ಪತ್ರಿಕೆ ಓದದೆ ಇದ್ದರೇ ಸತ್ಯ ಸುದ್ದಿ ತಿಳಿಯಲು ಸಾಧ್ಯವಿಲ್ಲ

KannadaprabhaNewsNetwork |  
Published : Jul 11, 2025, 12:32 AM IST
ಐಗಳಿ  | Kannada Prabha

ಸಾರಾಂಶ

ಬೆರಳ ತುದಿಯಲ್ಲಿಯೇ ತಕ್ಷಣದ ಸುದ್ದಿ ತಿಳಿಯುವ ಸ್ಪರ್ಧೆಯ ದಿನಗಳಲ್ಲಿ ನಿತ್ಯ ಪತ್ರಿಕೆ ಓದದೇ ಇದ್ದರೇ ಸತ್ಯ ಸುದ್ದಿ ತಿಳಿಯಲು ಸಾಧ್ಯವಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ಬೆರಳ ತುದಿಯಲ್ಲಿಯೇ ತಕ್ಷಣದ ಸುದ್ದಿ ತಿಳಿಯುವ ಸ್ಪರ್ಧೆಯ ದಿನಗಳಲ್ಲಿ ನಿತ್ಯ ಪತ್ರಿಕೆ ಓದದೇ ಇದ್ದರೇ ಸತ್ಯ ಸುದ್ದಿ ತಿಳಿಯಲು ಸಾಧ್ಯವಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸಮೀಪದ ಅಡಹಳ್ಳಿ ಗ್ರಾಮದಲ್ಲಿ ರಾಜ್ಯ ಕಾರ್ಯನಿರತ ಗ್ರಾಮೀಣ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸತ್ಯ ಸುದ್ದಿ ಪ್ರಕಟವಾಗುವುದು ಬಹುಪಾಲು ಮುದ್ರಣ ಮಾಧ್ಯಮದಲ್ಲಿಯೇ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡುವ ಪತ್ರಿಕೆಗಳ ಅಗತ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದರು.ನಕಲಿ ಸುದ್ದಿಗಳ ಹಾವಳಿಯಿಂದ ಸಮಾಜವನ್ನು ರಕ್ಷಿಸಲು ಮುದ್ರಣ ಮಾಧ್ಯಮ ಬಲಗೊಳ್ಳಬೇಕು. ಸಮಾಜ ಬದಲಾಗುವ ಸುದ್ದಿ ಬೇಕೇ ಹೊರತು ಸಾಮರಸ್ಯ ಕದಡುವ ಸುದ್ದಿ ಬೇಡ. ಪತ್ರಕರ್ತರಿಗೆ ಸಾಹಿತ್ಯ ಮತ್ತು ಸಾಮಾಜಿಕ ವ್ಯವಸ್ಥೆಯ ಕುರಿತು ಆಳವಾದ ಅರಿವು ಇರುವುದು ಮುಖ್ಯ. ಇದು ಅವರಿಗೆ ಸಮಾಜಕ್ಕೆ ಶಕ್ತಿ ತುಂಬುವ ಮೌಲ್ಯಯುತ ಸುದ್ದಿಗಳನ್ನು ಬರೆಯಲು ಸಹಾಯಕವಾಗುತ್ತದೆ. ಸಮಾಜಕ್ಕೆ ಶಕ್ತಿ ತುಂಬುವಂತಹ, ಸಕಾರಾತ್ಮಕ ಬದಲಾವಣೆಗೆ ಪ್ರೇರಣೆ ನೀಡುವಂತಹ ಸುದ್ದಿಗಳನ್ನು ಬರೆಯುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಪತ್ರಕರ್ತರು ತಮ್ಮ ಪತ್ರಿಕಾ ಧರ್ಮವನ್ನು ಮರೆಯದೆ ಸಮಾಜಕ್ಕೆ ಸತ್ಯವನ್ನು ತಲುಪಿಸುವ ಕಾರ್ಯವನ್ನು ನಿಷ್ಠೆಯಿಂದ ಮುಂದುವರಿಸಬೇಕು ಎಂದು ಸಲಹೆ ನೀಡಿದರು.ಮಾಜಿ ಶಾಸಕ ಶಹಜಾನ ಡೊಂಗರಗಾಂವ ಮಾತನಾಡಿ, ಸಮಾಜದ ಮೂಲಭೂತ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಮುದ್ರಣ ಮಾಧ್ಯಮದ ಹಾಗೂ ಗ್ರಾಮೀಣ ಪತ್ರಕರ್ತರ ಪಾತ್ರ ಮಹತ್ವದ್ದಾಗಿದ್ದು, ಎರಡನ್ನು ಉಳಿಸಿಬೆಳೆಸುವ ಇಂದಿನ ಮಹತ್ವದ ಅಗತ್ಯತೆಗಳಲ್ಲಿ ಇವುಗಳು ಕೂಡಿವೆ. ಪತ್ರಕರ್ತರ ಶ್ರಮಕ್ಕೆ ಸೂಕ್ತ ಬೆಲೆ ಸಿಗಬೇಕು. ಮುದ್ರಣ ಮಾಧ್ಯಮದ ಅಸ್ತಿತ್ವ ಮತ್ತು ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಪತ್ರಕರ್ತರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಸರ್ಕಾರ ಮತ್ತು ಸಮಾಜ ಹೆಚ್ಚಿನ ಗಮನ ಹರಿಸಬೇಕಿದೆ. ಎಲ್ಲರ ಮನ ಮನೆಗಳಲ್ಲಿ ಪತ್ರಿಕೆ ಇರಲಿ ಅದನ್ನು ಉಳಿಸಿ, ಬೆಳೆಸೋಣ ಎಂದರು.ತೆಲಸಂಗದ ವಿರೇಶ್ವರ ದೇವರು ಮಾತನಾಡಿ, ಮನೆ ಮನೆಗಳಲ್ಲಿ ನಿತ್ಯ ಪತ್ರಿಕೆ ಓದುವ ಸಂಸ್ಕೃತಿ ಬೆಳೆಯಬೇಕು. ಸತ್ಯ ವರದಿಗಾರಿಕೆ, ಸಾಮಾಜಿಕ ಸಾಮರಸ್ಯ ಮತ್ತು ಪತ್ರಕರ್ತರ ನೈತಿಕ ಜವಾಬ್ದಾರಿ ಇಂದು ಬಹಳಷ್ಟಿದೆ. ಪತ್ರಿಕೆ ಮತ್ತು ಪತ್ರಕರ್ತರು ಇಲ್ಲದ ಈ ಸಮಾಜವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದರು.ನ್ಯಾಯವಾದಿ ಅಮೋಘ ಖೊಬ್ರಿ, ಶಿವು ಗುಡ್ಡಾಪೂರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಬಸವಂತ ಗುಡ್ಡಾಪೂರ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಅಡಿವೆಪ್ಪ ಕೆಂಚಣ್ಣವರ, ಈರಗೌಡ ಪಾಟೀಲ, ಗಟಿವಾಳಪ್ಪ ಗುಡ್ಡಾಪೂರ, ನಿಂಗಯ್ಯ ಮಠಪತಿ, ಬಸವರಾಜ ದೂಳಶೆಟ್ಟಿ, ಸಿದ್ರಾಯ ಕೋಹಳ್ಳಿ, ಕುಮಾರ ಪಾಟೀಲ ಎಲ್ಲ ಗ್ರಾಮೀಣ ಪತ್ರಕರ್ತರು ಸೇರಿದಂತೆ ಅನೇಕರು ಇದ್ದರು. ಪ್ರಾಸ್ತಾವಿಕವಾಗಿ ಜಗದೀಶ ಖೋಬ್ರಿ ಪತ್ರಿಕೆ ಹಾಗೂ ಪತ್ರಕರ್ತರ ಸ್ಥಿತಿಗತಿಯ ಬಗ್ಗೆ ಮಾತನಾಡಿದರು. ಪತ್ರಕರ್ತ ಪ್ರಕಾಶ ಪೂಜಾರಿ ಸ್ವಾಗತಿಸಿದರು. ಸದಾನಂದ ಮಾಡಿಗ್ಯಾಳ ವಂದಿಸಿದರು.

