ಕುರುಗೋಡು: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ 60 ಅಡಿ ಎತ್ತರದ ದೊಡ್ಡಬಸವೇಶ್ವರ ಮಹಾ ರಥೋತ್ಸವ ಮಂಗಳವಾರ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಮಧ್ಯಾಹ್ನ 1.40ಕ್ಕೆ ವಿಜೃಂಭಣೆದ ನಡೆಯಿತು.
ಉತ್ಸವದ ಮೊದಲಿಗೆ ಕೆರೆಕೆರೆ, ಮುಷ್ಟಗಟ್ಟೆ ಮತ್ತು ಸೋಮಲಾಪುರ ಗ್ರಾಮದಿಂದ ಧೂಳುಗಾಯಿ, ಕಳಸ ಮತ್ತು ಪೂರ್ಣಕುಂಭದ ಮೆರವಣಿಗೆ ನಡೆಯಿತು. ಬೆಳಗಿನ ಜಾವ ನೂರಾರು ಭಕ್ತರು ದೇವಸ್ಥಾನದಲ್ಲಿ ದೀಡ್ ನಮಸ್ಕಾರ ಮತ್ತು ತಾಲೂಕಿನ 33 ಗ್ರಾಮಗಳಿಂದ ಪಾದಯಾತ್ರೆಯಲ್ಲಿ ಬಂದು ದೇವರ ದರ್ಶನ ಪಡೆದು ಪುನೀತರಾದರು.
ನಂತರ ದೇವಸ್ಥಾನದ ಹೂವುಗಳಿಂದ ಅಲಂಕೃತಗೊಂಡ ದೊಡ್ಡಬಸವೇಶ್ವರ ಗೂಳಿ ಮೆರವಣಿಗೆ ಸಕಲ ವಾದ್ಯ ಹಾಗೂ ಮುತ್ತೈದೆಯರ ಕಳಸದೊಂದಿಗೆ ನಡೆಯಿತು. ನೀಲಮ್ಮ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಮಠದ ಸ್ವಾಮಿಯನ್ನು ಮೆರವಣಿಗೆ ಮೂಲಕ ರಥಕ್ಕೆ ಕೆರೆ ತರಲಾಯಿತು.ಸಂಪ್ರದಾಯದಂತೆ ಪ್ರತಿವರ್ಷ ಸಂಜೆ 5.30ರ ನಂತರ ರಥ ಎಳೆಯುತ್ತಿದ್ದರು. ಈ ವರ್ಷ ರಥೋತ್ಸವದ ದಿನ ಹೋಳಿ ಹುಣ್ಣಿಮೆಯ ದಿನವೇ ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮಧ್ಯಾಹ್ನವೇ ತೇರು ಎಳೆಯಲಾಯಿತು.
60 ಅಡಿ ಎತ್ತರದ ಮಹಾ ರಥೋತ್ಸವ ದೇವಸ್ಥಾನದ ಮುಂಭಾಗದಿಂದ ರಥಬೀದಿಯಲ್ಲಿ ಎದುರು ಬಸವಣ್ಣ ದೇವಸ್ಥಾನ ತಲುಪಿ ನಂತರ ಸ್ವಸ್ಥಾನಕ್ಕೆ ಹಿಂತಿರುಗಿತು. ಭಕ್ತರು ತಮ್ಮ ಇಷ್ಟಾರ್ಥ ಹೂ, ಹಣ್ಣು ಎಸೆದು ಹರಕೆ ತೀರಿಸಿದರು.
ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ವಿಶೇಷ ಬಂದೋಬಸ್ತ್ ಒದಗಿಸಿತ್ತು. ದೇವಸ್ಥಾನದ ಪ್ರಾಂಗಣದಲ್ಲಿ ತಾತ್ಕಾಲಿಕ ಮಹಿಳಾ ಪೊಲೀಸ್ ಠಾಣೆ ತೆರೆಯಲಾಗಿತ್ತು. ನಾನಾ ಗ್ರಾಮದಿಂದ ಬರುವ ವಾಹನ ನಿಲುಗಡೆಗೆ 5 ರಸ್ತೆಗಳಲ್ಲಿ ವಿಶೇಷ ನಿಲ್ದಾಣ ನಿರ್ಮಿಸಲಾಗಿತ್ತು. ಸಾರಿಗೆ ಇಲಾಖೆಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಡಿವೈಎಸ್ಪಿ ಪ್ರಸಾದ್ ಗೋಖಲೆ ತಿಳಿಸಿದರು.
ಮಹಾರಥೋತ್ಸವದ ನಿಮಿತ್ತ ನಾನಾ ಯುವಕರು ಮಜ್ಜಿಗೆ, ನೀರು ವಿತರಿಸಿದರು. ಭಕ್ತರಿಗೆ ವಿವಿಧೆಡೆ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.