ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನಲ್ಲಿ ಬುಧವಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಎಪಿಎಂಸಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಯಾವ ಯಾವ ಎಪಿಎಂಸಿಗಳ ಎಷ್ಟು ಭೂಮಿ ಒತ್ತುವರಿ ಆಗಿದೆ ಎಂಬ ಮಾಹಿತಿ ಪಡೆದು, ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದರೆ ತಕ್ಷಣ ತೆರವಿಗೆ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ಒತ್ತುವರಿ ಆಗಿದ್ದರೆ ಸಂಬಂಧಪಟ್ಟ ಇಲಾಖೆಯಿಂದ ಪರಿಹಾರ ಪಡೆಯಲು ತಕ್ಷಣ ಪತ್ರ ಬರೆಯಬೇಕು ಎಂದು ಸೂಚಿಸಿದರು. ರಾಷ್ಟೀಯ ಹೆದ್ದಾರಿ ನಿರ್ಮಾಣಕ್ಕೆ ನಂಜನಗೂಡು ಎಪಿಎಂಸಿಯ 12 ಗುಂಟೆ ಭೂಮಿಯನ್ನು ಬಳಕೆ ಮಾಡಿಕೊಂಡಿದ್ದರೂ ಇದುವರೆಗೆ ಪರಿಹಾರಕ್ಕೆ ಏಕೆ ಪ್ರಯತ್ನಿಸಿಲ್ಲ ಎಂದು ಎಇಇ ಅವರನ್ನು ತರಾಟೆ ತೆಗೆದುಕೊಂಡರು.ಟಿ. ನರಸೀಪುರದಲ್ಲಿ ಎಪಿಎಂಸಿ ಕಟ್ಟಡವನ್ನು ನಾಡಕಚೇರಿಗೆ ಬಾಡಿಗೆ ನೀಡಲಾಗಿದ್ದು, 22 ಲಕ್ಷ ರೂ. ಬಾಡಿಗೆ ಬರಬೇಕಾಗಿದೆ. ಆರಂಭದಿಂದಲೂ ಇದುವರೆಗೆ ಬಾಡಿಗೆ ಬಂದಿಲ್ಲ ಎಂಬ ವಿಷಯ ತಿಳಿದ ಸಚಿವರು, ಈ ಹಣ ಪಾವತಿಗೆ ಕಂದಾಯ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಬೆಂಬಲ ಬೆಲೆಯಲ್ಲಿ ರಾಗಿ, ಭತ್ತ ಖರೀದಿ ಪ್ರಮಾಣ ಮತ್ತು ಲೋಪದೋಷಗಳನ್ನು ತಿಳಿಸಬೇಕು. ಎಪಿಎಂಸಿ ಕಾರ್ಯದರ್ಶಿಗಳು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ಸಂಗ್ರಹಿಸಬೇಕು ಎಂದರು.
ಹಲವರು ಟ್ರೇಡ್ ಲೈಸೆನ್ಸ್ ಹೊಂದಿದ್ದರೂ ಖರೀದಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. ಬೇರೆ ಬೇರೆ ಉದ್ದೇಶಗಳಿಗೆ ಲೈಸೆನ್ಸ್ ಪಡೆದು ಐದು ವರ್ಷಗಳಿಂದ ಖರೀದಿ ಚಟುವಟಿಕೆಯಲ್ಲಿ ಭಾಗವಹಿಸದವರ ಲೈಸೆನ್ಸ್ ರದ್ದುಪಡಿಸಿ ಎಂದು ಸೂಚಿಸಿದರು. ವರ್ತಕರು ಎಪಿಎಂಸಿ ಗೋದಾಮುಗಳ ಬಾಕಿ ಉಳಿಸಿಕೊಂಡಿದ್ದರೆ ವಸೂಲು ಮಾಡಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವೇತನದಲ್ಲಿ ಕಡಿತ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಅಪರ ನಿರ್ದೇಶಕ ನಜೀಬುಲ್ಲಾ ಖಾನ್, ಅಧೀಕ್ಷಕ ಅಭಿಯಂತರ ರಘುನಂದನ್ ಮೊದಲಾದವರು ಇದ್ದರು.
ಗುರಿ ಮುಟ್ಟದಿರಲು ಏನು ಕಾರಣ?
ಕಳೆದ ನವಂಬರ್ 24ರಂದೇ ಮೈಶುಗರ್ನಲ್ಲಿ ಕಬ್ಬು ನುರಿಸುವುದನ್ನು ನಿಲ್ಲಿಸಲಾಗಿದೆ. ಆದರೆ ಸುತ್ತಮುತ್ತಲಿನ ಕಾರ್ಖಾನೆಗಳು ನಂತರವೂ ಕಬ್ಬು ನುರಿಸಿವೆ. ಮುಂದಿನ ಹಂಗಾಮಿನಲ್ಲಿ ನಿಗದಿತ ಗುರಿ ತಲುಪಲು ಹೀಗೆ ಆಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಮೊಲಾಸಿಸ್ ಗೆ ಬೆಲೆ ಬಂದಾಗ ಮಾರಾಟ ಮಾಡಿ ಎಂದು ಸಲಹೆ ನೀಡಿದ ಸಚಿವರು, ಮುಂದಿನ ಹಂಗಾಮು ಆರಂಭವಾಗುವ ವೇಳೆಗೆ ಕಾರ್ಖಾನೆ ದುರಸ್ತಿ, ನಿರ್ವಹಣೆಯನ್ನು ಪೂರ್ಣಗೊಳಿಸಿ ಎಂದು ಅವರು ಸೂಚಿಸಿದರು.
ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ವೀಣಾ ಇದ್ದರು.