್ದಾರೆ. ಡಿ.13ರಂದು ಸಂಜೆ ಮೆಸ್ಸಿ ಅಹಮದಬಾದ್‌ಗೆ ತೆರಳಲಿದ್ದು, ಅದಾನಿ ಫೌಂಡೇಷನ್‌ನ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿ.14ರಂದು ಮೆಸ್ಸಿ ಮುಂಬೈನ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಮೀಟ್‌ ಆ್ಯಂಡ್‌ ಗ್ರೀಟ್‌, ಗೋಟ್‌ ಕನ್ಸರ್ಟ್‌ನಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ವಾಂಖೇಡೆ ಕ್ರೀಡಾಂಗಣದಲ್ಲಿ ಪೆಡಲ್‌ ಗೋಟ್‌ ಕಪ್‌ನಲ್ಲಿ ಸೆಲೆಬ್ರಿಟಿಗಳ ಜೊತೆಗೂಡಿ ಆಡಲಿದ್ದಾರೆ. ವರದಿಗಳ ಪ್ರಕಾರ, ಖ್ಯಾತ ನಟ ಶಾರುಖ್‌ ಖಾನ್‌, ಟೆನಿಸಿಗ ಲಿಯಾಂಡರ್‌ ಪೇಸ್‌ ಪಾಲ್ಗೊಳ್ಳುವ ಸಾಧ್ಯತೆಯಿದೆ. 

ಸಚಿನ್‌, ಧೋನಿ ಜತೆ ಆಟ

ಬಳಿಕ ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌, ಎಂ.ಎಸ್‌.ಧೋನಿ, ರೋಹಿತ್‌ ಶರ್ಮಾ ಜೊತೆ ‘ಗೋಟ್‌ ಕ್ಯಾಪ್ಟನ್ಸ್‌’ ಕಾರ್ಯಕ್ರಮ ಆಯೋಜಿಸಲು ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಉದ್ದೇಶಿಸಿದೆ. ಇದರಲ್ಲಿ ಬಾಲಿವುಡ್‌ ತಾರೆಗಳಾದ ಅಮೀರ್‌ ಖಾನ್‌, ರಣ್‌ವೀರ್‌ ಸಿಂಗ್, ಟೈಗರ್‌ ಶ್ರಾಫ್ ಭಾಗಿಯಾಗಲಿದ್ದಾರೆ.

ಪ್ರಧಾನಿ ನಿವಾಸದಲ್ಲಿ ಮೋದಿ-ಮೆಸ್ಸಿ ಭೇಟಿ

ಡಿ.15ರಂದು ಮೆಸ್ಸಿ, ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲೇ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮೋದಿ ಜೊತೆ ಔತಣ ಕೂಟದಲ್ಲೂ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಳಿಕ ನವದೆಹಲಿಯ ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗಿಯಾಗಲಿದ್ದಾರೆ. ವರದಿಗಳ ಪ್ರಕಾರ, ಡೆಲ್ಲಿ ಕ್ರಿಕೆಟ್‌ ಸಂಸ್ಥೆಯು ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ಶುಭ್‌ಮನ್‌ ಗಿಲ್‌ರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ ಎಂದು ತಿಳಿದುಬಂದಿದೆ.

