ಕನ್ನಡಪ್ರಭ ವಾರ್ತೆ ನಾಗಮಂಗಲ
ಪುರಸಭೆ ವ್ಯಾಪ್ತಿಯ ಸುಭಾಷ್ ನಗರದ 223 ಸ್ಲಂ ನಿವಾಸಿಗಳಿಗೆ ಮತ್ತು ಪೌರಕಾರ್ಮಿಕರ ಕಾಲೋನಿಯ 44 ಜನರಿಗೆ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದರು.ಪಟ್ಟಣದ ಸುಭಾಷ್ ನಗರ ಮತ್ತು ಪೌರಕಾರ್ಮಿಕರ ಕಾಲೋನಿಗೆ ಗುರುವಾರ ಮಧ್ಯಾಹ್ನ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಬಳಿಕ ನಿವಾಸಿಗಳಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಸ್ಲಂನಲ್ಲಿ ಈಗಾಗಲೇ ಕೊಳಚೆ ನಿರ್ಮೂಲನಾ ಮಂಡಳಿಯಿಂದ 223 ಮನೆಗಳನ್ನು ನಿರ್ಮಿಸಿದ್ದು, ಇದುವರೆಗೂ ಹಕ್ಕುಪತ್ರ ವಿತರಸಿಲ್ಲ ಎಂದರು.
ಹಕ್ಕುಪತ್ರ ವಿತರಣೆ ಸಂಬಂಧ ಸರ್ವೇ ಕಾರ್ಯ ನಡೆಸಿ ವರದಿ ಪಡೆದು ಸರ್ಕಾರಕ್ಕೆ ಕಳುಹಿಸಲಾಗಿದೆ. ಶೀಘ್ರ 223 ಜನರಿಗೆ ಹಕ್ಕು ಪತ್ರ ವಿತರಿಸಿ 2010 ರಿಂದ ಇದ್ದ ತೊಡಕನ್ನು ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಸ್ತಾಂತರವಾಗದ ಕಾರಣ ಈ ಪ್ರದೇಶದ ಅಭಿವೃದ್ಧಿ ಕಾನೂನಿನನ್ವಯ ಪುರಸಭಾ ವ್ಯಾಪ್ತಿಗೆ ಅನ್ವಯಿಸಲ್ಲ. ಆದರೂ ಕೂಡ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವೊಂದು ಮೂಲ ಸೌಲಭ್ಯಗಳನ್ನು ಪುರಸಭೆ ನಿರ್ವಹಿಸುತ್ತಿದೆ ಎಂದರು.
ಮನೆ ಮಾಲೀಕತ್ವಕ್ಕಾಗಿ ಇಲ್ಲಿನ ಜನರು ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗೆ ತಾರ್ಕಿಕ ಅಂತ್ಯವಾಡಲು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಸಮಿತಿಯನ್ನು ರಚಿಸಲಾಗಿತ್ತು. ಈಗಾಗಲೇ ಸಮಿತಿ ವರದಿ ಜಿಲ್ಲಾಡಳಿತದ ಕೈ ಸೇರಿದೆ.ವರದಿ ಅನುಷ್ಠಾನಕ್ಕಾಗಿ ಸಾರ್ವಜನಿಕ ಆಕ್ಷೇಪಣೆಗೆ ಆ.5ರವರೆಗೆ ಕಾಲಾವಕಾಶ ನೀಡಲಾಗಿದೆ. ನಂತರ ಜಿಲ್ಲಾ ಮಟ್ಟದ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದ ಮೂಲಕ ಇಲ್ಲಿನ ಕಟ್ಟಡ ಮಾಲೀಕತ್ವದ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದರು.
