ಹಾಸನ ಸೇರಿದಂತೆ ಸುತ್ತಮುತ್ತ ಭಾರೀ ಮಳೆ

KannadaprabhaNewsNetwork | Updated : Oct 23 2024, 12:42 AM IST

ಸಾರಾಂಶ

ಹಾಸನದಲ್ಲಿ ಭಾರಿ ಮಳೆಯಾಗುತ್ತಿದೆ. ಮಹಾಲಕ್ಷ್ಮಿ ಲೇಔಟ್, ಹಾಸನಾಂಬ ಬಡಾವಣೆ, ಉದ್ದೂರು ಹೀಗೆ ಹಲವು ಬಡಾವಣೆಗಳಲ್ಲಿ ನೀರು ತುಂಬಿ ಜಲಾವೃತಗೊಂಡಿದ್ದು, ಇದರಿಂದ ಬಡಾವಣೆ ನಿವಾಸಿಗಳು ಹೊರಬರಲಾರದೆ ಪರದಾಡುವಂತಾಗಿದೆ. ಅಲ್ಲದೆ ರಸ್ತೆಗಳು ಕೂಡ ಸಂಪೂರ್ಣವಾಗಿ ಜಲಾವೃತವಾಗಿ ವಿವಿಧಡೆ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿಸಿದರು. ರಾಜಕಾಲುವೆ ಒತ್ತುವರಿ ಹಾಗೂ ಅವೈಜ್ಞಾನಿಕ ಬಡಾವಣೆಗಳ ನಿರ್ಮಾಣವೇ ಇದಕ್ಕೆಲ್ಲ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಡಾವಣೆಗಳಿಗೆ ನೀರು ನುಗ್ಗಿ ಜಲದಿಗ್ಬಂಧನಗೊಂಡ ವಿವಿಧ ಬಡಾವಣೆಗಳಿಗೆ ಮಂಗಳವಾರ ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಹಾಲಕ್ಷ್ಮಿ ಲೇಔಟ್, ಹಾಸನಾಂಬ ಬಡಾವಣೆ, ಉದ್ದೂರು ಹೀಗೆ ಹಲವು ಬಡಾವಣೆಗಳಲ್ಲಿ ನೀರು ತುಂಬಿ ಜಲಾವೃತಗೊಂಡಿದ್ದು, ಇದರಿಂದ ಬಡಾವಣೆ ನಿವಾಸಿಗಳು ಹೊರಬರಲಾರದೆ ಪರದಾಡುವಂತಾಗಿದೆ. ಅಲ್ಲದೆ ರಸ್ತೆಗಳು ಕೂಡ ಸಂಪೂರ್ಣವಾಗಿ ಜಲಾವೃತವಾಗಿ ವಿವಿಧಡೆ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿಸಿದರು.

ಕೆಲವೆಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೆರೆಗಳಿಂದ ಕೆರೆಗಳು ಕೊಡಿ ಬಿದ್ದು ರಸ್ತೆಯ ಮೇಲೆ ನೀರು ಹರಿಯುತ್ತಿರುವ ಕಾರಣ ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆ ಯಾವುದೇ ಅನಾಹುತ ಸಂಭವಿಸದಂತೆ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಪೊಲೀಸರು ಕಾದು ಕುಳಿತಿದ್ದಾರೆ. ರಸ್ತೆಗಳಿಗೆ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಿ ವಾಹನಗಳನ್ನು ಕಳುಹಿಸಲಾಯಿತು ಎಂದರು.

ರಾಜಕಾಲುವೆ ಒತ್ತುವರಿ ಹಾಗೂ ಅವೈಜ್ಞಾನಿಕ ಬಡಾವಣೆಗಳ ನಿರ್ಮಾಣವೇ ಇದಕ್ಕೆಲ್ಲ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದ್ದು, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ಶಾಸಕ ಸ್ವರೂಪ ಪ್ರಕಾಶ್, ಈ ಬಗ್ಗೆ ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಅತಿ ಶೀಘ್ರವಾಗಿ ರಾಜಕಾಲುವೆ ಒತ್ತುವರಿ ತೆರವು ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದರು.

ಖಾಸಗಿ ಲೇಔಟ್‌ಗಳು ತರಾತುರಿಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ ಈ ರೀತಿಯ ಅತಿವೃಷ್ಟಿ ಸಂಭವಿಸಲು ಕಾರಣ. ಮುಂದಿನ ದಿನಗಳಲ್ಲಿ ಹೂಡ ಅಧಿಕಾರಿಗಳ ಗಮನಕ್ಕೆ ತಂದು ಇಂತಹ ಅವೈಜ್ಞಾನಿಕ ಕಾಮಗಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ನಗರಸಭೆ ಆಯುಕ್ತ ನರಸಿಂಹಮೂರ್ತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.

Share this article