ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣರಲ್ಲಿ ಆರ್ಥಿಕ ಚೈತನ್ಯ

KannadaprabhaNewsNetwork |  
Published : Oct 23, 2024, 12:42 AM IST
ಫೋಟೋ 22 ಟಿಟಿಎಚ್ 01: ಶಾಸಕ ಆರಗ ಜ್ಞಾನೇಂದ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಉಧ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. | Kannada Prabha

ಸಾರಾಂಶ

ಮಹಾತ್ಮ ಗಾಂಧಿಯವರ ಆಶಯಗಳನ್ನು ಅನುಷ್ಠಾನಗೊಳಿಸುವ ಬದ್ಧತೆಯೊಂದಿಗೆ ಸಮಾಜದ ಕಟ್ಟಕಡೆಯ ಕುಟುಂಬಗಳಿಗೆ ಆರ್ಥಿಕ ಚೈತನ್ಯ ತುಂಬುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಕಾರ್ಯಕ್ರಮಗಳು ಪವಾಡ ಸದೃಶದಂತಿ‍‍ವೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಮಹಾತ್ಮ ಗಾಂಧಿಯವರ ಆಶಯಗಳನ್ನು ಅನುಷ್ಠಾನಗೊಳಿಸುವ ಬದ್ಧತೆಯೊಂದಿಗೆ ಸಮಾಜದ ಕಟ್ಟಕಡೆಯ ಕುಟುಂಬಗಳಿಗೆ ಆರ್ಥಿಕ ಚೈತನ್ಯ ತುಂಬುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಕಾರ್ಯಕ್ರಮಗಳು ಪವಾಡ ಸದೃಶದಂತಿ‍‍ವೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಗಾಂಧಿ ಜಯಂತಿ ಅಂಗವಾಗಿ ಮಂಗಳವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಸಮಾವೇಶ ಹಾಗೂ ನವಜೀವನ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಮಾಡಲಾಗದ ಕೆಲಸ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆದಿದೆ. ಈ ಸಂಘಟನೆಯ ಕಾರ್ಯ ನನ್ನಂತಹ ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಪ್ರೇರಣೆ ನೀಡುವಂತಿದೆ ಎಂದರು.

ತಾಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದ ನಂತರದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಪ್ರಜ್ಞಾವಂತಿಕೆ ನಿರ್ಮಾಣವಾಗಿದೆಯಲ್ಲದೇ ಸಮಾಜದ ಕಟ್ಟಕಡೆಯ ವ್ಯಕ್ತಿಗಳಲ್ಲಿ ಆರ್ಥಿಕ ಚೈತನ್ಯ ತುಂಬುವ ಮೂಲಕ ಸಾಮಾಜಿಕ ವ್ಯವಸ್ಥೆಯೇ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಯಥಾವತ್ತಾಗಿ ಅನುಷ್ಠಾನಗೊಂಡಿದೆ ಎಂದು ಹೇಳಿದರು.

ಮಹಿಳೆಯರಲ್ಲಿ ಆರ್ಥಿಕ ಚೈತನ್ಯವನ್ನು ತುಂಬಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಲ್ಲದೇ ಮದ್ಯಪಾನ ವರ್ಜನ ಯೋಜನೆ ಮೂಲಕ ಸಹಸ್ರಾರು ಮಂದಿ ವ್ಯಸನಿಗಳ ಬದುಕಿನಲ್ಲಿ ಹೊಸ ಚೈತನ್ಯ ತುಂಬುವ ಕಾರ್ಯ ಗಾಂಧಿಯವರ ದಿವ್ಯಾತ್ಮಕ್ಕೆ ಶಾಂತಿ ನೀಡುವಂತಿದೆ. ಆಕಸ್ಮಿಕ ಆರೋಗ್ಯ ವಿಮೆ ಯೋಜನೆಯಡಿ 4710 ಕುಟುಂಬಗಳ ಜತೆ 11000 ಕ್ಕೂ ಮಿಕ್ಕಿದ ಜನರನ್ನು ವಿಮೆಗೆ ಒಳಪಡಿಸಿರುವ ಕಾರ್ಯ ಅನುಕರಣೀಯ. ಭಜನಾ ಮಂಡಳಿಗಳಿಗೆ ಉತ್ತೇಜನ ನೀಡಿ ಆಧ್ಯಾತ್ಮಿಕ ಚಿಂತನೆಯನ್ನು ಮೂಡಿಸುತ್ತಿರುವುದು ಪ್ರಶಂಸನೀಯ ಎಂದರು.ಮದ್ಯವರ್ಜನ ಶಿಬಿರದ ಫಲಾನುಭವಿಗಳಾದ ಯೋಗೀಶ್ ಹಾಗೂ ಧನೇಂದ್ರ ಮಾತನಾಡಿ, ಸಮಾಜ ಮಾತ್ರವಲ್ಲದೇ ಮಡದಿ ಮಕ್ಕಳೂ ಸೇರಿದಂತೆ ಕುಟುಂಬ ಸದಸ್ಯರಿಂದಲೂ ಅವಗಣನೆಗೆ ಒಳಗಾಗಿದ್ದ ನಮಗೆ ಮದ್ಯವರ್ಜನ ಶಿಬಿರ ಪುನರ್ಜೀವನ ನೀಡಿದೆ ಎಂದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಕುಶಾವತಿಯಿಂದ ಜನಜಾಗೃತಿ ಜಾಥಾ ನಡೆಯಿತು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಡಾ. ಜೀವಂಧರ ಜೈನ್, ಗ್ರಾಮಾಭಿವೃದ್ಧಿ ಯೋಜನೆಯ ಮುರುಳೀಧರ ಶೆಟ್ಟಿ ಹಾಗೂ ಮಾಲತಿ ದಿನೇಶ್, ಅಶೋಕಮೂರ್ತಿ, ಮುದ್ದಣ್ಣ, ವಿನುತಾ ಮುರುಳೀಧರ್, ಶಶಿಧರ ಹಂದೆ ಮುಂತಾದವರು ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