ಕನ್ನಡಪ್ರಭ ವಾರ್ತೆ ಕಲಬುರಗಿ
ಮಾನವ ತನ್ನ ದುರಾಸೆಯಿಂದ ಪರಿಸರದ ಮೇಲೆ ದಬ್ಬಾಳಿಕೆ ಮಾಡಿ, ಅನೇಕ ಗಿಡ-ಮರಗಳನ್ನು ನಾಶಪಡಿಸುವುದರ ಮೂಲಕ, ಪರಿಸರ ಅಸಮತೋಲನಕ್ಕೆ ಕಾರಣವಾಗಿದ್ದಾನೆ. ಇದರಿಂದ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಗಂಡಾತರ ತಪ್ಪಿದಲ್ಲ. ಆದ್ದರಿಂದ ಇರುವ ಅರಣ್ಯ ಸಂಪತ್ತನ್ನು ಕಾಪಾಡುವದರ ಜೊತೆಗೆ, ಉಳಿದ ಪ್ರದೇಶದಲ್ಲಿಯೂ ಗಿಡ-ಮರಗಳನ್ನು ಬೆಳೆಸಿದರೆ ಮಾತ್ರ ನಿಸರ್ಗ, ಪರಿಸರ ಉಳಿಯಲು ಸಾಧ್ಯವಿದೆ ಎಂದು ವಲಯ ಅರಣ್ಯ ಅಧಿಕಾರಿ ರಮೇಶ ಗಾಣಿಗೇರ ಹೇಳಿದರು.ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಕಿರು ಮೃಗಾಲಯದಲ್ಲಿ ಅರಣ್ಯ ಇಲಾಖೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ವಿಶ್ವ ಅರಣ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ, ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ನಮ್ಮ ದೇಶದ ಒಟ್ಟು ವಿಸ್ತೀರ್ಣದಲ್ಲಿ ಶೇ.33ರಷ್ಟು ಅರಣ್ಯದ ಅವಶ್ಯಕತೆಯಿದೆ. ಆದರೆ, ಪ್ರಸ್ತುತವಾಗಿ ಇದರ ಪ್ರಮಾಣ ಸುಮಾರು ಶೇ.24ರಷ್ಟಿದೆ. ಇದರಿಂದ ಹಸಿರು ಮನೆ ಪರಿಣಾಮ ಉಂಟಾಗಿ, ಜಾಗತಿಕ ತಾಪಮಾನದಲ್ಲಿ ಏರಿಕೆಯುಂಟಾಗುತ್ತಿದೆ. ಹಸಿರುಮಯ ವಾತಾವರಣ ಕಾಣೆಯಾಗಿ, ಕಾಂಕ್ರಿಟ್ ಕಟ್ಟಡಗಳು ಎಲ್ಲೆಡೆ ತಲೆಯೆತ್ತಿವೆ. ಜೊತೆಗೆ ಮಳೆಯ ಪ್ರಮಾಣ ಕಡಿಮೆಯಾಗಿ ಬರಗಾಲ ಉಂಟಾಗಿದೆ. ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ-ಮುತ್ತಲೂ ಗಿಡಗಳನ್ನು ನೆಟ್ಟು, ಪೋಷಿಸಬೇಕು. ಇದರಿಂದ ಉತ್ತಮವಾದ ವಾತಾವರಣ ದೊರೆಯುತ್ತದೆ ಎಂದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಸುಮೀತಕುಮಾರ ಪಾಟೀಲ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುನೀರ್ ಅಹಮ್ಮದ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಿತು. ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಉಪನ್ಯಾಸಕ ಅಮರನಾಥ ಶಿವಮೂರ್ತಿ, ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದ ಅಧ್ಯಕ್ಷ ಅಸ್ಲಾಂ ಶೇಖ್, ಡಿಆರ್‌ಎಫ್‍ಓ ಮಲ್ಲಿಕಾರ್ಜುನ ಎಚ್.ಜಮಾದಾರ, ಅರಣ್ಯ ರಕ್ಷಕ ಕಾಂತಪ್ಪ ಪೂಜಾರಿ, ಪ್ರಾಣಿ ಪಾಲಕ ಸದಾನಂದ ಶಿರವಾಳ, ಅರಣ್ಯ ವೀಕ್ಷಕಿ ಶಿವಲೀಲಾ ತೆಗನೂರ ಸೇರಿದಂತೆ ಇನ್ನಿತರರಿದ್ದರು.