ಗುಣಮಟ್ಟದ ಬೀಜದಿಂದ ಆರ್ಥಿಕ ಅಭಿವೃದ್ಧಿ

KannadaprabhaNewsNetwork | Published : Apr 24, 2025 11:50 PM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರೈತರಿಗೆ ಉತ್ತಮ ಗುಣಮಟ್ಟದ ಬೀಜ ಕೊಟ್ಟರೆ ಅವರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವುದು ಎಂದು ನಿವೃತ್ತ ವಿಶೇಷ ಬೀಜಾಧಿಕಾರಿ ಡಾ.ರವಿ ಹುಂಜಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರೈತರಿಗೆ ಉತ್ತಮ ಗುಣಮಟ್ಟದ ಬೀಜ ಕೊಟ್ಟರೆ ಅವರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವುದು ಎಂದು ನಿವೃತ್ತ ವಿಶೇಷ ಬೀಜಾಧಿಕಾರಿ ಡಾ.ರವಿ ಹುಂಜಿ ಹೇಳಿದರು.

ನಗರದ ಹೊರವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಧಾರವಾಡ ಕೃಷಿ ವಿವಿ ವ್ಯಾಪ್ತಿಯ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವಾರ್ಷಿಕ ತಾಂತ್ರಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಬೀಜ ಉತ್ಪಾದಿಸಿ ರೈತರಿಗೆ ಗುಣಮಟ್ಟದ ಬೀಜ ವಿತರಿಸುವಲ್ಲಿ ಬೀಜ ವಿಭಾಗದ ವಿಜ್ಞಾನಿಗಳಿಗೆ ಸವಾಲಿನ ಕೆಲಸವಾಗಿದೆ. ಬೀಜ ಚನ್ನಾಗಿದ್ದರೆ ರೈತ ಇತರೆ ವಿಷಯಗಳ ಬಗ್ಗೆ ಹೆಚ್ಚಿಗೆ ಚಿಂತಿಸಬೇಕಿಲ್ಲ. ಆತ ಉತ್ತಮ ಫಸಲನ್ನು ನಿರೀಕ್ಷಿಸಬಹುದಾಗಿದೆ ಎಂದು ಹೇಳಿದರು.

ಧಾರವಾಡ ಕೃಷಿ ವಿವಿ ಆಡಳಿತಾಧಿಕಾರಿ ಡಾ.ವಿವೇಕಾನಂದ ದೇಶಪಾಂಡೆ, ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಬಿ.ಜಗ್ಗಿನವರ, ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ರೈತರು ಬಿತ್ತನೆಗೆ ಮುನ್ನ ಬೀಜ ಪರೀಕ್ಷೆ ಮಾಡಿಸಬೇಕು, ನಂತರ ಬೀಜೋಪಚಾರ ಮಾಡಬೇಕು, ಜೈವಿಕ ಮತ್ತು ರಾಸಾಯನಿಕ ಬೀಜೋಪಚಾರಗಳ ಕುರಿತು ರೈತರಿಗಿರುವ ಗೊಂದಲ ನಿವಾರಿಸಬೇಕು. ರೈತರು ಬಿತ್ತಿದ ನಂತರ ಮೊಳಕೆಯೊಡೆಯದಿದ್ದಲ್ಲಿ ರೈತನಿಗೆ ನಷ್ಟವುಂಟಾಗುವುದು. ಅದಕ್ಕಾಗಿ ರೈತರಿಗೆ ಗುಣಮಟ್ಟದ ಬೀಜಗಳ ಬಗ್ಗೆ ಬೀಜೋತ್ಪಾದನೆ ಕುರಿತಂತೆ ತರಬೇತಿ ನೀಡುವ ಅವಶ್ಯಕತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡೀನ್ ಡಾ.ಅಶೋಕ ಸಜ್ಜನ ಮಾತನಾಡಿ, ಪ್ರತಿವರ್ಷ ರೈತರ ಸಹಭಾಗಿತ್ವದಲ್ಲಿ ಬೀಜೋತ್ಪಾದನೆ ಕೈಗೊಳ್ಳಲಾಗುತ್ತಿದೆ. ಬೀಜೋಪಚಾರ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುತ್ತಿದೆ. ಉತ್ತಮ ಗುಣಮಟ್ಟದ ಬೀಜದ ಉತ್ಪಾದನೆ ಹಾಗೂ ವಿತರಣೆ ಕುರಿತು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.ತಾಂತ್ರಿಕ ಅಧಿವೇಶನದಲ್ಲಿ ಡಾ.ಆರ್.ಬಿ.ಜೊಳ್ಳಿ, ಡಾ.ಕೃಷ್ಣಾ, ಡಾ.ಸುಧೀಪಕುಮಾರ, ಡಾ.ಭರಮರಾಜ ಬಡಿಗೇರ, ಮಲ್ಲಿಕ ರೆಹಾನ್ ಸೇರಿದಂತೆ ಧಾರವಾಡ ಕೃಷಿ ವಿವಿ ವ್ಯಾಪ್ತಿಯ ಬೀಜ ವಿಭಾಗದ ವಿಜ್ಞಾನಿಗಳು, ಪ್ರಾಧ್ಯಾಪಕರು ಭಾಗವಹಿಸಿದ್ದರು.

Share this article