ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟ ಜಿಲ್ಲಾ ಘಟಕ ಮತ್ತು ಮುಕ್ತ ವೇದಿಕೆ ಆಶ್ರಯದಲ್ಲಿ ಪತ್ರಕರ್ತರ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನಮೋಹನ ಸಿಂಗ್ ಯುಜಿಸಿ ವೇತನಕ್ಕೆ ಚಾಲನೆ ಕೊಟ್ಟಿದ್ದರು. ಉನ್ನತ ಶಿಕ್ಷಣದಲ್ಲಿ ಅಧ್ಯಾಪಕರಿಗೆ ಶೈಕ್ಷಣಿಕೆ ಕೆನೆ ಪದರ ತರುವ ಆಶಯ ಅವರದಾಗಿತ್ತು ಎಂದರು.
ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಿಕೊಂಡು ಉದಾರೀಕರಣ ನೀತಿಗೆ ಹೆಚ್ಚಿನ ಒತ್ತುಕೊಟ್ಟರು. ಸಮತೋಲನ ಆಡಳಿತ ಕೊಡುವ ಜ್ಞಾನ ವಿವೇಚನೆ ಅವರಲ್ಲಿತ್ತು. ಗ್ರಾಮೀಣ ಪ್ರದೇಶದ ಬಡವರು ಕೂಲಿ ಹುಡುಕಿಕೊಂಡು ಗುಳೆ ಹೋಗಬಾರದೆನ್ನುವ ಕಾರಣಕ್ಕೆ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದರು. ಸರ್ವಪಲ್ಲಿ ಡಾ.ರಾಧಾಕೃಷ್ಣನ್, ಅಬ್ದುಲ್ ಕಲಾಂ. ಡಾ.ಮನಮೋಹನಸಿಂಗ್ ಇವರನ್ನು ಎಲ್ಲರೂ ನೆನಪಿಸಿಕೊಳ್ಳಲೇಬೇಕು ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರೊ.ಎಚ್.ಜಿ.ದೇವರಾಜ್, 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಶ್ರೇಷ್ಟ ಆರ್ಥಿಕ ತಜ್ಞ, ಚಿಂತಕರಾಗಿದ್ದರು. ಅವರನ್ನು ಪ್ರಧಾನಿ ಎನ್ನುವುದಕ್ಕಿಂತ ಮಿಗಿಲಾಗಿ ಅವರೊಬ್ಬ ಆರ್ಥಿಕ ಸುಧಾರಕ. ಸರಳ ವ್ಯಕ್ತಿತ್ವದ ಜ್ಞಾನ ಭಂಡಾರವಾಗಿದ್ದರು. 8 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅವರು ಕೇಂದ್ರದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು. ಯುಜಿಸಿ ಚೇರ್ಮನ್ ಕೂಡ ಆಗಿದ್ದರು ಎಂದು ಸ್ಮರಿಸಿದರು.
ಡಾ.ಸಿ.ಶಿವಲಿಂಗಪ್ಪ ಮಾತನಾಡಿ, ನಿವೃತ್ತ ಪ್ರಾಧ್ಯಾಪಕರು ಮಾನಸಿಕವಾಗಿ ಸುಸ್ಥಿರವಾಗಿದ್ದಾರೆಂದರೆ ಅದಕ್ಕೆ ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್ ಕಾರಣ. ಆರ್ಥಿಕ ಆಯಾಮಗಳಲ್ಲಿ ಸಿಂಗ್‍ರವರಲ್ಲಿದ್ದ ಚಿಂತನೆ ಪ್ರಧಾನವಾಗಿತ್ತು. ಸಮಾಜವಾದದ ಆರ್ಥಿಕ ಚಿಂತನೆಯನ್ನು ಮೂಲ ದ್ರವ್ಯವಾಗಿಟ್ಟುಕೊಂಡಿದ್ದರು. ಪರಿಶುದ್ಧ ರಾಜಕಾರಣಿ. ಹಾಗಾಗಿ ಅವರೊಬ್ಬ ಪ್ರಧಾನಿ ಎನ್ನುವುದಕ್ಕಿಂತ ಆರ್ಥಿಕ ಜ್ಞಾನಿಯಾಗಿದ್ದರು. ಭ್ರಷ್ಟಾಚಾರದ ಸೋಂಕು ಹತ್ತಿರಕ್ಕೆ ಸುಳಿಯಲು ಬಿಡಲಿಲ್ಲ ಎಂದು ಹೇಳಿದರು.
ಡಾ.ಎಂ.ಕೆ.ಪ್ರಭುದೇವ್ ಮಾತನಾಡಿ, ಡಾ.ಮನಮೋಹನ್‍ಸಿಂಗ್ ಮಾತು ಬೆಳ್ಳಿ, ಮೌನ ಬಂಗಾರ ಎನ್ನುವ ಗುಣದವರು. ಶಿಕ್ಷಣ, ಸಾಮಾಜಿಕ, ಆರ್ಥಿಕ ತಜ್ಞರಾಗಿದ್ದರು. ಸವಾಲು ಸಮಸ್ಯೆಗಳ ನಡುವೆಯೆ ಎರಡು ಬಾರಿ ದೇಶದ ಪ್ರಧಾನಿಯಾಗಿ ಆರ್ಥಿಕ ಸಮತೋಲನವನ್ನು ಸುಸ್ಥಿತಿಯಲ್ಲಿಟ್ಟವರು ಎಂದರು.