ಕನ್ನಡಪ್ರಭ ವಾರ್ತೆ ಹಾಸನ
ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಹಾಸನ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಲಾದ ಗ್ಯಾರಂಟಿ ಯೋಜನೆಗಳ ಮಾಹಿತಿ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರದ ಗೃಹ ಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಸಮಾಜದ ವಿವಿಧ ವರ್ಗಗಳಿಗೆ ನೇರವಾಗಿ ಪ್ರಯೋಜನಕಾರಿಯಾಗಿವೆ. ವಿಶೇಷವಾಗಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಗೃಹಲಕ್ಷ್ಮೀ ಯೋಜನೆ ಮಹತ್ವದ ಪಾತ್ರವಹಿಸುತ್ತಿದೆ. ಈ ಯೋಜನೆಯಿಂದ ಲಭಿಸುವ ಹಣವನ್ನು ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ವಹಣೆ ಹಾಗೂ ಸಣ್ಣ ಉದ್ದಿಮೆಗಳಿಗಾಗಿ ಬಳಸಿಕೊಂಡು ಮಹಿಳೆಯರು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದರು.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ದೊರಕುತ್ತಿರುವುದರಿಂದ ದೇವಾಲಯಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಲು ಅನುಕೂಲವಾಗಿದ್ದು, ಇದು ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ತಿಳಿಸಿದರು. ಸಮಾಜದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ಕಡಿಮೆ ಮಾಡಿ, ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದಲೇ ಸರ್ಕಾರ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು. ಅಂಕಿಅಂಶಗಳ ಕುರಿತು ಮಾಹಿತಿ ನೀಡಿದ ಅವರು, ಹಾಸನ ತಾಲೂಕಿನಲ್ಲಿ ಒಟ್ಟು ೮೮,೬೨೦ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದು, ಪ್ರತಿಮಾಸ ಸುಮಾರು ೧೭ ಕೋಟಿ ೭೨ ಲಕ್ಷ ವಿತರಿಸಲಾಗುತ್ತಿದೆ. ಗ್ಯಾರಂಟಿ ಯೋಜನೆ ಆರಂಭವಾದ ೨೬ ತಿಂಗಳಲ್ಲಿ ಒಟ್ಟು ೪೬೦ ಕೋಟಿ ೮೨ ಲಕ್ಷ ಹಣ ತಾಲೂಕಿಗೆ ಬಿಡುಗಡೆಯಾಗಿದೆ ಎಂದು ತಿಳಿಸಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ. ಗಿರೀಶ್ ಮಾತನಾಡಿ, ಸರ್ಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮೀ, ಯುವನಿಧಿ ಮತ್ತು ಶಕ್ತಿ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಿತ ಕಚೇರಿಗಳಿಗೆ ಭೇಟಿ ನೀಡಿ ಪರಿಹಾರ ಪಡೆಯುವಂತೆ ಸೂಚಿಸಿದರು.ಸಭೆಯಲ್ಲಿ ಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷರಾದ ಎಚ್.ಎಂ. ರೇವಣ್ಣ ರವರು ಆನ್ಲೈನ್‌ನಲ್ಲೆ ಉದ್ದೇಶಿಸಿ ಮಾತನಾಡಿ, ಕೆಲ ಮಾಹಿತಿ ನೀಡಿದರು. ಗ್ಯಾರಂಟಿ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮಹಿಳಾ ಫಲಾನುಭವಿಗಳು ಉಪಸ್ಥಿತರಿದ್ದರು. ಕೆಲ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡು ಯೋಜನೆಗಳಿಂದ ಆಗಿರುವ ಪ್ರಯೋಜನಗಳನ್ನು ವಿವರಿಸಿದರು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿ ವಿಜೇತರನ್ನು ಬಹುಮಾನ ನೀಡಿ ಸನ್ಮಾನಿಸಲಾಯಿತು. ಬಳಿಕ ಬನವಾಸೆ ರಂಗಸ್ವಾಮಿ ಉಚಿತ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರೊಂದಿಗೆ ಸಂವಾದ ನಡೆಸಿ ಯೋಜನೆಯ ಪ್ರಯೋಜನಗಳ ಕುರಿತು ಮಾಹಿತಿ ಪಡೆದುಕೊಂಡರು.ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರಾದ ಎನ್.ಎಸ್. ಆದರ್ಶ, ಕೆ.ಎಸ್. ಲಿಖಿತ್, ಸಿ.ಕೆ. ಲವ, ಕೆ.ಆರ್. ಮೋಹನಾಕ್ಷಿ, ಜಿ.ಎಂ. ಕುಮಾರ್, ಬಿ.ಈ. ಸಂದೀಪ್, ಕೇಶವ ಮೂರ್ತಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಪ್ರಿತ್ ಗೌಡ, ಇಒ ಗಿರೀಶ್, ಸಿಡಿಪಿಒ ಜ್ಯೋತಿ ಲಕ್ಷ್ಮಿ, ಎಇಇ ರಾಘವೇಂದ್ರ, ಪ್ರಭುಶರ್ಮ, ಸಾರಿಗೆ ಇಲಾಕೆಯ ಶಾಜೀಯ ಭಾನು, ಸಿದ್ದೇಶ್ ಇತರರು ಉಪಸ್ಥಿತರಿದ್ದರು.