ಕಳೆದ 1995ರಲ್ಲಿ ರಾಜ್ಯ ಸರ್ಕಾರ ಈ ಪ್ರದೇಶವನ್ನು ಕೊಳಗೇರಿ ಪ್ರದೇಶವೆಂದು ಅಧಿಸೂಚನೆ ಹೊರಡಿಸುವಾಗ ಇಲ್ಲಿನ ಮೂಲ ವಾಸಿಗಳಿಗೆ ನೀಡಿರುವ ಪರಿಚಯ ಪತ್ರವೇ ಕಟ್ಟಡ ಮಾಲೀಕತ್ವಕ್ಕೆ ಆಧಾರ ದಾಖಲಾತಿ, ನಂತರದಲ್ಲಿ ಸ್ಥಳೀಯ ಪುರಸಭೆಯಿಂದ ಹಕ್ಕುಪತ್ರ ವಿತರಣೆ ವೇಳೆ ಕೆಲವೊಂದು ಸಮಸ್ಯೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೆಲವರು ಅಕ್ರಮ ಹಕ್ಕುಪತ್ರ ಪಡೆದಿರುವ ಬಗ್ಗೆಯೂ ಮಾಹಿತಿ ಇದೆ. ಆದರೆ, ನಿಜವಾದ ಫಲಾನುಭವಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪರಿಹಾರ ರೂಪಿಸಲಾಗುವುದೆಂದು ಭರವಸೆ ನೀಡಿದರು.ಸುಖಾಸುಮ್ಮನೆ ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ. ಅಕ್ರಮ ಒತ್ತುವರಿ ತೆರವಿನ ಜೊತೆಗೆ ನಿಯಮ ಬಾಹಿರವಾಗಿ ನಿವೇಶನಗಳನ್ನು ಪಡೆಯುವ ಹಾಗೂ ಕಟ್ಟಡ ಮಾಲಿಕತ್ವಕ್ಕಾಗಿ ಯತ್ನಿಸುವವರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸುಭಾಷ್ ನಗರದಲ್ಲಿ ರಾಜಾರೋಷವಾಗಿ ಗಾಂಜಾ ಮತ್ತು ಮದ್ಯ ಮಾರಾಟ ಮಾಡುತ್ತಿರುವುದು ತೊಂದರೆಯಾಗಿದೆ. ಇದಕ್ಕೆ ಕಡಿವಾಣ ಹಾಕಿ ಜನರು ನೆಮ್ಮದಿ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಕೈಮುಗಿದು ಮನವಿ ಮಾಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ನಗರದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದರೂ ಕೂಡ ಗಾಂಜಾ ಮತ್ತು ಮದ್ಯ ಮಾರಾಟ ನಡೆಯುತ್ತಿದೆ. ಇದರ ವಿರುದ್ಧ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಪಟ್ಟಣದ ಪಡುವಲಪಟ್ಟಣ ರಸ್ತೆಯ ಪೌರಕಾರ್ಮಿಕರ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಅಲ್ಲಿನ ನಿವಾಸಿಗಳ ಸಮಸ್ಯೆ ಆಲಿಸಿದರು. ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಿರ್ಮಿಸಿರುವ ವಸತಿ ಗೃಹಗಳಲ್ಲಿ ಕಳೆದ ಎರಡು ದಶಕಗಳ ಹಿಂದಿನಿಂದಲೂ ವಾಸಿಸುತ್ತಿದ್ದೇವೆ. ಆದರೆ, ಈವರೆಗೂ ನಮಗೆ ಹಕ್ಕುಪತ್ರ ನೀಡಿಲ್ಲ. ಮೂಲಸೌಕರ್ಯದ ಕೊರತೆಯಿದೆ ಎಂದು ಡೀಸಿ ಬಳಿ ಅಳಲು ತೋಡಿಕೊಂಡರು.ಕಳೆದ ಹಲವು ವರ್ಷದಿಂದ ವಾಸಿಸುತ್ತಿರುವ 44 ಮಂದಿ ಪೌರಕಾರ್ಮಿಕರಿಗೆ ಹಕ್ಕುಪತ್ರ ನೀಡುವ ಸಂಬಂಧ ಮುಂದಿನ ಮಂಡಳಿಯ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ಟಿಎಚ್‌ಒ ಡಾ.ನಾರಾಯಣ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿ ಈಶ್ವರ್, ರಾಜಸ್ವ ನಿರೀಕ್ಷಕ ಗೋವಿಂದರಾಜು, ಪುರಸಭಾ ನಾಮನಿರ್ದೇಶಿತ ಸದಸ್ಯರಾದ ನರಸಿಂಹ, ಸಂಪತ್‌ಕುಮಾರ್ ಸೇರಿದಂತೆ ಸ್ಥಳೀಯ ನಿವಾಸಿಗಳು ಇದ್ದರು.