ಅಂದು, ಇಂದು ಎಂದೆಂದೂ ದಿನಪತ್ರಿಕೆಗಳು ತಮ್ಮ ಮೌಲ್ಯ ಕಳೆದುಕೊಂಡಿಲ್ಲ. ನಮ್ಮ ಮಕ್ಕಳಿಗೆ ಓದುವ ರುಚಿ ಮೂಡಿಸೋಣ. ಏಕೆಂದರೆ ನಾವು ಒಳ್ಳೆಯದನ್ನು ಮಾಡಿದರೇ ಸಮಾಜ ನಮಗೆ ಒಳ್ಳೆಯದನ್ನೇ ಮಾಡುತ್ತದೆ. ಇಂದಿನ ವೇಗದ ಯುಗದಲ್ಲಿ, ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚುತ್ತಿರುವಾಗಲೂ ಬೆಳಗ್ಗೆ ಚಹಾದ ವೇಳೆಗೆ ದಿನ ಪತ್ರಿಕೆ ಓದದಿದ್ದರೆ ಏನೋ ಕಳೆದುಕೊಂಡ ಅನುಭವ ಆಗಬೇಕು.

-ಗುರುರಾಜ ಹೊಸಕೋಟೆ, ಜಾನಪದ ಸಾಹಿತಿ, ಚಿತ್ರ ನಟ.

ಪತ್ರಿಕೆಗಳು ಸಮಾಜದ ಕನ್ನಡಿ. ನಿತ್ಯ ಓದುವ ಅಭ್ಯಾಸವು ನಿಮ್ಮಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಿ, ಮೌಲ್ಯಯುತ ಜೀವನಕ್ಕೆ ನಾಂದಿ ಹಾಡುತ್ತದೆ. ನಿಮ್ಮ ಪ್ರತಿಭೆಗೆ ಸೂಕ್ತ ವೇದಿಕೆ ಕಂಡುಕೊಳ್ಳಲು ಪತ್ರಿಕೆಗಳ ಸದುಪಯೋಗ ಪಡೆದುಕೊಳ್ಳಿ.

-ನಿಂಗರಾಜ ಸಿಂಗಾಡಿ,
ಕಲಾವಿದ ಜಮಖಂಡಿ.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