ಕುಷ್ಟಗಿ:
ಆಧುನಿಕ ತಂತ್ರಜ್ಞಾನ, ಆಹಾರ ವಿಜ್ಞಾನ ಹಾಗೂ ತಳಿಯ ಅಭಿವೃದ್ಧಿ ವಿಧಾನ ಅಳವಡಿಸಿ ಕುರಿಗಳನ್ನು ಸಾಕಿದರೆ ಹೆಚ್ಚಿನ ಲಾಭಗಳಿಸಬಹುದು ಎಂದು ಹಿರಿಯ ಪಶು ವೈದ್ಯಾಧಿಕಾರಿ ಡಾ. ಸಿದ್ದಲಿಂಗಯ್ಯ ಶಂಕೀನ್ ಹೇಳಿದರು.ತಾಲೂಕಿನ ಹಿರೇಮನ್ನಾಪುರ ಮತ್ತು ನೀರಲೂಟಿ ಗ್ರಾಮ ವ್ಯಾಪ್ತಿಯಲ್ಲಿ 5000 ಕುರಿಗಳಿಗೆ ಜಂತು ನಿವಾರಕ ಔಷಧಿ ಮತ್ತು ಕುರಿಗಳಿಗೆ ಕರಳುಬೇನೆ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ಕುರಿ ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿದರು.
ಇಂದಿನ ಆಧುನಿಕ ದಿನಗಳಲ್ಲಿ ಕುರಿ ಮೇಕೆ ಸಾಕಾಣಿಕೆ ಒಂದು ಉದ್ಯಮವಾಗಿ ಮಾರ್ಪಟ್ಟಿದ್ದು ಪಧವೀಧರರು ಹಾಗೂ ವಿವಿಧ ಸರ್ಕಾರಿ ಉದ್ಯೋಗದಲ್ಲಿರುವವರು ಈ ಉದ್ಯಮಕ್ಕೆ ಕಾಲು ಇಡುತ್ತಿರುವದರಿಂದ ಒಂದು ಉದ್ಯಮವಾಗಿ ಬೆಳೆದಿದ್ದು ಎಲ್ಲರು ವೈಜ್ಞಾನಿಕವಾಗಿ ಸಾಕಾಣಿಕೆಗೆ ಮುಂದಾಗಬೇಕು ಎಂದರು.ಕಲುಷಿತ ನೀರು ಸೇವನೆಯಿಂದ ಕುರಿಗಳಲ್ಲಿ ಜಂತುಹುಳು ಬೆಳೆದು ಕುರಿಗಳು ಬೆಳವಣಿಗೆ ಹೊಂದದೆ ದುರ್ಬಲಗೊಳ್ಳುತ್ತವೆ. ಹಾಗಾಗಿ ಎರಡ್ಮೂರು ತಿಂಗಳಿಗೊಮ್ಮೆ ಜಂತು ನಿವಾರಕ ಔಷಧಿ ಹಾಕಬೇಕು ಮತ್ತು ಪ್ರತಿ 6 ತಿಂಗಳಿಗೊಮ್ಮೆ ಕರಳುಬೇನೆ ಲಸಿಕೆ ಹಾಕಿಸಬೇಕು. ಕರುಳುಬೇನೆ ರೋಗವು ತೀವ್ರ ಸ್ವರೂಪದಾಗಿರುವದರಿಂದ ಕೆಲವೇ ಗಂಟೆಗಳಲ್ಲಿ ಕುರಿಗಳು ಸಾವನ್ನಪ್ಪುವ ಮೂಲಕ ಕುರಿಗಾಹಿಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಎಚ್ಚರಿಸಿದರು.
ಹಾಲು ಕುಡಿಯುವ ಕುರಿಮರಿಗಳು, ಇಬ್ಬನಿ ಅಥವಾ ಮಂಜು ಕೂಡಿದ ತೇವ ಪ್ರದೇಶದಲ್ಲಿ ಮೇಯುವಿಕೆ, ಅತೀ ಹೆಚ್ಚು ಜೋಳ ಮೇಯಿಸಿದಾಗ ಮತ್ತು ಆಹಾರ ಬದಲಿಸಿದಾಗ ಬೇದಿ ಉಂಟಾಗಿ ಕ್ರಮೇಣವಾಗಿ ರೋಗವು ಹರಡುತ್ತದೆ ಮತ್ತು ಕಾಲುಗಳನ್ನು ಆಡಿಸಿ ಪ್ರಜ್ಞೆ ಕಳೆದುಕೊಂಡು ಸಾವು ಉಂಟಾಗುತ್ತದೆ ಎಂದ ಅವರು, ಸೂಕ್ತ ಸಮಯಕ್ಕೆ ಲಸಿಕೆ ಹಾಕಿಸಬೇಕೆಂದು ಹೇಳಿದರು.ಈ ವೇಳೆ ಪಶು ವೈದ್ಯಕೀಯ ಇಲಾಖೆಯ ಸಿಬ್ಬಂದಿಗಳಾದ ಪ್ರವೀಣ ಬಾಳಿಗಿಡದ, ವೀರೇಶ ರಾಂಪೂರ, ಪಶುಸಖಿ ಹುಲಿಗೆಮ್ಮ, ಕುರಿಗಾಹಿ ಮಲ್ಲಿಕಾರ್ಜುನ ಅಗಸಿಮುಂದಿನ, ಶಂಕ್ರಪ್ಪ, ಗ್ಯಾನಪ್ಪ, ರಾಮಣ್ಣ, ಬಾಳಪ್ಪ ಚಳ್ಳಾರಿ, ಹನಮಂತಪ್ಪ ಚಳ್ಳಾರಿ ಮತ್ತು ಕುರಿಸಾಕಾಣಿಕೆದಾರರು ಉಪಸ್ಥಿತರಿದ್ದರು.