ಮೆಸ್ಸಿ ಭೇಟಿ ವೇಳಾಪಟ್ಟಿ

ಡಿ.12: ರಾತ್ರಿ ಭಾರತಕ್ಕೆ ಆಗಮಿಸಲಿರುವ ಲಿಯೋನಲ್ ಮೆಸ್ಸಿಡಿ.13: ಕೋಲ್ಕತಾಗೆ ಭೇಟಿ. ಮೆಸ್ಸಿ ಪ್ರತಿಮೆ, ಬೃಹತ್‌ ವರ್ಣಚಿತ್ರ ಅನಾವರಣ. ಡಿ.13: ಈಡನ್‌ ಗಾರ್ಡನ್ಸ್‌ನಲ್ಲಿ ಫುಟ್ಬಾಲ್ ಪಂದ್ಯ. ಗಂಗೂಲಿ, ಪೇಸ್‌, ಭುಟಿಯಾ ಭಾಗಿ.ಡಿ.13: ಸಂಜೆ ಅಹಮದಾಬಾದ್‌ನಲ್ಲಿ ಅದಾನಿ ಫೌಂಡೇಷನ್‌ನ ಕಾರ್ಯಕ್ರಮಡಿ.14: ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಮೀಟ್‌ ಆ್ಯಂಡ್‌ ಗ್ರೀಟ್‌, ಗೋಟ್‌ ಕನ್ಸರ್ಟ್‌ಡಿ.14: ವಾಂಖೇಡೆ ಕ್ರೀಡಾಂಗಣದಲ್ಲಿ ಪೆಡಲ್‌ ಗೋಟ್‌ ಕಪ್‌. ಸೆಲೆಬ್ರಿಟಿಗಳ ಜೊತೆಗೂಡಿ ಆಟಡಿ.14: ಬಳಿಕ ಸಚಿನ್‌, ಧೋನಿ, ರೋಹಿತ್‌ ಜತೆ ಕಾರ್ಯಕ್ರಮ. ಶಾರುಖ್‌ ಸೇರಿ ಹಲವರ ಉಪಸ್ಥಿತಿ.ಡಿ.15: ಪ್ರಧಾನಿ ಮೋದಿಯನ್ನು ಅವರ ನಿವಾಸದಲ್ಲೇ ಭೇಟಿ.ಡಿ.15: ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ. ಕೊಹ್ಲಿ ಭಾಗಿ ನಿರೀಕ್ಷೆ.ಡಿ.15: ಅದೇ ದಿನ ರಾತ್ರಿ ಭಾರತದಿಂದ ಮೆಸ್ಸಿ ನಿರ್ಗಮನ.

ರೊನಾಲ್ಡೊ ಮೊದಲ ಬಾರಿ ಭಾರತಕ್ಕೆ ಭೇಟಿ ಸಾಧ್ಯತೆ!

ಸೆಪ್ಟೆಂಬರ್‌-ಡಿಸೆಂಬರ್‌ ನಡುವೆ ಪಂದ್ಯ ನಿಗದಿರೊನಾಲ್ಡೊ ಇದೇ ಮೊದಲ ಬಾರಿ ಭಾರತಕ್ಕೆ ಆಗಮಿಸಿ, ಫುಟ್ಬಾಲ್‌ ಆಡುವ ನಿರೀಕ್ಷೆಯಿದೆ. ಶುಕ್ರವಾರ ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ 2 ಫುಟ್ಬಾಲ್‌ ಟೂರ್ನಿಯ ಡ್ರಾ ಬಿಡುಗಡೆಗೊಂಡಿತು. ಇದರಲ್ಲಿ ರೊನಾಲ್ಡೊ ತಂಡ ಅಲ್‌ ನಸ್ರ್‌ ಹಾಗೂ ಭಾರತದ ಎಫ್‌ಸಿ ಗೋವಾ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.ಲೀಗ್‌ನಲ್ಲಿ ಪ್ರತಿ ತಂಡ ತನ್ನ ತವರಿನಲ್ಲಿ ಒಂದು ಪಂದ್ಯ, ಎದುರಾಳಿ ಕ್ಲಬ್‌ನ ತವರಿನಲ್ಲಿ ಒಂದ್ಯ ಪಂದ್ಯವನ್ನಾಡಲಿವೆ. ಹೀಗಾಗಿ ಅಲ್‌ ನಸ್ರ್‌ ಭಾರತಕ್ಕೆ ಆಗಮಿಸಿ ಗೋವಾ ವಿರುದ್ಧ ಆಡಬೇಕಿದೆ. ಆದರೆ ಈ ಪಂದ್ಯದಲ್ಲಿ ರೊನಾಲ್ಡೊ ಆಡಲಿದ್ದಾರೊ ಇಲ್ಲವೊ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಟೂರ್ನಿ ಸೆ.16ರಿಂದ ಡಿ.10ರ ವರೆಗೆ ನಡೆಯಲಿದೆ.