ಉಡುಪಿ: ಇಲ್ಲಿನ ತೋನ್ಸೆ ಗ್ರಾಮ ಪಂಚಾಯಿತಿ ಕಚೇರಿಗೆ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಗ್ರಾಮದ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಕೆಮ್ಮಣ್ಣು ಭಾಗದ ವಿದ್ಯುತ್ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಈ ಭಾಗದಲ್ಲಿ ಈಗಾಗಲೇ ಸಬ್ ಸ್ಟೇಷನ್ ಮಂಜೂರಾಗಿದ್ದು, ಸರ್ಕಾರಿ ಭೂಮಿ ಅಂತಿಮಗೊಳ್ಳಬೇಕಾಗಿದೆ ಎಂದು ತಿಳಿಸಿದರು. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಮುಂತಾದ ಪಿಂಚಣಿಗಳು ರದ್ದಾಗಿರುವ ಬಗ್ಗೆ ಹಿಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದು, ಸಮಸ್ಯೆ ಈವರೆಗೆ ಬಗೆಹರಿದಿರುವುದಿಲ್ಲ. ಈ ಕುರಿತು ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕರು ತಿಳಿಸಿದರು.

ಕೆಮ್ಮಣ್ಣಿನ ತಿಮ್ಮಣ್ಣ ಕುದ್ರುವಿನಿಂದ ಹಾರಾಡಿವರೆಗೆ ಸೇತುವೆ ನಿರ್ಮಾಣವಾದಲ್ಲಿ ಬ್ರಹ್ಮಾವರ ತಲುಪುವ ಜನರಿಗೆ ಅನುಕೂಲವಾಗಲಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.

ಸಭೆಯಲ್ಲಿ ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯ, ಮಲ್ಪೆ ವೃತ್ತದ ಪೋಲಿಸ್ ನಿರೀಕ್ಷಕ ರಾಮಚಂದ್ರ ನಾಯಕ್, ಕೆಮ್ಮಣ್ಣು ಗ್ರಾಪಂ ಆಡಳಿತಾಧಿಕಾರಿ ಅನುಷಾ, ಉಡುಪಿ ನಗರ ಪ್ರಾಧಿಕಾರದ ನಗರ ಯೋಜನಾ ಸದಸ್ಯ ಸಚಿನ್, ಮಲ್ಪೆ ಠಾಣೆಯ ಉಪನಿರೀಕ್ಷಕ ಅನಿಲ್ ಕುಮಾರ್, ಪಂ.ಅ. ಅಧಿಕಾರಿಗಳು, ಮಾಜಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ಹೂಡೆಯಲ್ಲಿ ಅಕ್ರಮ ಮದರಸ ?: ಹೂಡೆ ಭಾಗದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಉದ್ದೇಶಕ್ಕೆ 2250 ಚದರ ಅಡಿಯ ಅನುಮತಿ ಪಡೆದು ಸುಮಾರು 7000 ಚದರ ಅಡಿಯ ಕಟ್ಟಡ ನಿರ್ಮಿಸಿ ದಾರುಸ್ಸುಲ್ ಎಜ್ಯುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಈ ಕಟ್ಟಡದಲ್ಲಿ ಅಕ್ರಮ ಮದರಸ ನಡೆಸುತ್ತಿದ್ದು, ಈ ಬಗ್ಗೆ ಗ್ರಾಪಂಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರಾದ ಅಫ್ತಾಬ್ ಆಲಂ ಆಕ್ರೋಶ ವ್ಯಕ್ತಪಡಿಸಿದರು.


ಇದಕ್ಕೆ ಸ್ಪಂದಿಸಿದ ಶಾಸಕರು ಈ ಕುರಿತು ಸಮಗ್ರ ತನಿಖೆ ನಡೆಸಿ, ಕಾನೂನು ಮೀರಿ ಕೆಲಸ ನಿರ್ವಹಿಸಿದ ಅಧಿಕಾರಿಗಳಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದರು.