ಬಳ್ಳಾರಿ ಜಿಲ್ಲೆಯ 46 ಸರ್ಕಾರಿ ಆಸ್ಪತ್ರೆಗಳಲ್ಲಿ ಇಸಿಜಿ ಯಂತ್ರ ಲಭ್ಯ

KannadaprabhaNewsNetwork |  
Published : Apr 28, 2025, 11:45 PM IST
ಕಂಪ್ಲಿ ತಾಲೂಕಿನ ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಡಿಎಚ್‌ಒ ಡಾ. ಯಲ್ಲಾ ರಮೇಶ್ ಬಾಬು ಅವರು ಇಸಿಜಿ ಮೂಲಕ ವ್ಯಕ್ತಿಯ ಆರೋಗ್ಯ ಪರೀಕ್ಷಾ ಕಾರ್ಯ ಪರಿಶೀಲಿಸಿದರು. | Kannada Prabha

ಸಾರಾಂಶ

ಕಂಪ್ಲಿ ತಾಲೂಕಿನ ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಸಿಜಿ ಮೂಲಕ ವ್ಯಕ್ತಿಯ ಆರೋಗ್ಯ ಪರೀಕ್ಷಾ ಕಾರ್ಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಪರಿಶೀಲಿಸಿದರು.

ಬಳ್ಳಾರಿ: ವ್ಯಕ್ತಿಗೆ ಆಕಸ್ಮಿಕವಾಗಿ ಒದಗುವ ಆರೋಗ್ಯದ ಸಮಸ್ಯೆಗಳನ್ನು ಗುರ್ತಿಸಲು ಇಸಿಜಿ ಯಂತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಹೇಳಿದರು.

ಕಂಪ್ಲಿ ತಾಲೂಕಿನ ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಸಿಜಿ ಮೂಲಕ ವ್ಯಕ್ತಿಯ ಆರೋಗ್ಯ ಪರೀಕ್ಷಾ ಕಾರ್ಯ ಪರಿಶೀಲಿಸಿ ಅವರು ಮಾತನಾಡಿದರು. ಮುಖ್ಯವಾಗಿ ಹೃದಯದ ಮೌಲ್ಯಮಾಪನ ಮಾಡುವ ಮೂಲಕ ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಪರೀಕ್ಷಿಸಿ, ಹೃದಯದ ಸಮಸ್ಯೆ ಹಾಗೂ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವ ಇಸಿಜಿ ಯಂತ್ರಗಳಿಂದ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಜಿಲ್ಲೆಯಾದ್ಯಂತ 2 ತಾಲೂಕು ಆಸ್ಪತ್ರೆ, 6 ಸಮುದಾಯ ಆರೋಗ್ಯ ಕೇಂದ್ರ, 29 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 9 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಸಿಜಿ ಮೆಷಿನ್ ಲಭ್ಯವಿದ್ದು, ಇಲ್ಲಿ ತಜ್ಞರು ಹಾಗೂ ತರಬೇತಿ ಪಡೆದ ವೈದ್ಯರು ಪರೀಕ್ಷೆ ಮಾಡಲು ಅವಕಾಶ ಮಾಡಲಾಗಿದೆ ಎಂದರು.

ಎದೆ ನೋವು, ತಲೆತಿರುಗುವಿಕೆ, ತಲೆತಿರುಗುವಿಕೆ ಅಥವಾ ಗೊಂದಲ, ಹೃದಯ ಬಡಿತ ಏರಿಳಿತ, ತ್ವರಿತ ನಾಡಿಮಿಡಿತ, ಉಸಿರಾಟದ ತೊಂದರೆ, ದೌರ್ಬಲ್ಯ, ಆಯಾಸ, ಅಥವಾ ವ್ಯಾಯಾಮ ಮಾಡುವ ಸಾಮರ್ಥ್ಯ ಕಡಿಮೆಯಾಗುವುದು, ಈ ರೀತಿಯ ಲಕ್ಷಣಗಳು ಕಂಡು ಬಂದಾಗ ಇಸಿಜಿ ಮಾಡಿಸಬೇಕು ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿದಾಗ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣ ತಾಲೂಕು ಮಟ್ಟದ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಯ ತಜ್ಞರು ಜಿಲ್ಲಾ ಆಸ್ಪತ್ರೆಯಲ್ಲಿ ಅಳವಡಿಸಿರುವ ಟೆಲಿ ಐಸಿಯು ಹಬ್‌ನ ತಜ್ಞವೈದ್ಯರಿಗೆ ನೇರವಾಗಿ ರೋಗಿಯನ್ನು ವಿಡಿಯೋ ಮುಲಕ ಸಂಪರ್ಕಿಸಿ, ಚಿಕಿತ್ಸೆ ಒದಗಿಸಲು ಅಥವಾ ತುರ್ತು ಅಗತ್ಯವೆನಿಸಿದರೆ ಜಿಲ್ಲಾ ಆಸ್ಪತ್ರೆ ಅಥವಾ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಕ್ಕೆ ದಾಖಲಿಸಲು ಸಹಕಾರಿಯಾಗಿ ವ್ಯಕ್ತಿಯ ಜೀವ ಉಳಿಸಲು ಸಹಾಯಕವಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿರುವ ಇಸಿಜಿ ಮೆಷಿನ್‌ಗಳ ಸದುಪಯೋಗ ಪಡೆಯಲು ವಿನಂತಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್. ಅಬ್ದುಲ್, ಅಡಳಿತ ವೈದ್ಯಾಧಿಕಾರಿ ಡಾ. ಫಾರೂಖ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಅರೋಗ್ಯ ನಿರೀಕ್ಷಣಾಧಿಕಾರಿ ಬಸವನಗೌಡ, ಕೃಷ್ಣಮೂರ್ತಿ, ಸಿಬ್ಬಂದಿ ಪೂಜಾ, ಉಮಾಮಹೇಶ್ವರಿ, ಕನಕಪ್ಪ, ಅಶ್ವಿನಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!