ಯಲ್ಲಾಪುರ: ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಸಬಲೀಕರಣದಿಂದಲೇ ಕುಟುಂಬ ಹಾಗೂ ಸಮಾಜದ ಪ್ರಗತಿ ಸಾಧ್ಯ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು.ಪಟ್ಟಣದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಯಲ್ಲಾಪುರ- ಮುಂಡಗೋಡ ತಾಲೂಕು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಮಹಿಳೆ ಸಬಲವಾದರೆ ಕುಟುಂಬ ಸಬಲ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಲ್ಲಿ ಉಳಿತಾಯ, ಆರ್ಥಿಕ ಶಿಸ್ತು ಮತ್ತು ಸ್ವಾವಲಂಬನೆಯ ಮನೋಭಾವ ಬೆಳೆಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ ಎಂದರು.
ಯಲ್ಲಾಪುರ- ಮುಂಡಗೋಡ ತಾಲೂಕಿನಲ್ಲಿ 25 ಜ್ಞಾನವಿಕಾಸ ಕೇಂದ್ರಗಳ ಮೂಲಕ 1,200ಕ್ಕೂ ಅಧಿಕ ಮಹಿಳೆಯರು ಸಂಪರ್ಕದಲ್ಲಿದ್ದು, ಆರೋಗ್ಯ, ಶಿಕ್ಷಣ, ಕಾನೂನು, ಆರ್ಥಿಕ ಸಾಕ್ಷರತೆ ಹಾಗೂ ಸ್ವಾವಲಂಬನೆ ಕುರಿತು ನಿರಂತರ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.ಮಹಿಳೆ ಸಬಲವಾದರೆ ಕುಟುಂಬ ಸಬಲ ವಿಷಯದ ಕುರಿತು ಉಪನ್ಯಾಸ ನೀಡಿದ ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಮಹಿಳೆಯ ಆತ್ಮವಿಶ್ವಾಸವೇ ಕುಟುಂಬದ ಶಕ್ತಿ. ಮಹಿಳೆ ಸಬಲವಾದರೆ ಕುಟುಂಭಕ್ಕೆ ಬಲ ಸಿಗುತ್ತದೆ. ಮಹಿಳೆಯರಲ್ಲಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮತ್ತು ಸ್ವಾವಲಂಬನೆ ಹೆಚ್ಚಿದಂತೆ ಕುಟುಂಬದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯೂ ಬಲಗೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದರು.ವಕೀಲೆ ಬಿಬಿ ಅಮೀನಾ ಅವರು, ಮಹಿಳೆಯರು ತಮ್ಮ ಹಕ್ಕುಗಳು ಮತ್ತು ಕಾನೂನುಗಳ ಕುರಿತು ಮೂಲಭೂತ ಜ್ಞಾನ ಹೊಂದಿರಬೇಕು ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಅವರು 2026- 27ನೇ ಸಾಲಿನ ಸುಜ್ಞಾನ ಶಿಷ್ಯವೇತನದ ಮಂಜೂರಾತಿ ಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ವಿಶ್ವದರ್ಶನ ಪಿಯು ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಗಾಂವ್ಕರ್ ಮಾತನಾಡಿ, ಮಹಿಳಾ ಸ್ವಾವಲಂಬನೆ, ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಆರ್ಥಿಕ ಶಿಸ್ತು ಸಮಾಜದ ಪ್ರಗತಿಗೆ ಪ್ರಮುಖ ಆಧಾರಗಳಾಗಿವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮುದಾ ವಹಿಸಿದ್ದರು. ವೀಣಾ ಒಸಿಮಠ ಉಪಸ್ಥಿತರಿದ್ದರು. ರಾಜೀವಿ ನಿರೂಪಿಸಿದರು. ಯೋಜನಾಧಿಕಾರಿ ಸಂತೋಷ್ ಸ್ವಾಗತಿಸಿದರು. ಸರಸ್ವತಿ ವಂದಿಸಿದರು. ಜ್ಞಾನವಿಕಾಸ ಕೇಂದ್ರಗಳ ಸದಸ್ಯರು, ಮಹಿಳಾ ಪ್ರತಿನಿಧಿಗಳು, ಯೋಜನೆಯ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.