ಭೂಮಿ ಭಗವಂತನ ಸೃಷ್ಠಿ, ಎಲ್ಲವೂ ಅವನಿಚ್ಛೆ : ವಿದುಶೇಖರ ಭಾರತೀ ಸ್ವಾಮೀಜಿ

KannadaprabhaNewsNetwork |  
Published : Jun 28, 2024, 12:54 AM IST
ಹೊಸದುರ್ಗ ತಾಲೂಕಿನ ಬೆಲಗೂರು ಮಾರುತಿ ಪೀಠಕ್ಕೆ ಬುಧವಾರ ಸಂಜೆ ಆಗಮಿಸಿದ ಶೃಂಗೇರಿ ಪೀಠದ ಜಗದ್ಗುರು ಶ್ರೀ ವಿಧುಶೇಖರ ಸ್ವಾಮೀಜಿ ಅವರನ್ನು ಉತ್ಸವದ ಮೂಲಕ ಬರ ಮಾಡಿಕೊಳ್ಳಲಾಯಿತು. | Kannada Prabha

ಸಾರಾಂಶ

ಹೊಸದುರ್ಗ ತಾಲೂಕಿನ ಬೆಲಗೂರು ಮಾರುತಿ ಪೀಠಕ್ಕೆ ಬುಧವಾರ ಸಂಜೆ ಆಗಮಿಸಿದ ಶೃಂಗೇರಿ ಪೀಠದ ಜಗದ್ಗುರು ಶ್ರೀ ವಿಧುಶೇಖರ ಸ್ವಾಮೀಜಿ ಅವರನ್ನು ಉತ್ಸವದ ಮೂಲಕ ಬರ ಮಾಡಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ ಭೂಮಿ ಭಗವಂತನ ಸೃಷ್ಟಿ ಇಲ್ಲಿ ನಡೆಯುವ ಎಲ್ಲಾ ಕಾರ್ಯಗಳು ಭಗವಂತನ ಸಂಕಲ್ಪದಂತೆ ನಡೆಯುತ್ತವೆ ಎಂದು ಶೃಂಗೇರಿ ಶಂಕರಾಚಾರ್ಯ ಗುರುಪೀಠದ ಜಗದ್ಗುರು ಶ್ರೀ ವಿದುಶೇಖರ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.

ತಾಲೂಕಿನ ಬೆಲಗೂರಿನ ವೀರಪ್ರತಾಪ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಸ್ಥಾಪಿಸಲಾಗಿರುವ ಮಹಾಲಕ್ಷ್ಮಿ ಅಮ್ಮನವರ ಮೂಲಮೂರ್ತಿಗೆ ಸ್ವರ್ಣ ಖಚಿತ ಬಂಗಾರದ ಕಿರೀಟ ಧಾರಣೆ ಮಾಡಿ ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.

ಭೂಮಿಯ ಮೇಲೆ ನಡೆಯುವ ಎಲ್ಲಾ ಕಾರ್ಯಗಳು ಭಗವಂತನ ನಿಯಮದಂತೆ ನಡೆಯುತ್ತವೆ. ಮನುಷ್ಯ ನನ್ನಿಂದ ನಡೆಯುತ್ತದೆ ಎನ್ನುವ ಭಾವನೆ ತಪ್ಪು. ಭೂಮಿಯ ಮೇಲಿನ ಮನುಷ್ಯ ಒಂದು ನೆಪ ಮಾತ್ರ. ಮನುಷ್ಯನಲ್ಲಿ ಕತೃತ್ವವಿದೆ. ಯಾರಲ್ಲಿ ಒಳ್ಳೆಯ ಕತೃತ್ವವಿದೆಯೋ ಅಂಥವರ ಮೂಲಕ ಭಗವಂತ ಕೆಲಸ ಮಾಡಿಸುತ್ತಾನೆ ಎಂದರು.

ಶೃಂಗೇರಿ ಶಾರದಾ ಪೀಠಕ್ಕೆ ಬೆಲಗೂರಿನ ಮಾರುತಿ ಮಂದಿರಕ್ಕೂ ಅವಿನ ಭಾವ ಸಂಬಂಧವಿದೆ. ಅವಧೂತರಾದ ಬಿಂದು ಮಾದವ ಶರ್ಮಾರವರು ಶೃಂಗೇರಿಯ ಹಿರಿಯ ಜಗದ್ಗುರುಗಳಿಗೆ ಆತ್ಮೀಯರಾಗಿದ್ದರು. ಅವರ ಆಶೀರ್ವಾದದಂತೆ ಬಿಂದು ಮಾಧವರ ಸಂಕಲ್ಪದಂತೆ ಇಲ್ಲೇ ಅನೇಕ ಕಾರ್ಯಗಳು ನಡೆದಿವೆ. ಇಂತಹ ಗ್ರಾಮಕ್ಕೆ ನಾವು ಬಂದಿರುವುದು ನಮಗೂ ಸಂತೋಷ ತಂದಿದೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ, ಚಿಂತಕ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಅರಸೀಕೆರೆ, ತುಮಕೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.ಸಭಾ ಕಾರ್ಯಕ್ರಮಕ್ಕೆ ಮುನ್ನ ಬೆಳಗ್ಗೆ 9 ಗಂಟೆಗೆ ವೀರ ಪ್ರತಾಪ ಆಂಜನೇಯ ಸ್ವಾಮಿಗೆ ಮಹಾರುದ್ರಾಭಿಷೇಕ, ವಿವಿಧ ಹೋಮ-ಹವನಗಳ ನಂತರ ವಿಶೇಷ ಪೂಜೆ ಸಲ್ಲಿಸಿ ನಂತರ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕಿರೀಟಧಾರಣೆ ಮಾಡಿದರು. ಶೃಂಗೇರಿ ಶ್ರೀಗಳಿಗೆ ಬೆಲಗೂರಿನಲ್ಲಿ ಅದ್ದೂರಿ ಸ್ವಾಗತ

ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮದ ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ಸುವರ್ಣ ಕಿರೀಟ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬುಧವಾರ ಸಂಜೆ ಆಗಮಿಸಿದ್ದ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಸಹಸ್ರಾರು ಭಕ್ತರು ಅದ್ಧೂರಿಯಿಂದ ಬರಮಾಡಿಕೊಂಡರು. ಗ್ರಾಮ ಪ್ರವೇಶ ಮಾಡಿದ ಶ್ರೀಗಳನ್ನು ಗ್ರಾಮದ ಮುಖ್ಯದ್ವಾರದಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