- ಕಂಬ, ಇತರೆ ವಸ್ತುಗಳು ಬೇರೆಯವರಿಗೆ ಮಾರಾಟ ಶಂಕೆ: ಉಮೇಶ್ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹರಿಹರ 2024ರ ಮಳೆಗಾಲದಲ್ಲಿ ಮಳೆ, ಗಾಳಿಗೆ ತಾಲೂಕಿನಲ್ಲಿ ವಿದ್ಯುತ್ ಮಾರ್ಗಗಳಿಗೆ ₹4 ಕೋಟಿಗೂ ಅಧಿಕ ಮೊತ್ತದ ನಷ್ಟ ಉಂಟಾಗಿದೆ ಎಂದು ಬೆಸ್ಕಾಂ ಹರಿಹರ ಉಪ ವಿಭಾಗದವರು ಅಂದಾಜು ಪಟ್ಟಿ ತಯಾರಿಸಿದ್ದಾರೆ. ಈ ಕುರಿತು ಉನ್ನತಮಟ್ಟದ ತನಿಖೆ ಮಾಡಬೇಕೆಂದು ನಗರದ ಹಿರಿಯ ವಿದ್ಯುತ್ ಗುತ್ತಿಗೆದಾರ ಕೆ.ಬಿ.ಉಮೇಶ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ವಿಭಾಗದ ಅಧಿಕಾರಿಗಳು ಸಿದ್ಧಪಡಿಸಿದ ಹಾನಿಗೆ ಒಳಗಾದ ವಿದ್ಯುತ್ ಮಾರ್ಗಗಳ ಅಂದಾಜು ಪಟ್ಟಿಗಳಿಗೆ ಬೆಸ್ಕಾಂ ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕಾರ್ಯಾದೇಶ ಮಾಡಿ, ತಮಗೆ ಬೇಕಾದ ವ್ಯಕ್ತಿಗಳಿಗೆ ಕಾಮಗಾರಿ ನಿರ್ವಹಣೆಗೆ ಅವಾರ್ಡ್ ನೀಡಿದ್ದಾರೆ ಎಂದು ದೂರಿದರು.ಈ ಹಿಂದೆ ಬೇರೆ ವರ್ಷಗಳಲ್ಲಿ ಮಳೆ, ಗಾಳಿಯಿಂದ ವಿದ್ಯುತ್ ಮಾರ್ಗಗಳಿಗೆ ಆಗಿರುವ ಹಾನಿಯ ಫೋಟೋಗಳನ್ನು ಈಗ ಒದಗಿಸಿ, ಕಾರ್ಯಾದೇಶ ಮತ್ತು ಅವಾರ್ಡ್ ಪಡೆದು ಬೆಸ್ಕಾಂ ಅಧಿಕಾರಿಗಳಿಗೆ ಬೇಕಾದ ವ್ಯಕ್ತಿಗಳು ಈಗಾಗಲೇ ಕೆಲವು ಬಿಲ್ಲುಗಳನ್ನೂ ಸಲ್ಲಿಸಿದ್ದಾರೆ ಎಂದರು.
ನೆಪ ಮಾತ್ರಕ್ಕೆ ಅಲ್ಲೊಂದು, ಇಲ್ಲೊಂದು ಕಾಮಗಾರಿ ನಡೆಸಲಾಗಿದೆ. ಉಳಿದ ಸಾಮಗ್ರಿಗಳಾದ ವಿದ್ಯುತ್ ಕಂಬ ಮತ್ತು ಇತರೆ ವಸ್ತುಗಳನ್ನು ಬೇರೆಯವರಿಗೆ ಮಾರಾಟ ಮಾಡಿರುವ ಶಂಕೆ ಇದೆ. ಈ ಕುರಿತು ಇಲ್ಲಿನ ಬೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಮೌಖಿಕವಾಗಿ ಹಲವು ಬಾರಿ ಗಮನ ಸೆಳೆದರೂ ಉಪಯೋಗವಾಗಿಲ್ಲ ಎಂದು ಆರೋಪಿಸಿದರು.ಬೆಸ್ಕಾಂ ಅಧಿಕಾರಿಗಳೆ ಶಾಮೀಲಾಗಿ ಬೆಸ್ಕಾಂಗೆ ನಷ್ಟ ಉಂಟು ಮಾಡುತ್ತಿರುವ ಈ ಪ್ರಕರಣದ ಕುರಿತು ಬೆಸ್ಕಾಂನ ಟೆಕ್ನಿಕಲ್ ಆಡಿಟ್ ಅಂಡ್ ಕ್ವಾಲಿಟಿ ಕಂಟ್ರೋಲ್ (ಟಿಎಕ್ಯುಸಿ) ಶಾಖೆ ಮತ್ತು ಬೆಸ್ಕಾಂನ ವಿಚಕ್ಷಣಾ ದಳದಿಂದ ಸಮಗ್ರ ತನಿಖೆ ನಡೆಸಬೇಕೆಂದು ಇಂಧನ ಸಚಿವರು ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಆಗ್ರಹಿಸಿದರು.
