ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಭೂ ಮಾಫಿಯಾಗೆ ಕಂದಾಯ ಇಲಾಖೆಯೇ ಸಾಥ್ ನೀಡುತ್ತಿದೆ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಹಾಗೂ ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಚೇರಿ ಮುಂಭಾಗ ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್ ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ಸೇರಿದ ರೈತರು ಹಾಗೂ ಕಾರ್ಯಕರ್ತರು, ಸರ್ಕಾರ ಹಾಗೂ ತಹಸೀಲ್ದಾರ್ ವಿರುದ್ಧ ಘೋಷಣೆ ಕೂಗಿದರು.
ಪಟ್ಟಣ ಸೇರಿದಂತೆ ತಾಲೂಕಿನ ಸರ್ಕಾರಿ ಜಾಗ, ಶ್ರೀರಂಗನಾಥ ಸ್ವಾಮಿ ಜಾಗವನ್ನೂ ಭೂ ಮಾಫಿಯಾದವರು ಗುಳುಂ ಮಾಡುತ್ತಿದ್ದಾರೆ. ತಡೆಯಲು ಮುಂದಾಗದ ತಾಲೂಕು ದಂಡಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅವರ ಚೇಲಾ ರೀತಿ ವರ್ತಿಸುತ್ತಿದ್ದಾರೆ ಎಂದು ದೂರಿದರು.ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜನ ಸಾಮಾನ್ಯರ ಕೆಲಸ- ಕಾರ್ಯಗಳು ಆಗುತ್ತಿಲ್ಲ. ಅನಾವಶ್ಯಕವಾಗಿ ರೈತರು ಹಾಗೂ ಸಾರ್ವಜನಿಕರನ್ನು ಅಲೆದಾಡಿಸುವ ಪ್ರವೃತ್ತಿ ದಿನೇ ದಿನ ಹೆಚ್ಚುತ್ತಿದೆ. ಅಲ್ಲದೆ ಲಂಚ ಕೊಡದೆ ಕೆಲಸ ಆಗುವುದಿಲ್ಲ ಎನ್ನುವ ಪರಿಸ್ಥಿತಿಗೆ ಜನ ಸಾಮಾನ್ಯರು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಬಾಹಿರ ಚಟುವಟಿಕೆ, ಭೂ ಮಾಫಿಯಾ, ಶ್ರೀಮಂತರ ಕೆಲಸ ಕಾರ್ಯಗಳು ಅಡೆತಡೆ ಇಲ್ಲದೆ ನಡೆಯುತ್ತಿವೆ. ವಿಶೇಷವಾಗಿ ಕಂದಾಯ ಇಲಾಖೆ, ಸರ್ವೇ ಇಲಾಖೆ, ಆಹಾರ ಇಲಾಖೆ, ಉಪನೋಂದಣಾಧಿಕಾರಿ ಕಚೇರಿ ಸೇರಿದಂತೆ ಇತರೆ ಇಲಾಖೆಗಳು ಲಂಚಮಯವಾಗಿವೆ ಎಂದು ಆರೋಪಿಸಿದರು.ಪಟ್ಟಣಕ್ಕೆ ಬರುವ ಪ್ರವಾಸಿಗರಿಂದ ಪಾರ್ಕಿಂಗ್ ಶುಲ್ಕದ ಮೂಲಕ ದುಪ್ಪಟ್ಟು ಹಣ ವಸೂಲಿ ಮಾಡುವ ಜೊತೆಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಸಮಿತಿ ಹಲವು ಬಾರಿ ಹೋರಾಟ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ ಎಂದರು.
ಜಿಲ್ಲಾಧಿಕಾರಿಗಳು ಸಹ ಸರ್ಕಾರಿ ಜಾಗವನ್ನು ಉಳಿಸುವಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಆದರೆ, ತಹಸೀಲ್ದಾರ್ ಇಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ದೂರಿದರು. ನಂತರ ಅಂಚೆ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಅಂಚೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ರವಾನಿಸಿದರು.ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಹನಿಯಂಬಾಡಿ ನಾಗರಾಜು, ಮೇಳಾಪುರ ಜಯರಾಮೇಗೌಡ, ಜಗದೀಶ್, ಗಂಜಾಂ ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎಂ.ವಿ ಕೃಷ್ಣ, ದರ್ಶನ್, ಖಜಾಂಚಿ ಮಹದೇವು, ಕಡತನಾಳು ಶ್ರೀಧರ್, ಡಿ. ಮಂಜುನಾಥ್, ಹೆಮ್ಮಿಗೆ ಕೃಷ್ಣ, ಹೆಬ್ಬಾಡಿ ಹುಂಡಿ ಸಿದ್ದೇಗೌಡ, ಡಿ.ಎಂ ಮಹೇಶ್, ಕಪರನಕೊಪ್ಪಲು ಸುರೇಶ, ಅಚ್ಚಪ್ಪನಕೊಪ್ಪಲು ರವಿಲಕ್ಷ್ಮಣ, ಸಿ.ಟಿ ರಾಮಚಂದ್ರ, ಹೊಸಹಳ್ಳಿ ಸ್ವಾಮಿ, ಪಾಲಹಳ್ಳಿ ರಾಮಚಂದ್ರು ಸೇರಿದಂತೆ ಇತರರು ಇದ್ದರು.