ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ ೨೯ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಜ್ಜಾಲ-ಚಾಮರಾಜನಗ ರೈಲ್ವೆ ಯೋಜನೆಗೆ ಮರು ಚಾಲನೆ ಸಿಕ್ಕಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕನಕಪುರ ಕ್ಷೇತ್ರದ ಸಂಸದರಾಗಿದ್ದ ಸಮಯದಲ್ಲಿ ರೂಪಿಸಿದ್ದ ಯೋಜನೆಗೆ ಇಲ್ಲಿಯವರೆಗೆ ಚಾಲನೆ ದೊರಕಿರಲಿಲ್ಲ. ಇದೀಗ ಆ ಯೋಜನೆಯನ್ನು ಕುಮಾರಸ್ವಾಮಿಯವರೇ ಕೇಂದ್ರ ಬಜೆಟ್‌ಗೆ ಸೇರುವಂತೆ ಮಾಡಿದ್ದು, ಇದರಿಂದ ಜಿಲ್ಲೆಯ ಮಳವಳ್ಳಿ ಮತ್ತು ಹಲಗೂರು ಭಾಗದ ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.೧೯೯೬-೯೭ನೇ ಸಾಲಿನಲ್ಲಿ ಬೆಂಗಳೂರು-ಸತ್ಯಮಂಗಲ ರೈಲ್ವೆ ಮಾರ್ಗಕ್ಕೆ ಮಂಜೂರಾತಿ ದೊರಕಿತ್ತು. ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆ ಸೇರಿ ಮೂರು ಜಿಲ್ಲೆಗಳಲ್ಲಿ ಹಾದುಹೋಗುವ ಈ ಮಾರ್ಗದ ಸರ್ವೇ ಕಾರ್ಯವೂ ಪೂರ್ಣಗೊಂಡಿತ್ತು. ಆದರೆ, ನಂತರ ಬಂದ ಸಂಸದರು ಈ ಯೋಜನೆ ಬಗ್ಗೆ ಆಸಕ್ತಿ ತೋರಿಸದಿದ್ದರಿಂದ ರೈಲ್ವೆ ಯೋಜನೆ ನೆನೆಗುದಿಗೆ ಬಿದ್ದಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತುತ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಹೆಜ್ಜಾಲ-ಚಾಮರಾಜನಗರ ರೈಲ್ವೆ ಮಾರ್ಗ ಯೋಜನೆ ಕುರಿತು ಚರ್ಚಿಸಿದ್ದು, ಮುಂದಿನ ಬಜೆಟ್‌ನಲ್ಲೇ ಯೋಜನೆಯನ್ನು ಸೇರ್ಪಡೆ ಮಾಡುವುದಾಗಿ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಈ ರೈಲ್ವೆ ಯೋಜನೆಯಿಂದ ಸಾರಿಗೆ ವ್ಯವಸ್ಥೆ ಉತ್ತಮಗೊಂಡು ಆರ್ಥಿಕಾಭಿವೃದ್ಧಿಗೆ ನೆರವಾಗಲಿದೆ ಎಂದರು.ಈ ರೈಲ್ವೆ ಯೋಜನೆಗೆ ಭೂಸ್ವಾಧೀನವಾಗುವ ಜಮೀನುಗಳಿಗೆ ನೀಡುವ ಪರಿಹಾರ ಹಣದಲ್ಲಿ ರಾಜ್ಯ ಸರ್ಕಾರ ಕೂಡ ಶೇ.೫೦ರಷ್ಟು ಪಾಲನ್ನು ನೀಡಬೇಕಿದೆ. ೧೭೮೯ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿದ್ದು, ಅರಣ್ಯ ಭೂಮಿಯನ್ನು ಹೊರತುಪಡಿಸಿ ಇದು ಶೇ.೧೦೦ರಷ್ಟು ಕಂದಾಯ ಭೂಮಿಯಾಗಿದೆ. ೧೪೨ ಕಿ.ಮೀ. ದೂರದ ಈ ಯೋಜನೆಗೆ ೧೩೮೨.೭೮ ಕೋಟಿ ರು. ಅಂದಾಜು ವೆಚ್ಚ ಮಾಡಲಾಗಿತ್ತು. ಈಗ ಅದರ ವೆಚ್ಚ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದರು.
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದು ಅವರು ಈ ರೈಲ್ವೆ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇದು ಅವರು ತವರು ಜಿಲ್ಲೆಯ ಮೂಲಕವೇ ಹಾದುಹೋಗುವುದುರಿಂದ ಆದಷ್ಟು ಬೇಗ ಯಾವುದೇ ಅಡ್ಡಿ-ಆತಂಕಗಳು ಎದುರಾಗದಂತೆ ಸರಿಯಾಗಿ ನಿರ್ವಹಿಸಬೇಕು ಎಂದು ಮನವಿ ಮಾಡಿದರು.ಬೆಳೆಗಳಿಗೆ ನೀರು ಹರಿಸುವಂತೆ ಒತ್ತಾಯ:
ಕಳೆದ ಜನವರಿ ತಿಂಗಳಲ್ಲಿ ನೀರು ನಿಲ್ಲಿಸಿದ್ದು, ನಾಲಾ ಆಧುನೀಕರಣದ ನೆಪವೊಡ್ಡಿ ಇಲ್ಲಿಯವರೆಗೂ ನೀರನ್ನು ಹರಿಸಿಲ್ಲ. ಈಗ ತುರ್ತಾಗಿ ಎರಡು ಕಟ್ಟು ನೀರಿನ ಅವಶ್ಯಕತೆ ಇರುವುದರಿಂದ ಕೂಡಲೇ ಸರ್ಕಾರ ಕ್ರಮವಹಿಸಿ ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಒತ್ತಾಯಿಸಿದರು.ಬಿಸಿಲ ತಾಪಕ್ಕೆ ತೆಂಗಿನ ಮರಗಳ ಸುಳಿಗಳು ಒಣಗಿಹೋದವು. ಬೆಳೆಗಳಿಗೆ ನೀರು ಸಿಗದೆ ರೈತರು ನಷ್ಟಕ್ಕೊಳಗಾಗಿದ್ದಾರೆ. ಹೀಗಿದ್ದರೂ ನೀರು ಹರಿಸದೆ ಸರ್ಕಾರ ಭಂಡತನ ಪ್ರದರ್ಶಿಸುತ್ತಿರುವುದು ಸರಿಯಲ್ಲ. ಈಗ ಅಣೆಕಟ್ಟೆಯಲ್ಲಿ ೯೫ ಅಡಿಯವರೆಗೆ ನೀರಿದೆ. ನೀರು ಬಿಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ವಿಳಂಬ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ನಂದಕುಮಾರ್, ಪುಟ್ಟರಾಮು, ಕಂಸಾಗರ ರವಿ, ಕಾಂತರಾಜು, ಸಿದ್ದಾಚಾರಿ, ಮೆಹಬೂಬ್ ಪಾಷ ಇತರರಿದ್ದರು.