ಸಾರಾಂಶ
ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ನೇತೃತ್ವದ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವು ಅ.25ರಂದು ಕೇರಳಕ್ಕೆ ಆಗಮಿಸಲಿದೆ.
ತಿರುವನಂತಪುರಂ: ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ನೇತೃತ್ವದ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವು ಅ.25ರಂದು ಕೇರಳಕ್ಕೆ ಆಗಮಿಸಲಿದೆ.
ಈ ಬಗ್ಗೆ ಕೇರಳ ಕ್ರೀಡಾ ಸಚಿವ ಅಬ್ದುರ್ರಹಿಮಾನ್ ಮಾತನಾಡಿದ್ದು, ‘ಮೆಸ್ಸಿ ಅ.25ರಂದು ಕೇರಳಕ್ಕೆ ಆಗಮಿಸಲಿದ್ದಾರೆ. ಸ್ನೇಹಾರ್ಥ ಫುಟ್ಬಾಲ್ ಪಂದ್ಯ ಮಾತ್ರವಲ್ಲದೆ ಕೆಲ ಖಾಸಗಿ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ. ಅವರು 7 ದಿನಗಳ ಕಾಲ ಕೇರಳದಲ್ಲೇ ವಾಸ್ತವ್ಯ ಹೂಡಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಮೆಸ್ಸಿ ಕೇರಳಕ್ಕೆ ಆಗಮಿಸುವುದನ್ನು ಖಚಿತಪಡಿಸಿಕೊಂಡಿದ್ದ ಸಚಿವರು, ‘ಅರ್ಜೆಂಟೀನಾ ತಂಡ 2 ಸ್ನೇಹಾರ್ಥ ಪಂದ್ಯ ಆಡಲಿದೆ. ಸ್ಥಳ ಮತ್ತು ಎದುರಾಳಿ ತಂಡದ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುತ್ತೇವೆ. 50 ಸಾವಿರ ಆಸನ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸುತ್ತೇವೆ’ ಎಂದಿದ್ದರು. ಮೆಸ್ಸಿ 2011ರಲ್ಲಿ ಕೊನೆ ಬಾರಿ ಭಾರತದಲ್ಲಿ ಫುಟ್ಬಾಲ್ ಆಡಿದ್ದರು. ಅರ್ಜೆಂಟೀನಾ-ವೆನೆಜುವೆಲಾ ನಡುವೆ ಸ್ನೇಹಾರ್ಥ ಪಂದ್ಯ ನಡೆದಿತ್ತು.
ದೇವಜಿತ್ ಬಿಸಿಸಿಐ ಹೊಸ ಕಾರ್‍ಯದರ್ಶಿ, ಪ್ರಭ್‌ತೇಜ್ ಖಜಾಂಚಿಯಾಗಿ ನೇಮಕ
ಮುಂಬೈ: ಭಾನುವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿ)ಯ ನೂತನ ಕಾರ್ಯದರ್ಶಿಯಾಗಿ ಅಸ್ಸಾಂನ ದೇವಜಿತ್ ಸೈಕಿಯಾ ಮತ್ತು ಖಜಾಂಚಿಯಾಗಿ ಛತ್ತೀಸ್‌ಗಢದ ಪ್ರಭ್‌ತೇಜ್ ಸಿಂಗ್ ಭಾಟಿಕಾ ನೇಮಕಗೊಂಡಿದ್ದಾರೆ. ಭಾನುವಾರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇಬ್ಬರನ್ನೂ ಅವಿರೋಧ ಆಯ್ಕೆ ಮಾಡಲಾಯಿತು. ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್ ಶಾ ಡಿ.1ರಂದು ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಖಜಾಂಚಿಯಾಗಿದ್ದ ಆಶಿಶ್ ಶೆಲಾರ್ ಮಹಾರಾಷ್ಟ್ರ ಸಚಿವರಾಗಿ ನೇಮಕಗೊಂಡಿದ್ದರು. ಹೀಗಾಗಿ ಈ ಎರಡು ಹುದ್ದೆ ತೆರವಾಗಿದ್ದವು.