ಕನ್ನಡಪ್ರಭ ವಾರ್ತೆ ಹಲಗೂರು
ಕೊನ್ನಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಹಲಗೂರು ವೃತ್ತದ ಪೌಷ್ಟಿಕ ಆಹಾರ ಮತ್ತು ಪೋಷಣ್ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಪೋಷಣ್ ಅಭಿಯಾನ ಮೂಲಕ ಗರ್ಭಿಣಿಯರು, ಬಾಣಂತಿಯರು, ಚಿಕ್ಕಮಕ್ಕಳು, ಹದಿಹರೆಯದ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ತಡೆಗಟ್ಟುವುದು, ಗರ್ಭಿಣಿ, ಬಾಣಂತಿ ಹಾಗೂ ಶಿಶುಗಳ ಮರಣ ತಡೆಗಟ್ಟುವುದು ಇದರ ಉದ್ದೇಶವಾಗಿದೆ ಎಂದರು.ಉತ್ತಮ ಆರೋಗ್ಯದ ಹಿತದೃಷ್ಟಿಯಿಂದ ಬೇಕರಿ ಉತ್ಪನ್ನ ಮತ್ತು ಜಂಕ್ ಪುಡ್ ಬಳಕೆ ಕೈ ಬಿಡಬೇಕು. ದಿನನಿತ್ಯದ ಆಹಾರದಲ್ಲಿ ಬೆಲ್ಲ, ಬೇಯಿಸಿದ ಕೋಳಿಮೊಟ್ಟೆ, ವಿವಿಧ ಬಗೆಯ ಸೊಪ್ಪು ತರಕಾರಿ ಸೇರಿದಂತೆ ನಾರಿನಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು ಎಂದರು.
ಹಲಗೂರು ವಲಯ ಮೇಲ್ವಿಚಾರಕಿ ಸಿದ್ದರಾಜಮ್ಮ ಮಾತನಾಡಿ, ವಯಸ್ಸಿಗೆ ತಕ್ಕ ತೂಕ ಮತ್ತು ತೂಕಕ್ಕೆ ತಕ್ಕ ಎತ್ತರ ಇಲ್ಲದಿರುವ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹೆಚ್ಚುವರಿ ಪೌಷ್ಟಿಕ ಆಹಾರ ನೀಡುವ ಮೂಲಕ ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕತೆಗೆ ಶ್ರಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಅಂಗನವಾಡಿ ಕೇಂದ್ರ ವ್ಯಾಪ್ತಿಯ ಮಕ್ಕಳಿಗೆ ಅನ್ನ ಪ್ರಾಶನ ಮತ್ತು ಗರ್ಭೀಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು. ವಿವಿಧ ಬಗೆಯ ಸೊಪ್ಪು, ತರಕಾರಿ, ತಿಂಡಿ ಪದಾರ್ಥಗಳು ಮತ್ತು ಪೌಷ್ಟಿಕ ಆಹಾರ ಸಂಬಂಧಿಸಿದ ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ನೋಡುಗರ ಗಮನ ಸೆಳೆಯಿತು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಗುಲ್ನಾಜ್ ಭಾನು, ಅಂಗನವಾಡಿ ಕಾರ್ಯಕರ್ತೆ ವಿಜಯ, ವಿಮಲಾ, ಸುಧಾ, ಪ್ರತಿಭಾವತಿ, ನಾಗಮಣಿ, ಚೈತ್ರಾ, ಪ್ರಮೀಳಾ ಸೇರಿದಂತೆ ಹಲವರು ಭಾಗವಹಿಸಿದ್ದರು.