ಹಿರಿಯ ಗುತ್ತಿಗೆದಾರ ಭಾನುವಳ್ಳಿ ಎಸ್.ಜಿ. ಮಂಜುನಾಥ್ ಮಾತನಾಡಿ, ನಗರದ ಖಾಸಗಿ ಲೇಔಟ್‍ನಲ್ಲಿ ಅಳವಡಿಸಿದ್ದ 5 ಟಿ.ಸಿ.ಗಳ ಪೈಕಿ 3 ಟಿ.ಸಿ.ಗಳು ಕಾಣೆಯಾಗಿವೆ. ಈ ಕುರಿತು ಟಿಎಕ್ಯುಸಿಗೆ ದೂರು ಸಲ್ಲಿಸಲಾಗಿದೆ. ಮಳೆ, ಗಾಳಿಯ ನಷ್ಟ ₹4 ಕೋಟಿಗೂ ಹೆಚ್ಚಾಗಿ ಅಂದಾಜಿಸಿರುವುದು ಅನುಮಾನಕ್ಕೆ ಎಡೆಮಾಡಿದೆ. ಇಂತಹ ಸೋರಿಕೆಗಳಿಂದಾಗಿಯೇ ಬೆಸ್ಕಾಂ ₹9018 ಕೋಟಿಗಳ ನಷ್ಟದಲ್ಲಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ಹರಿಹರ ಬೆಸ್ಕಾಂ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೈ.ಆರ್. ಪುಟ್ಟಪ್ಪ, ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ ಮಾತನಾಡಿದರು.
ವಿದ್ಯುತ್ ಗುತ್ತಿಗೆದಾರರಾದ ಫಾಜಿಲ್ ಎಂ.ಬಿ., ಡಿ.ಬಿ.ಕೆರೆ ರವಿಕುಮಾರ್, ಎನ್.ಎಂ.ಕೊಟ್ರೇಶ್, ಬಸವರಾಜ್ ಕೆ.ಎನ್., ಜಯರಾಂ ರೋಖಡೆ, ನಗರಸಭೆ ಗುತ್ತಿಗೆದಾರ ಮೊಹ್ಮದ್ ಮಜಹರ್ ಇದ್ದರು.- - -
ಕೋಟ್ ಬೆಸ್ಕಾಂ ಹಣ ದುರುಪಯೋಗ ವಿರುದ್ಧ ಪ್ರಶ್ನಿಸುತ್ತಿರುವ ನನಗೆ ವ್ಯಕ್ತಿಯೊಬ್ಬರಿಂದ ದೂರವಾಣಿ ಕರೆ ಮಾಡಿಸಿ ಬೆದರಿಸಲಾಗಿದೆ. ನನ್ನ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ನನಗೆ ರಕ್ಷಣೆ ನೀಡಬೇಕಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸುತ್ತೇನೆ- ಕೆ.ಬಿ.ಉಮೇಶ್, ಹಿರಿಯ ವಿದ್ಯುತ್ ಗುತ್ತಿಗೆದಾರ
- - - -29ಎಚ್‍ಆರ್‍ಆರ್02:ಹರಿಹರದಲ್ಲಿ ಬುಧವಾರ ಗುತ್ತಿಗೆದಾರ ಕೆ.ಬಿ.ಉಮೇಶ್ ವಿದ್ಯುತ್ ಗುತ್ತಿಗೆದಾರರ ಅಧ್ಯಕ್ಷ ವೈ.ಆರ್. ಪುಟ್ಟಪ್ಪ, ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.