ತಂದೆ-ತಾಯಿ ಮಕ್ಕಳಿಗೆ ಕಲಿಸುವ ಸಂಸ್ಕಾರವೇ ಮುಖ್ಯ: ಅರವಿಂದ ಕುಲಕರ್ಣಿ

KannadaprabhaNewsNetwork |  
Published : Jul 11, 2025, 12:32 AM IST
ಹೊಸಪೇಟೆಯಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಗುರು ಪೌರ್ಣಿಮೆ ಅಂಗವಾಗಿ ಸಾಮೂಹಿಕ ಯೋಗಾಭ್ಯಾಸ ನಡೆಯಿತು. | Kannada Prabha

ಸಾರಾಂಶ

ಪತಂಜಲಿ ಯೋಗ ಸಮಿತಿ, ಜನನಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದಲ್ಲಿ ಹೊಸಪೇಟೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಗುರು ಪೌರ್ಣಿಮೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹೊಸಪೇಟೆ: ತಾಯಿಯೇ ಮೊದಲ ಗುರು. ತಂದೆ, ತಾಯಿ ಮನೆಯಲ್ಲಿ ಕಲಿಸುವ ಸಂಸ್ಕಾರವೇ ಮಕ್ಕಳಿಗೆ ಬಹಳ ಮುಖ್ಯವಾಗಿರುತ್ತದೆ. ಇದನ್ನು ಪ್ರತಿಯೊಬ್ಬರೂ ತಿಳಿದುಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಅರವಿಂದ ಕುಲಕರ್ಣಿ ಹೇಳಿದರು.

ಪತಂಜಲಿ ಯೋಗ ಸಮಿತಿ, ಜನನಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಆಯೋಜಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವೇದವ್ಯಾಸರು ಮಹಾನ್ ಗುರುಗಳಾಗಿದ್ದವರು. ಅಖಂಡವೂ, ಅನಂತವೂ ಆದ ವೇದರಾಶಿಯನ್ನು ಮನುಕುಲದ ಒಳಿತಿಗಾಗಿ ವಿಭಾಗ ಮಾಡಿದವರು ಅವರು. ವೇದದ ಸಾರ ಮತ್ತಷ್ಟು ಸುಲಭವಾಗಿ ಜನತೆಗೆ ಸಿಗಬೇಕೆಂಬ ಚಿಂತನೆಯಲ್ಲಿ ಅವರು 18 ಪುರಾಣಗಳನ್ನು ಹಾಗೂ ಮಹಾಭಾರತವನ್ನು ರಚಿಸಿದರು ಎಂದರು.

ಆಧುನಿಕ ಜಗತ್ತಿನಲ್ಲಿ ಸಾಕ್ರೆಟಿಸ್, ಪ್ಲೇಟೊ, ಅರಿಸ್ಟಾಟಲ್‌ ಅವರು ಮಹಾನ್‌ ಗುರು ಪರಂಪರೆಯನ್ನು ಹುಟ್ಟುಹಾಕಿದವರು, ಪತಂಜಲಿ ಯೋಗ ಸಮಿತಿ ದಿನ ನಿತ್ಯ ನಡೆಸುತ್ತಿರುವ ಯೋಗ ಶಿಬಿರಗಳು ಸಹ ಗುರು ಪರಂಪರೆಯ ಭಾಗವೇ ಆಗಿದ್ದು, ಇದು ಜನರ ಆರೋಗ್ಯ, ಮನಸ್ಸು ಶುದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಪತಂಜಲಿ ಯುವ ಭಾರತದ ರಾಜ್ಯ ಪ್ರಭಾರಿ ಕಿರಣಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಸಾಧಕರಾದ ಸತ್ಯಪ್ಪ, ಶಿವಮೂರ್ತಿ ಇದ್ದರು.

ಇದಕ್ಕೆ ಮೊದಲು ಪತಂಜಲಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಪ್ರಾರ್ಥಿಸಿದರು. ಉದ್ಯಾನದ ಸಂಚಾಲಕ ಅನಂತ ಜೋಷಿ ಕಾರ್ಯಕ್ರಮ ನಿರ್ವಹಿಸಿದರು. ಆನಂತರ ಅರವಿಂದ ಕುಲಕರ್ಣಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ನಗರದಲ್ಲಿ 28 ಕಡೆಗಳಲ್ಲಿ ಉಚಿತ ಯೋಗ ಶಿಬಿರಗಳು ನಡೆಯುತ್ತಿದ್ದು, ಎಲ್ಲ ಶಿಬಿರಗಳ ಸಂಚಾಲಕರು, ಹಲವು ಯೋಗ ಸಾಧಕರಿಂದ ಸಾಮೂಹಿಕ ಯೋಗಾಭ್ಯಾಸ ನಡೆಯಿತು. ಕಿರಣಕುಮಾರ್ ಅವರು ಯೋಗ ಮಾರ್ಗದರ್ಶನ ನೀಡಿದರು.

ಯೋಗ ಸಾಧಕರಾದ ಅಶೋಕ ಚಿತ್ರಗಾರ, ಕಟ್ಟಾ ನಂಜಪ್ಪ, ಶ್ರೀಧರ, ಪ್ರಮೀಳಮ್ಮ, ಶ್ರೀರಾಮ, ವೆಂಕಟೇಶ, ಪಾಂಡುರಂಗರಾವ್, ವಿಠೋಬ ಬಲ್ಲೂರ, ಚಂದ್ರಿಕಾ, ನಾಗರತ್ನಾ, ಶೈಲಜಾ ಕಳಕಪ್ಪ ಮತ್ತಿತರರಿದ್ದರು.

PREV