ಕನ್ನಡಪ್ರಭ ವಾರ್ತೆ ಬೆಳಗಾವಿ
ಇ-ಸ್ವತ್ತು ಉತಾರ ಮಾಡಿಸುವುದರಿಂದ ಮೈಕ್ರೋ ಪೈನಾನ್ಸ್‌ಗಳ ಹಾವಳಿಯಿಂದ ನಾಗರಿಕರನ್ನು ಪಾರು ಮಾಡಬಹುದು. ಇ-ಸ್ವತ್ತು ಉತಾರೆ ಪಡೆದ ಫಲಾನುಭವಿಗಳು ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಸುಲಭವಾಗಿ ಸಾಲಸೌಲಭ್ಯ ದೊರೆಯುತ್ತದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಪಂಗೆ ಭೇಟಿ ನೀಡಿದ ಅವರು, ಗ್ರಾಪಂ ಸದಸ್ಯರೊಂದಿಗೆ ಸಭೆ ನಡೆಸಿ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ಉತಾರ ನಮೂನೆ 09 ವಿತರಿಸುವ ಕುರಿತು ಮಾಹಿತಿ ನೀಡಿದರು. ತದ ನಂತರ ಇ-ಸ್ವತ್ತು ನಮೂನೆ 09 ಕೋರಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರ ಮನೆಗೆ ಖುದ್ದಾಗಿ ಭೇಟಿ ನೀಡಿ ದಿಶಾಂಕ ಮೊಬೈಲ್ ಆ್ಯಪ್ ಮೂಲಕ ಆಸ್ತಿಯ ಸರ್ವೇ ಮಾಡುವ ಕುರಿತು ಪರಿಶೀಲಿಸಿದರು.
ಬಳಿಕ ಹರಗಾಪೂರ ಗ್ರಾಮದಲ್ಲಿರುವ ಕಣಗಲಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೀರಿನ ಗುಟಮಟ್ಟದ ಬಗ್ಗೆ ನೀರಿನ ಪರೀಕ್ಷಾ ವರದಿಗಳನ್ನು ಪರಿಶೀಲನೆ ಮಾಡಿದರು. ನೀರು ಶುದ್ಧೀಕರಣ ಘಟಕ ವೀಕ್ಷಣೆ ಮಾಡಿದರು.ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಪಂ ವ್ಯಾಪ್ತಿಯ ಡಬ್ಲ್ಯೂಟಿಪಿ ವಾಟರ್ ಸಪ್ಲೈಗೆ ಭೇಟಿ ನೀಡಿ ಪರಿಶೀಲಿಸಿದರು. ಖಡಕಲಾಟ ಗ್ರಾಪಂ ವ್ಯಾಪ್ತಿಯ ಪೀರನವಾಡಿ ಗ್ರಾಮದಲ್ಲಿನ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಅಪೂರ್ಣವಾಗಿದ್ದು ಅದನ್ನು ಪೂರ್ಣಗೊಳಿಸಲು ಅಧಿಕಾರಿಗಳು ಹಾಗೂ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದರು. ಖಡಕಲಾಟ, ಪಟ್ಟಣಕೋಡಿ, ನವಲಿಹಾಳ ಮತ್ತು ವಾಳಕಿ ಗ್ರಾಪಂ ಸದಸ್ಯರಿಗೆ ಗ್ರಾಮ ಠಾಣಾದಲ್ಲಿರುವ ಆಸ್ತಿಗಳಿಗೆ ಇ-ಸ್ವತ್ತು ಉತಾರ ನಮೂನೆ 09 ವಿತರಿಸುವ ಕುರಿತು ಮಾಹಿತಿ ನೀಡಿದರು.
ಮನರೇಗಾ ಯೋಜನೆಗೆ ಸಂಬಂಧಿಸಿದಂತೆ ಖಡಕಲಾಟ, ಪಟ್ಟಣಕೋಡಿ ಮತ್ತು ವಾಳಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಮುದಾಯ ಕುಡಿಯುವ ನೀರಿನ ಬಾವಿಗೆ ಬೇಡಿಕೆ ಇದ್ದು, ಅಂತಹ ಗ್ರಾಪಂಗಳ ಕ್ರಿಯಾ ಯೋಜನೆ ಕೂಡಲೇ ಸಿದ್ಧಪಡಿಸಿ, ಜಿಪಂಯಿಂದ ಅನುಮೋದನೆ ಪಡೆದುಕೊಂಡು ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಲು ಚಿಕ್ಕೋಡಿ ಇಒಗೆ ಸೂಕ್ತ ನಿರ್ದೇಶನ ನೀಡಿದರು.ನರೇಗಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ನವಲಿಹಾಳ ಗ್ರಾಪಂ ಕಟ್ಟಡ, ಸಂಜೀವಿನಿ ಶೆಡ್, ಗೋದಾಮು ಕಾಮಗಾರಿ ವೀಕ್ಷಿಸಿ, ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಡ್ರಾಳ ಗ್ರಾಪಂಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ, ಚಿಕ್ಕೋಡಿ ತಾಪಂ ಇಒ ಎಸ್.ಎಸ್ ಕಾದ್ರೋಳಿ, ಹುಕ್ಕೇರಿ ಇಒ ಟಿ.ಆರ್. ಮಲ್ಲಾಡದ, ಅಧಿಕಾರಿಗಳಾದ ಪಾಂಡುರಂಗರಾವ, ವಿನಾಯಕ ಮಠಪತಿ, ಶಿವಾನಂದ ಶಿರಗಾಂವೆ, ಲಕ್ಷ್ಮೀನಾರಾಯಣ, ವಿನಾಯಕ ಪೂಜಾರ, ಅಭಿಷೇಕ ಪವಾರ್, ಚೇತನ ಕಡಕೋಳ, ಸಂತೋಷ ಪಾಟೀಲ, ಬಿ.ಡಿ ನಾಯಿಕವಾಡಿ, ಪಿಡಿಒಗಳು ಇತರರಿದ್ದರು.