ಸಾರ್ವಜನಿಕರನ್ನು ಅಲೆಸಿದರೆ, ಅರ್ಜಿ ವಿಲೇವಾರಿ ಮಾಡದಿದ್ದರೆ ಕ್ರಮ: ಅಧಿಕಾರಿಗಳಿಗೆ ಡೀಸಿ ತಾಕೀತು

KannadaprabhaNewsNetwork |  
Published : Jul 11, 2025, 12:32 AM IST
10ಕೆಎಂಎನ್ ಡಿ11 | Kannada Prabha

ಸಾರಾಂಶ

ಸರ್ಕಾರ ಕೆಆರ್‌ಐಡಿಎಲ್ ಮೂಲಕ ತಾಲೂಕು ಕಚೇರಿ ನವೀಕರಣಕ್ಕೆ ಮತ್ತು ಪೇಟಿಂಗ್ ಕಾಮಗಾರಿಗೆ ಒಂದು ಕೋಟಿ ಅನುದಾನ ನೀಡಿದೆ. ಈ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳು ಮತ್ತು ಅದರ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಾರ್ವಜನಿಕರನ್ನು ವಿನಾಃ ಕಾರಣ ಕಚೇರಿಗೆ ಅಲೆಸುವುದು ಮತ್ತು ನಿಗದಿತ ಸಮಯಕ್ಕೆ ಅರ್ಜಿಗಳನ್ನು ವಿಲೇವಾರಿ ಮಾಡದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಗುರುವಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕಚೇರಿಯಲ್ಲಿದ್ದ ಸಾರ್ವಜನಿಕರಿಂದ ಕುಂದು ಕೊರತೆಗಳ ಅರ್ಜಿ ಸ್ವೀಕರಿಸಿದ ನಂತರ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲನೆ ಮತ್ತು ಕೆಲಸ ಕಾರ್ಯಗಳ ವಿಳಂಬದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು.

ಈ ವೇಳೆ ತಮ್ಮ ಕೆಲಸ ಕಾರ್ಯಗಳಲ್ಲಿ ಕಾರಣವಿಲ್ಲದೇ ವಿಳಂಬವಾಗುತ್ತಿದೆ. ಇದರಿಂದ ನಾವು ಪ್ರತಿನಿತ್ಯ ಕಚೇರಿಗೆ ಅಲೆಯುವ ಪರಿಸ್ಥಿತಿ ಉಂಟಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ಹೇಳಿದರು.

ಸಾರ್ವಜನಿಕರಿಂದ ದೂರು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ನಿಯಮಾನುಸಾರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ದಾಖಲೆಗಳು ಸರಿಯಾಗಿದ್ದರೆ ಯಾವುದೇ ಸಬೂಬು ಹೇಳದೆ ಕೆಲಸ ಮಾಡಿಕೊಡಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಳಿಕ, ಭೂ ದಾಖಲೆಗಳ ಡಿಜಿಟಲೀಕರಣ ನಡೆಯುತ್ತಿರುವ ಕೊಠಡಿ, ಶಿರಸ್ತೇದಾರ್ ಕೊಠಡಿ, ಕೆಲವು ಪ್ರಕರಣಗಳಿಗೆ ಭೂ ಮಾಪನ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯುವುದು ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ವಿಭಾಗಗಳ ಕೊಠಡಿಗಳಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳ ಕಾರ್ಯ ವೈಖರಿ ಹಾಗೂ ಅಧಿಕಾರಿಗಳ ಜನ ಸ್ಪಂದನೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಸರ್ಕಾರ ಕೆಆರ್‌ಐಡಿಎಲ್ ಮೂಲಕ ತಾಲೂಕು ಕಚೇರಿ ನವೀಕರಣಕ್ಕೆ ಮತ್ತು ಪೇಟಿಂಗ್ ಕಾಮಗಾರಿಗೆ ಒಂದು ಕೋಟಿ ಅನುದಾನ ನೀಡಿದೆ. ಈ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳು ಮತ್ತು ಅದರ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು.

ತಹಸೀಲ್ದಾರ್ ಎಸ್. ಸಂತೋಷ್, ಕಂದಾಯ ಇಲಾಖೆ ಶಿರಸ್ತೇದಾರ್ ಮೋಹನ್, ಭೂ ಮಾಪನ ಇಲಾಖೆ ಭಾಸ್ಕರ್, ಸಾರ್ವಜನಿಕರಾದ ಪ್ರಸಾದ್, ಸಿ.ಆರ್.ರಮೇಶ್, ಕನಗನಮರಡಿ ಜಯರಾಮು ಇತರರು ಇದ್ದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