ವಿರೋಧ ಪಕ್ಷದವರು ಕೇಂದ್ರದಿಂದ ಬರ ಪರಿಹಾರ ತಂದು ಬಡವರಿಗೆ ಹಾಗೂ ರೈತರಿಗೆ ಸಹಾಯ ಮಾಡಲು ಮುಂದಾಗಬೇಕೆ ಹೊರತು ಬಾಯಿಗೆ ಬಂದಂತೆ ಟೀಕೆ ಮಾಡಬಾರದು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಅವರು ವಾಗ್ದಾಳಿ ನಡೆಸಿದರು.
ಹೊನ್ನಾವರ: ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ವಿಳಂಬವಾಗಿದ್ದು, ಪ್ರಸ್ತುತ 6ನೇ ವರ್ಷಕ್ಕೆ ಕಾಲಿಟ್ಟಿದೆ. ಕಾನೂನು ತೊಡಕುಗಳು ಹಾಗೂ ಮೀಸಲಾತಿ ಗೊಂದಲಗಳಿಂದ ಚುನಾವಣೆ ವಿಳಂಬವಾಗಿವೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಗೇರುಸೊಪ್ಪ ಗುತ್ತಿಕನ್ನಿಕಾ ಪರಮೇಶ್ವರಿ, ಜಲವಳಕರ್ಕಿಯ ಶಿವಮ್ಮಯಾನೆ, ಗುಣವಂತೆ, ಜೀನ್ನೋಡ ಸೇರಿದಂತೆ ದೇವಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹಾಗೂ ನ್ಯಾಯಾಲಯದ ಪ್ರಕ್ರಿಯೆಗಳು ಅಕ್ಟೋಬರ್ 29ರೊಳಗೆ ಸ್ಪಷ್ಟಗೊಳ್ಳಲಿವೆ. ಯಾರು ಬೇಕಾದರೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆದರೆ, ನಮ್ಮ ಸರ್ಕಾರ ಚುನಾವಣೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.ರಾಜ್ಯದಲ್ಲಿ ಆರ್ಥಿಕ ನಿರ್ವಹಣೆ ಕುಂಠಿತಗೊಂಡಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಜನತೆ ನೆಮ್ಮದಿಯಿಂದಿದ್ದಾರೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಪ್ರಕೃತಿ ಸಹಜವಾಗಿದ್ದು, ಸರ್ಕಾರದಿಂದ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ವಿರೋಧ ಪಕ್ಷದವರು ಕೇಂದ್ರದಿಂದ ಬರ ಪರಿಹಾರ ತಂದು ಬಡವರಿಗೆ ಹಾಗೂ ರೈತರಿಗೆ ಸಹಾಯ ಮಾಡಲು ಮುಂದಾಗಬೇಕೆ ಹೊರತು ಬಾಯಿಗೆ ಬಂದಂತೆ ಟೀಕೆ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು. ಖರ್ವಾ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಧರ್ ನಾಯ್ಕ ಅವರ ನಿವಾಸಕ್ಕೆ ಭೇಟಿ ನೀಡಿದ ಮಂಕಾಳ ವೈದ್ಯರನ್ನು ಶ್ರೀಧರ್ ನಾಯ್ಕ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಭಟ್, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಧರ್ ನಾಯ್ಕ, ಐ.ವಿ. ನಾಯ್ಕ ನಗರೆ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ನಾಯ್ಕ, ಜಿಪಂ ಮಾಜಿ ಸದಸ್ಯ ಕೃಷ್ಣ ಗೌಡ ಹಾಗೂ ಗ್ರಾಮಸ್ಥರಾದ ಗಜಾನನ ನಾಯ್ಕ, ವೆಂಕಟ್ರಮಣ ನಾಯ್ಕ, ಮೋಹನ್ ನಾಯ್ಕ, ರಾಮಪ್ಪ ನಾಯ್ಕ, ಪ್ರಕಾಶ್ ಡಯಾಸ್, ರೋನಿ ಲೋಫೀಸ್, ರಾಮಕೃಷ್ಣ ನಾಯ್ಕ, ದಯಾ ನಾಯ್ಕ, ವೆಂಕಟೇಶ ನಾಯ್ಕ, ಲಕ್ಷ್ಮಣ ನಾಯ್ಕ, ಮಾರುತಿ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.