ಕೆಂಪುಕಲ್ಲು, ಮರಳು ಸಮಸ್ಯೆ: ಜುಲೈ 14ರಂದು ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Jul 11, 2025, 12:32 AM IST
ಸತೀಶ್ ಕುಂಪಲ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಕೆಂಪುಕಲ್ಲು ಹಾಗೂ ಮರಳು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಜುಲೈ ೧೪ ರಂದು ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಾನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಹಾಗೂ ಮರಳು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಬಿಜೆಪಿ ವತಿಯಿಂದ ಜುಲೈ ೧೪ ರಂದು ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಾನದಲ್ಲಿ ಪ್ರತಿಭಟನೆ ನಡೆಸಲಾಗುವುದು. ಕೆಂಪುಕಲ್ಲು, ಮರಳು ಪೂರೈಕೆ ಮಾಡುವವರು, ಕಾರ್ಮಿಕರು ಪ್ರತಿಭಟನೆ ಬೆಂಬಲಿಸಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಜಿಲ್ಲೆಯಲ್ಲಿ ಮನೆ ಸಹಿತ ಇತರ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕಳೆದ ಕೆಲವು ತಿಂಗಳಿನಿಂದ ಕೆಂಪುಕಲ್ಲು, ಮರಳು ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಕೆಂಪುಕಲ್ಲು , ಮರಳು ಸಾಗಾಟ ಮಾಡುವವರು, ಸಾವಿರಾರು ಮಂದಿ ಕಾರ್ಮಿಕರು, ಮೇಸಿಗಳು, ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೆ ಊಟಕ್ಕೆ ಪರದಾಡುವಂತಾಗಿದೆ. ಬಡ ಕೂಲಿ ಕಾರ್ಮಿಕರಿಗೆ ಇದರಿಂದ ತೊಂದರೆಯಾಗಿದೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಮರಳು ನೀತಿ ಜಾರಿಗೊಳಿಸಿಲ್ಲ. ಇದರಿಂದಾಗಿ ಅಕ್ರಮ ಮರಳುಗಾರಿಕೆ ಹೆಚ್ಚಾಗಿದೆ. ಅಧಿಕೃತ ಪರವಾನಿಗೆ ನೀಡದ ಕಾರಣ ಅನಧಿಕೃತ ಮರಳು ಹಾಗೂ ಕೆಂಪುಕಲ್ಲು ಪೂರೈಕೆಯಾಗುತ್ತಿದೆ. ಸರ್ಕಾರ ಅಧಿಕೃತ ಕೆಂಪುಕಲ್ಲು ಹಾಗೂ ಮರಳುಗಾರಿಕೆಗೆ ಅವಕಾಶ ನೀಡಲಿ ಎಂದು ಆಗ್ರಹಿಸಿದರು.

ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಸರ್ಕಾರದ ಭ್ರಷ್ಟಾಚಾರದ ಕಾರಣದಿಂದ ಮರಳುಗಾರಿಕೆ ಹಾಗೂ ಕೆಂಪುಕಲ್ಲು ಪೂರೈಕೆಗೆ ಅಧಿಕೃತ ಪರವಾನಿಗೆ ದೊರೆಯುತ್ತಿಲ್ಲ ಅಥವಾ ವಿಳಂಬಿಸಲಾಗುತ್ತಿದೆ. ಕೇರಳ ಮಾದರಿಯಲ್ಲಿ ಇಲ್ಲಿಯೂ ಕೆಂಪುಕಲ್ಲು ಅಧಿಕೃತ ಪೂರೈಕೆಗೆ ಅವಕಾಶ ನೀಡಲಿ ಎಂದರು.

ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ದ.ಕ. ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಜಂಟಿ ನಿರ್ದೇಶಕರು ಇರಬೇಕಾದ ಜಾಗದಲ್ಲಿ ಸರ್ಕಾರ ಉಪನಿರ್ದೇಶಕರನ್ನು ನೇಮಿಸಿತ್ತು. ಈಗ ಹಿರಿಯ ಭೂವಿಜ್ಞಾನಿಗೆ ಜವಾಬ್ದಾರಿ ನೀಡಲಾಗಿದೆ. ಮರಳು ಹಾಗೂ ಕೆಂಪುಕಲ್ಲು ವಿಚಾರದಲ್ಲಿ ಯಾರಿಗೆ ಹೇಳಿದರೂ ಸ್ಪಂದನೆ ಇಲ್ಲ ಎಂದು ಆಪಾದಿಸಿದರು.

ಶಾಸಕರಾದ ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಸಂಜಯ ಪ್ರಭು ಇದ್ದರು.

PREV